ಮನೆ ರಾಜಕೀಯ ಜೆಡಿಎಸ್ ಈಗ ಕುಟುಂಬದ ಪಕ್ಷವಾಗಿದೆ: ಚಲುವರಾಯಸ್ವಾಮಿ

ಜೆಡಿಎಸ್ ಈಗ ಕುಟುಂಬದ ಪಕ್ಷವಾಗಿದೆ: ಚಲುವರಾಯಸ್ವಾಮಿ

0

ಮೈಸೂರು: ಸ್ನೇಹಿತರನ್ನು ಬಿಟ್ಟು ಜೆಡಿಎಸ್ ಪಕ್ಷ ಈಗ ಕುಟುಂಬದ ಪಕ್ಷವಾಗಿದೆ. ಇತಿಹಾಸದ ಚರ್ಚೆ ಅವಶ್ಯಕತೆ ಇದ್ದರೆ ಆಹ್ವಾನ ಕೊಡುತ್ತೇನೆ, ವೇದಿಕೆ ಸಿದ್ದಪಡಿಸಲಿ ಎಂದು ಕೇಂದ್ರ ಸಚಿವ ಕುಮಾರಸ್ವಾಮಿಯವರಿಗೆ ಸಚಿವ ಚಲುವರಾಯಸ್ವಾಮಿ ಅವರು ಸವಾಲು ಹಾಕಿದ್ದಾರೆ.

Join Our Whatsapp Group

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಮೀರ್ ಹಾಗೂ ಆ ನಾಲ್ವರ ಜೊತೆ ಇದ್ದಿದ್ದು ನನ್ನ ಕರಾಳ ದಿನ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿದರು.

ನನಗೆ ಕುಮಾರಸ್ವಾಮಿಯಂತೆ ಮಾಧ್ಯಮದವರ ಮುಂದೆ ನಾಲಗೆ ಹರಿಬಿಡಲು ಸಾಧ್ಯವಿಲ್ಲ. ಅವರು ಚರ್ಚೆಗೆ ಬರುವುದಾದರೆ ಒಂದು ವೇದಿಕೆ ಸಿದ್ಧಮಾಡಿ. ಯಾರು ಹೊಲಸು, ಕಚಡ ಎಂದು ಚರ್ಚೆ ಮಾಡೋಣ. 20 ವರ್ಷ ಅವರ ಜತೆ ಇದ್ದೆವು, ಯಾರು ಸ್ನೇಹ ಬಿಟ್ಟರು ಎಂದು ಚರ್ಚಿಸೋಣ. ಸ್ನೇಹಿತರಿಂದಲೇ ಸಿಎಂ ಆದೇ ಎಂದು ಹೆಚ್​.ಡಿ. ಕುಮಾರಸ್ವಾಮಿ ಹೇಳಿದ್ದರು. ಆಗ ಅದು ಕರಾಳದಿನ ಆಗಿರಲಿಲ್ಲವಾ? ಅಷ್ಟು ದಿನ ಏಕೆ ಕೊಳಚೆ ವಾಸನೆ ಕುಡಿದಿದ್ದರು? ಎಂದು ಪ್ರಶ್ನಿಸಿದರು.

ಎಚ್​.ಡಿ. ಕುಮಾರಸ್ವಾಮಿ ಆ ರೀತಿ ಮಾತನಾಡಿದ್ದು ಎಷ್ಟು ಸರಿ? ಉತ್ತರ ಕೊಡುವುದು ಸೂಕ್ತ ಎಂದರೆ ಕೊಡುತ್ತೇನೆ. ಮಾತಿನಿಂದ ಯಾರೂ ದೊಡ್ಡವರು ಆಗುವುದಿಲ್ಲ, ನಡವಳಿಕೆಯಿಂದ ದೊಡ್ಡವರಾಗಬೇಕು. ಕೇಂದ್ರ ಸಚಿವ ಕುಮಾರಸ್ವಾಮಿಗೆ ಈಗಾಗಲೇ ಉತ್ತರ ಕೊಟ್ಟಿದ್ದೇನೆ. ಇತಿಹಾಸ ಚರ್ಚೆ ಮಾಡಬೇಕು ಅಂದರೆ ಸದನದಲ್ಲೇ ಚರ್ಚೆ ಮಾಡೋಣ ಎಂದು ಪಂಥಾಹ್ವಾನ ನೀಡಿದರು.

20 ವರ್ಷ ಕೊಳಚೆ ಒಳಗೆ ಇದ್ದರು. ಎದುರಿಗೆ ಬಂದರೆ ಅವರ ಇತಿಹಾಸ ಹೇಳ್ತೇನೆ. ನಾನು ಹೇಳಲು ತಯಾರು ಇದ್ದೇನೆ, ನನ್ನ ಸ್ನೇಹಿತರನ್ನೂ ಕರೆದುಕೊಂಡು ಬರುವೆ. ಅವರ ಸ್ನೇಹ ಬಿಟ್ಟ ನಂತರ ಇಲ್ಲಿಯವರೆಗೂ ಮಾತನಾಡಿಲ್ಲ, ಅವರ ಸಂಪರ್ಕವಿಲ್ಲ. ಜೆಡಿಎಸ್​ನವರು ರಾಜಕೀಯದಲ್ಲಿ ಬೊಮ್ಮಾಯಿ, ಪಟೇಲ್‌ರ ಜೊತೆ ಎಷ್ಟು ದಿನ ಇದ್ದರು? ಇವರದ್ದು ಕುಟುಂಬದ ಪಕ್ಷ ಆಗಿ ಉಳಿದಿದೆ. ಸಾಕಷ್ಟು ಇತಿಹಾಸ ಇದೆ, ಹೆಗಡೆ, ಜೆ.ಹೆಚ್‌. ಪಟೇಲ್‌ ಜೊತೆ ಎಷ್ಟು ದಿನ ಚೆನ್ನಾಗಿದ್ದರು? ಈ ಬಗ್ಗೆ ಅವರೇ ಹೇಳಲಿ, ಸದನದಲ್ಲಿ ಚರ್ಚೆಯಾದರೆ ಒಳ್ಳೆಯದು, ಬರಲು ಹೇಳಿ. ಒಂದು ವೇದಿಕೆ ನಿರ್ಮಾಣ ಮಾಡೋಣಾ, ಒಂದು ಸಮಯ ನಿಗದಿ ಮಾಡಿ. ನಾವು ಬರಲು ತಯಾರಿದ್ದೇವೆ, ಜನರಿಗೂ ಅಸಲಿ ಸಂಗತಿ ಗೊತ್ತಾಗಬೇಕು ಎಂದು ಸವಾಲು ಹಾಕಿದರು.