ಮನೆ ಅಂತಾರಾಷ್ಟ್ರೀಯ ಕೆನಡಾದಲ್ಲಿ ಗಾಂಧೀಜಿ ಪ್ರತಿಮೆ ಧ್ವಂಸ: ಭಾರತ ಖಂಡನೆ

ಕೆನಡಾದಲ್ಲಿ ಗಾಂಧೀಜಿ ಪ್ರತಿಮೆ ಧ್ವಂಸ: ಭಾರತ ಖಂಡನೆ

0

ಒಟ್ಟಾವಾ: ಕೆನಡಾದ ರಿಚ್‌ಮಂಡ್ ಹಿಲ್‌ನಲ್ಲಿರುವ ಹಿಂದೂ ದೇವಾಲಯದಲ್ಲಿನ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ವಿರೂಪಗೊಳಿಸಿರುವ ಘಟನೆ ವರದಿಯಾಗಿದ್ದು, ಭಾರತ ಸದರಿ ಘಟನೆಯನ್ನು ಬಲವಾಗಿ ಖಂಡಿಸಿದೆ. ಭಾರತೀಯ ರಾಯಭಾರ ಕಚೇರಿ ಗುರುವಾರ ಘಟನೆ ಕುರಿತು ತಕ್ಷಣದ ತನಿಖೆಗೆ ಒತ್ತಾಯಿಸಿದೆ.

ಯೋಂಗ್ ಸ್ಟ್ರೀಟ್ ಮತ್ತು ಗಾರ್ಡನ್ ಅವೆನ್ಯೂ ಪ್ರದೇಶಗಳಲ್ಲಿನ ವಿಷ್ಣು ದೇವಾಲಯದಲ್ಲಿ ಐದು ಮೀಟರ್ ಎತ್ತರದ ಪ್ರತಿಮೆಯನ್ನು ಬುಧವಾರ ಧ್ವಂಸಗೊಳಿಸಲಾಗಿದೆ ಎಂದು ಸಿಬಿಸಿ ಯಾರ್ಕ್ ಪ್ರಾದೇಶಿಕ ಪೊಲೀಸರನ್ನು ಉಲ್ಲೇಖಿಸಿ ವರದಿ ಮಾಡಿದೆ. ಘಟನೆಗೆ ಕಾರಣ ಏನು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಯಾವುದೇ ರೀತಿಯ ದ್ವೇಷ-ಪೂರ್ವಾಗ್ರಹ ಪೀಡಿತ ಘಟನೆಯನ್ನು ಸಹಿಸುವುದಿಲ್ಲ ಎಂದು ಹೇಳಿರುವ ಯಾರ್ಕ್ ಪ್ರಾದೇಶಿಕ ಪೊಲೀಸರು, ‘ಜನಾಂಗ, ರಾಷ್ಟ್ರೀಯತೆ, ಭಾಷೆ, ಬಣ್ಣ, ಧರ್ಮ, ವಯಸ್ಸು, ಲಿಂಗದ ಆಧಾರದ ಮೇಲೆ ಇತರರಿಗೆ ನೋವನ್ನು ಉಂಟುಮಾಡುವವರ ವಿರುದ್ಧ ಗರಿಷ್ಠ ಪ್ರಮಾಣದಲ್ಲಿ ಕಾನೂನು ಕ್ರಮ ಜರುಗಿಸಲಾಗುತ್ತದೆ’ ಎಂದು ಯಾರ್ಕ್ ಪ್ರಾದೇಶಿಕ ಪೊಲೀಸ್ ವಕ್ತಾರ ಕಾನ್‌ಸ್ಟೆಬಲ್ ಆಮಿ ಬೌಡ್ರೊ  ತಿಳಿಸಿದ್ದಾರೆ.

ಕೆನಡಾದ ಟೊರಂಟೋ ನಗರದಲ್ಲಿರುವ ಭಾರತೀಯ ರಾಯಭಾರ ಕಚೇರಿ ಟ್ವೀಟ್ ಮಾಡಿದ್ದು, “ರಿಚ್ಮಂಡ್ ಹಿಲ್ನ ವಿಷ್ಣು ಮಂದಿರದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಯನ್ನು ವಿರೂಪಗೊಳಿಸಿದ ಘಟನೆ ಬಹಳ ನೋವು ತಂದಿದೆ. ಕೆನಡಾದಲ್ಲಿರುವ ಭಾರತೀಯ ಸಮುದಾಯದ ಭಾವನೆ ಈ ಘಟನೆಯಿಂದ ಘಾಸಿಗೊಂಡಿದೆ. ಈ ದ್ವೇಷ ಅಪರಾಧದ ತನಿಖೆ ನಡೆಸಲು ಕೆನಡಾ ಆಡಳಿತದ ಜೊತೆ ನಾವು ಸಂಪರ್ಕದಲ್ಲಿದ್ದೇವೆ” ಎಂದು ತಿಳಿಸಿದೆ.