ಮನೆ ಅಪರಾಧ ಕೊಲೆ ಅಪರಾಧಿ ಹತ್ಯೆಗೆ ಸಂಚು ರೂಪಿಸಿದ್ದ ಮೂವರ ಬಂಧನ

ಕೊಲೆ ಅಪರಾಧಿ ಹತ್ಯೆಗೆ ಸಂಚು ರೂಪಿಸಿದ್ದ ಮೂವರ ಬಂಧನ

0

ಮೈಸೂರು(Mysuru): ಕೊಲೆ ಅಪರಾಧಿ ಮಹಾದೇವಪುರದ ರವಿ ಅಲಿಯಾಸ್ ಜಾಂಬೂ ರವಿ  ಹತ್ಯೆಗೆ ಸಂಚು ರೂಪಿಸಿದ್ದ ಮೂವರನ್ನು ಮಂಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮೈಸೂರಿನ ಕನಕಗಿರಿ ನಿವಾಸಿಗಳಾದ ಅವಿನಾಶ್ ಅಲಿಯಾಸ್ ಅವಿ ಅಲಿಯಾಸ್ ಸೊಪ್ಪು (27), ಆನಂದ ಅಲಿಯಾಸ್ ಗೌಡ (22) ಮತ್ತು ಮಂಡಿ ಮೊಹಲ್ಲಾದ ಮಹಮ್ಮದ್ ಜುನೈದ್ (20) ಬಂಧಿತರಾಗಿದ್ದು, ಮಂಡಿಮೊಹಲ್ಲಾದ ದಿಲೀಪ್ ಎಂಬಾತ ಪರಾರಿಯಾಗಿದ್ದಾನೆ

ಘಟನೆ ವಿವರ: ಮಂಡಿ ಠಾಣೆ ಪೊಲೀಸರು ಜು.13ರಂದು ಮುಂಜಾನೆ 3.50ರ ಸುಮಾರಿನಲ್ಲಿ ಗಸ್ತಿನಲ್ಲಿದ್ದಾಗ ಮೈಸೂರಿನ ಖಾಸಗಿ ಬಸ್ ನಿಲ್ದಾಣದ ಬಳಿ ಹ್ಯುಂಡ್ಯೆ ಐ20 ಕಾರು (ಕೆಎ-04, ಎಂಹೆಚ್ 0651) ಅನುಮಾನಾಸ್ಪದವಾಗಿ ನಿಂತಿರುವುದು ಗಮನಿಸಿದ್ದು, ದೂರದಿಂದ ನೋಡಿದಾಗ ಕಾರಿನಲ್ಲಿದ್ದವರ ವರ್ತನೆ ಅಸಹಜವಾಗಿದ್ದ ಕಾರಣ ಗಸ್ತಿನಲ್ಲಿದ್ದ ಇಬ್ಬರು ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ಮತ್ತಿಬ್ಬರು ಪೊಲೀಸರನ್ನು ಕರೆಸಿಕೊಂಡು ಕಾರಿನ ಬಳಿ ತೆರಳಿದ್ದಾರೆ. ಪೊಲೀಸರನ್ನು ಕಂಡೊಡನೆ ಓರ್ವ ಓಡಿ ಹೋಗಿದ್ದು, ಉಳಿದ ಮೂವರನ್ನು ವಶಕ್ಕೆ ಪಡೆದುಕೊಂಡು ಪೊಲೀಸರು ಕಾರನ್ನು ತಪಾಸಣೆ ಮಾಡಲಾಗಿ ಅದರಲ್ಲಿ ಲಾಂಗ್ ಗಳು ಪತ್ತೆಯಾಗಿದೆ.

