ಮನೆ ವ್ಯಾಯಾಮ ಕೊಲೆಸ್ಟ್ರಾಲ್‌ ಕಡಿಮೆ ಮಾಡುವ ವ್ಯಾಯಾಮಾಗಳು

ಕೊಲೆಸ್ಟ್ರಾಲ್‌ ಕಡಿಮೆ ಮಾಡುವ ವ್ಯಾಯಾಮಾಗಳು

0

ಆರೋಗ್ಯವಾಗಿರಬೇಕೆಂದರೆ ದೇಹದಲ್ಲಿ ಕೊಲೆಸ್ಟ್ರಾಲ್‌ ಪ್ರಮಾಣ ಸ್ಥಿರವಾಗಿರಬೇಕು. ಅಧಿಕ ಕೊಲೆಸ್ಟ್ರಾಲ್‌ ಕಡಿಮೆ ಮಾಡಲು ಈ 5 ವ್ಯಾಯಾಮಗಳು ಹೆಚ್ಚು ಸಹಕಾರಿ.

ಸೈಕ್ಲಿಂಗ್‌

ಇಡೀ ದೇಹಕ್ಕೆ ಸೈಕ್ಲಿಂಗ್ ಅತ್ಯುತ್ತಮ ವ್ಯಾಯಾಮ ಎಂದು ಹೇಳಬಹುದು. ಅಧಿಕ ಕೊಲೆಸ್ಟ್ರಾಲ್, ಸ್ಥೂಲಕಾಯತೆ ಮತ್ತು ಹೃದಯದ ಸಮಸ್ಯೆ ಇರುವವರು ಪ್ರತಿದಿನ ಅರ್ಧ ಗಂಟೆ ಸೈಕಲ್ ತುಳಿಯುವುದು ಒಳ್ಳೆಯದು. ಇದು ಸಾಕಷ್ಟು ಕ್ಯಾಲೊರಿಗಳನ್ನು ಸುಡುವುದು ಮಾತ್ರವಲ್ಲದೆ ಇಡೀ ದೇಹವನ್ನು ಚಟುವಟಿಕೆಯಿಂದ ಕೂಡಿರುವಂತೆ ಮಾಡುತ್ತದೆ. ಅದಕ್ಕೆ ಬೇಕಾದ ಶಕ್ತಿಯನ್ನು ನಮ್ಮ ದೇಹದಲ್ಲಿರುವ ಕೊಲೆಸ್ಟ್ರಾಲ್ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ.

​ರನ್ನಿಂಗ್‌

ದೇಹ ಬೆವರಿದಂತೆ ಕೆಟ್ಟ ಕೊಲೆಸ್ಟ್ರಾಲ್‌ ಕರಗುತ್ತದೆ. ಅದಕ್ಕೆ ಉತ್ತಮ ವ್ಯಾಯಾಮ ಎಂದರೆ ಅದು ಓಟ. ದೇಹದಲ್ಲಿ ಹೆಚ್ಚುತ್ತಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ರನ್ನಿಂಗ್ ಹೆಚ್ಚು ಉಪಯುಕ್ತವಾಗಿದೆ. ಆರಂಭದಲ್ಲಿ ನೀವು ಹೆಚ್ಚು ವೇಗವಾಗಿ ಓಡದೆ 2 ಕಿಮೀವರೆಗೆ ಓಡಬಹುದು. ನಂತರ ವೇಗ ಮತ್ತು ದೂರ ಎರಡನ್ನೂ ಹೆಚ್ಚಿಸಿಕೊಳ್ಳಿ. ಇದು ಅಧಿಕ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ದೇಹದ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಸ್ವಿಮಿಂಗ್‌

