ಮನೆ ರಾಜ್ಯ ಹಾಸನ: ದೋಣಿಗಾಲ್ ಬಳಿ ಭೂ ಕುಸಿತ- ಭಾರಿ ವಾಹನ ಸಂಚಾರ ನಿರ್ಬಂಧ

ಹಾಸನ: ದೋಣಿಗಾಲ್ ಬಳಿ ಭೂ ಕುಸಿತ- ಭಾರಿ ವಾಹನ ಸಂಚಾರ ನಿರ್ಬಂಧ

0

ಹಾಸನ(Hassan): ಸಕಲೇಶಪುರ ತಾಲ್ಲೂಕಿನ ದೋಣಿಗಾಲ್‌ ಬಳಿ ರಾಷ್ಟ್ರೀಯ ಹೆದ್ದಾರಿ 75 ರ ಕೆಳಭಾಗದಲ್ಲಿ ಗುರುವಾರ ಬೆಳಿಗ್ಗೆ ಮತ್ತೆ ಭೂಕುಸಿತ ಉಂಟಾಗಿದ್ದು, ಗುಂಡ್ಯದಿಂದ ಆಲೂರುವರೆಗೆ ಭಾರಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಕಲೇಶಪುರ ಉಪ ವಿಭಾಗಾಧಿಕಾರಿ ಪ್ರತೀಕ್‌ ಭಾಯಲ್‌, ಕೆಎಸ್‌ಆರ್‌ಟಿಸಿ ಬಸ್‌ಗಳು ಸೇರಿದಂತೆ ಪ್ರಯಾಣಿಕ ವಾಹನಗಳಿಗೆ ಸಂಚಾರಕ್ಕೆ ಅವಕಾಶವಿದೆ ಎಂದರು.

ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೇ ಇರುವುದು, ಮಣ್ಣಿನ ಸಂರಚನೆಯಿಂದಾಗಿ ಈ ಸ್ಥಳವನ್ನು ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿದೆ. ಕಳೆದ ವರ್ಷವೂ ಇಲ್ಲಿ ಭೂಕುಸಿತ ಉಂಟಾಗಿತ್ತು. ಈ ಬಾರಿಯೂ ಮಳೆ ಸುರಿಯುತ್ತಿರುವುದರಿಂದ ಮೇಲ್ಭಾಗದಿಂದ ನೀರು ಹರಿದು ಬರುತ್ತಿದೆ. ಚರಂಡಿ ವ್ಯವಸ್ಥೆ ಇಲ್ಲದೇ ಇರುವುದರಿಂದ ಭೂಕುಸಿತ ಉಂಟಾಗುತ್ತಿದೆ ಎಂದು ತಿಳಿಸಿದರು.

ಎಲ್ಲ ರೀತಿಯ ಭಾರಿ ಸರಕು ಸಾಗಣೆ ವಾಹನಗಳ ಸಂಚಾರವನ್ನು ಈ ಪ್ರದೇಶದಲ್ಲಿ ನಿರ್ಬಂಧಿಸಲಾಗಿದೆ. ಅಲ್ಲದೇ ಈ ಸ್ಥಳದಲ್ಲಿ ಚೆಕ್‌ಪೋಸ್ಟ್‌ ಮಾದರಿಯಲ್ಲಿ ಪೊಲೀಸರು, ಹೆದ್ದಾರಿ ಇಲಾಖೆಯ ಅಧಿಕಾರಿಗಳನ್ನು ನಿಯೋಜಿಸಲಾಗುವುದು. ಭೂಕುಸಿತ ಆಗುತ್ತಿರುವ ಸ್ಥಳದಲ್ಲಿ ಏಕಮುಖ ಸಂಚಾರ ಇರಲಿದೆ. ಒಂದು ಬದಿಯ ವಾಹನಗಳು ಸಾಗಿದ ನಂತರ ಇನ್ನೊಂದು ಬದಿಯ ವಾಹನಗಳು ಸಂಚರಿಸಲು ಅವಕಾಶ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಇದು ಸೂಕ್ಷ್ಮ ಪ್ರದೇಶವಾಗಿದ್ದು, ತಜ್ಞರ ಸಮಿತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಿದೆ. ಸಮಿತಿ ವರದಿ ನೀಡುವವರೆಗೆ ಈ ಸ್ಥಳದಲ್ಲಿ ಸಂಚಾರವನ್ನು ನಿಯಂತ್ರಿಸುವುದು ಅಗತ್ಯವಾಗಿದೆ ಎಂದ ಅವರು, ಭೂಕುಸಿತದಿಂದಾಗಿ ಇದುವರೆಗೆ ಯಾವುದೇ ಜೀವ, ಆಸ್ತಿ ಹಾನಿ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.

ಹಿಂದಿನ ಲೇಖನಶ್ರೀಲಂಕಾ ಸರ್ಕಾರದ ಅಧೀಕೃತ ಕಟ್ಟಡ ತೆರವು ಮಾಡಿದ ಪ್ರತಿಭಟನಾಕಾರರು
ಮುಂದಿನ ಲೇಖನಕೆನಡಾದಲ್ಲಿ ಗಾಂಧೀಜಿ ಪ್ರತಿಮೆ ಧ್ವಂಸ: ಭಾರತ ಖಂಡನೆ