ತಕ್ಷಣವೇ ಠಾಣೆಯ ಇನ್ ಸ್ಪೆಕ್ಟರ್ ರಘು ಅವರಿಗೆ ಮಾಹಿತಿ ನೀಡಿದ ಪೊಲೀಸರು, ಕಾರಿನ ಸಮೇತ ಮೂವರನ್ನು ಠಾಣೆಗೆ ಕರೆದೊಯ್ದು ವಿಚಾರಣೆಗೆ ಒಳಪಡಿಸಿದಾಗ ಇವರು ಮಹದೇವಪುರದ ರವಿ ಅಲಿಯಾಸ್ ಜಾಂಜೂ ರವಿ ಎಂಬಾತನನ್ನು ಹತ್ಯೆ ಮಾಡಲು ಹುಡುಕುತ್ತಿದ್ದು, ಆತ ಈ ರಸ್ತೆಯಲ್ಲಿ ಬರುತ್ತಾನೆ ಎಂಬ ಮಾಹಿತಿ ಮೇರೆಗೆ ಮಾರಕಾಸ್ತ್ರಗಳೊಂದಿಗೆ ಕಾದು ಕುಳಿತ್ತಿದ್ದರು ಎಂದು ತಿಳಿದುಬಂದಿದೆ.

ಈ ವ್ಯಕ್ತಿಗಳು ಹತ್ಯೆ ಮಾಡಲು ಸಂಚು ರೂಪಿಸಿದ್ದ ರವಿ ಅಲಿಯಾಸ್ ಜಾಂಬೂ ರವಿ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ಕಳೆದ 9 ವರ್ಷದಿಂದ ಜೈಲಿನಲ್ಲಿದ್ದ. ಅನಾರೋಗ್ಯದ ಕಾರಣದಿಂದಾಗಿ ಹೈಕೋರ್ಟ್ ನಿಂದ ಜಾಮೀನು ಪಡೆದು, ಕಳೆದ 20 ದಿನಗಳ ಹಿಂದೆ ಹೊರಬಂದಿದ್ದಾನೆ. ಜೈಲಿನಿಂದ ಬಂದ ನಂತರ ಈತ ಅವಿನಾಶ್ ನನ್ನು ಹತ್ಯೆ ಮಾಡುವುದಾಗಿ ಬೆದರಿಸಿದ್ದ, ಹೀಗಾಗಿ ಆತನನ್ನೇ ಮುಗಿಸಲು ಬಂಧಿತರು ಸಂಚು ರೂಪಿಸಿದ್ದರು ಎಂಬುದು ವಿಚಾರಣೆ ವೇಳೆ ತಿಳಿದು ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬಂಧಿತರಲ್ಲಿ ಅವಿನಾಶ್ ಅಲಿಯಾಸ್ ಅವಿ ಅಲಿಯಾಸ್ ಸೊಪ್ಪು ಮೈಸೂರಿನ ಕೆಆರ್ ಮತ್ತು ವಿದ್ಯಾರಣ್ಯಪುರಂ ಪೊಲೀಸ್ ಠಾಣೆಗಳಲ್ಲಿ ಕೊಲೆ ಯತ್ನದ 5 ಪ್ರಕರಣಗಳಲ್ಲಿ ಆರೋಪಿಯಾಗಿದ್ದರೆ, ಆನಂದ ಅಲಿಯಾಸ್ ಗೌಡ ಕೆಆರ್ ಮತ್ತು ವಿದ್ಯಾರಣ್ಯಪುರಂ ಠಾಣೆಗಳಲ್ಲಿ 3 ಕೊಲೆ ಯತ್ನ ಹಾಗೂ ಒಂದು ಹಲ್ಲೆ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ರವಿ ವಿರುದ್ಧ ಕೆಆರ್ ಠಾಣೆಯಲ್ಲಿ ರೌಡಿಶೀಟ್ ತೆರೆಯಲಾಗಿದ್ದು, ಆನಂದ್ ವಿರುದ್ಧ ವಿದ್ಯಾರಣ್ಯಪುರಂ ಠಾಣೆಯಲ್ಲಿ ರೌಡಿಶೀಟ್ ತೆರೆಯಲಾಗಿದೆ. ಇವರೊಂದಿಗೆ ಬಂಧಿತನಾಗಿರುವ ಜುನೇದ್ ಕಾರು ಚಾಲಕನಾಗಿ ಬಂದಿದ್ದ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಪರಾರಿಯಾಗಿರುವ ದಿಲೀಪ್ ಈ ಹಿಂದೆ ಯಾವುದಾದರೂ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆಯೇ ಎಂಬುದರ ಬಗ್ಗೆ ತಿಳಿಯಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.