ಪ್ರತಿದಿನ ಅರ್ಧಗಂಟೆ ಈಜನ್ನು ಅಭ್ಯಾಸ ಮಾಡುವುದರಿಂದ ಶರೀರದಲ್ಲಿ ರಕ್ತದ ಹರಿವು ಕೂಡ ಹೆಚ್ಚಾಗುತ್ತದೆ. ಅಲ್ಲದೆ ಸ್ನಾಯುಗಳು ಫಿಟ್‌ ಆಗುತ್ತವೆ. ಕೆಟ್ಟ ಕೊಲೆಸ್ಟ್ರಾಲ್‌ ಕರಗಿ ದೇಹ ಆರೋಗ್ಯವಾಗಿರುವಂತೆ ಈಜು ಮಾಡುತ್ತದೆ. ಅಲ್ಲದೆ ಬಹುಮುಖ್ಯವಾಗಿ ದೇಹದ ತೂಕ ಇಳಿಕೆಗೂ ಕೂಡ ಈಜು ಸಹಕಾರಿಯಾಗಿದೆ. ಆದ್ದರಿಂದ ಪ್ರತಿದಿನ ಈಜು ಅಭ್ಯಾಸ ಮಾಡುವುದನ್ನು ತಪ್ಪಿಸದಿರಿ. ಆದಷ್ಟು ಬೆಳಗ್ಗಿನ ಸಮಯದಲ್ಲಿ ಈಜಿನ ಅಭ್ಯಾಸವಿರಲಿ.

ವಾಕಿಂಗ್‌

ದೇಹದಲ್ಲಿನ ಕೊಬ್ಬು ಕರಗಲು ಅತಿ ಮುಖ್ಯವಾಗಿ ಹಾಗೂ ಸುಲಭವಾಗಿ ಮಾಡಬಹುದಾದ ವ್ಯಾಯಾಮ ಎಂದರೆ ಅದು ನಡಿಗೆ. ಇಡೀ ದೇಹಕ್ಕೆ ಅಗತ್ಯವಾದ ವ್ಯಾಯಾಮವನ್ನು ನಡಿಗೆ ನೀಡುತ್ತದೆ. ವಾಕಿಂಗ್ ಒಂದು ಮೂಲಭೂತ ವ್ಯಾಯಾಮವಾಗಿದ್ದು, ಅನಾರೋಗ್ಯ ಅಥವಾ ಅಧಿಕ ತೂಕ ಹೊಂದಿದ್ದರೂ ನಮ್ಮ ದೇಹವನ್ನು ತುಂಬಾ ಸಕ್ರಿಯವಾಗಿಡಲು ಅವಶ್ಯಕವಾಗಿದೆ. ಕೊಲೆಸ್ಟ್ರಾಲ್ ಸಮಸ್ಯೆಯಿರುವವರು ಸ್ವಲ್ಪ ಬೆವರು ಮತ್ತು ಕ್ಯಾಲೊರಿಗಳನ್ನು ಸುಡಲು ಪ್ರತಿದಿನವೂ ಚುರುಕಾದ ನಡಿಗೆಯನ್ನು ಅಭ್ಯಸಿಸಬೇಕು. ಪ್ರತಿದಿನ ಕನಿಷ್ಠ ಅರ್ಧಗಂಟೆಯಾದರೂ ವೇಗವಾಗಿ ನಡೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್‌ನ್ನು ಕರಗಿಸಬಹುದಾಗಿದೆ.

ಯೋಗಾಸನ

ಯೋಗ ಮಾಡುವಾಗ ದೇಹದ ರಕ್ತದ ಹರಿವು ಹೆಚ್ಚಾದಾಗ, ರಕ್ತನಾಳಗಳು ಮತ್ತು ಆಂತರಿಕ ಅಂಗಗಳಲ್ಲಿ ಕೊಲೆಸ್ಟ್ರಾಲ್ ಶೇಖರಣೆಯಾಗುವುದನ್ನು ತಡೆಯುತ್ತದೆ. ಅದರಲ್ಲೂ ಅಧಿಕ ಕೊಲೆಸ್ಟ್ರಾಲ್ ಇರುವವರು ಚಕ್ರಾಸನ, ಸಲಭಾಸನ, ಸರ್ವಾಂಗಾಸನ, ಪಶ್ಚಿಮೋತ್ಥಾನಾಸನ, ಅರ್ಧಮತ್ಸ್ಯೇಂದ್ರಾಸನಗಳನ್ನು ಮಾಡಿದರೆ ಒಳ್ಳೆಯದು.