ಮನೆ ರಾಜ್ಯ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತಗ್ಗಿದ ಮಳೆ

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತಗ್ಗಿದ ಮಳೆ

0

ಬೆಂಗಳೂರು (Bengaluru): ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾನುವಾರ ಮಳೆ ತುಸು ಬಿಡುವು ನೀಡಿದೆ. ಬೆಳಗಾವಿ ಜಿಲ್ಲೆಯಲ್ಲಿ ಮಳೆ ಬಿಡುವು ನೀಡಿದೆ. ಆದರೆ, ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಮುಂದುವರಿದ ಪರಿಣಾಮ, ಜಿಲ್ಲೆಯಲ್ಲಿ ಹರಿಯುವ ನದಿಗಳ ನೀರಿನ ಮಟ್ಟ ಹೆಚ್ಚುತ್ತ ಸಾಗಿದೆ.

ವಿವಿಧ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದವರೂ ತಮ್ಮ ಮನೆಗಳಿಗೆ ವಾಪಸಾಗಿದ್ದಾರೆ. ಮಾರ್ಕಂಡೇಯ ನದಿ ಉಕ್ಕಿ ಹರಿಯುತ್ತಿದ್ದು, ತಾಲ್ಲೂಕಿನ ರಕ್ಕಸ ಕೊಪ್ಪ ಜಲಾಶಯ ಬಹುತೇಕ ಭರ್ತಿಯಾಗಿದೆ. 2,475 ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಈಗ 2,473.50 ಅಡಿ ನೀರಿದೆ. ಮುಂಜಾಗ್ರತಾ ಕ್ರಮವಾಗಿ ನದಿಗೆ ನೀರು ಹರಿಸಲಾಗುತ್ತಿದೆ. ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಸೇತುವೆ ಬಳಿ ಕೃಷ್ಣಾ ನದಿಗೆ 1,29,370 ಕ್ಯುಸೆಕ್‌ ನೀರು ಹರಿದು ಬರುತ್ತಿದೆ.

ಉತ್ತರ ಕನ್ನಡದಲ್ಲಿ ಮಳೆಯ ಅಬ್ಬರ ಕ್ಷೀಣಿಸಿತ್ತು. ಹೊನ್ನಾವರ ತಾಲ್ಲೂಕಿನ ಗುಂಡಬಾಳ, ಸಾಲ್ಕೋಡು ಹಳ್ಳಗಳು, ಕುಮಟಾ ತಾಲ್ಲೂಕಿನ ಅಘನಾಶಿನಿ ಹಾಗೂ ಅಂಕೋಲಾ ತಾಲ್ಲೂಕಿನ ಗಂಗಾವಳಿ ನದಿಗಳಲ್ಲಿ ಪ್ರವಾಹದ ಸ್ಥಿತಿ ದೂರವಾಗಿದೆ. ಸುತ್ತಮುತ್ತಲಿನ ಜಮೀನು, ಮನೆಗಳಿಂದಲೂ ನೀರು ಇಳಿದಿದೆ. ವಿವಿಧ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದವರೂ ತಮ್ಮ ಮನೆಗಳಿಗೆ ವಾಪಸಾಗಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಮಳೆಯ ಅಬ್ಬರ ತಗ್ಗಿದೆ. ಅಪಾಯದಲ್ಲಿದ್ದವರ ಮನವೊಲಿಸಿದ ಜಿಲ್ಲಾಡಳಿತ, 127 ಕುಟುಂಬಗಳ 452 ಮಂದಿಯನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಿದೆ. ಇದರಿಂದ ಕಾಳಜಿ ಕೇಂದ್ರದಲ್ಲಿರುವವರ ಸಂಖ್ಯೆ 602ಕ್ಕೆ ಏರಿದೆ. ಭಾಗಮಂಡಲ ಸೇರಿದಂತೆ ಅನೇಕ ಕಡೆ ನದಿ ನೀರಿನ ಮಟ್ಟದಲ್ಲಿ ಇಳಿಕೆಯಾಗುತ್ತಿದೆ. ಆದಾಗ್ಯೂ, ನಾಪೋಕ್ಲು– ಮೂರ್ನಾಡು ಸಂಪರ್ಕ ರಸ್ತೆಯ ಬೊಳಿಬಾಣೆಯಲ್ಲಿ ರಸ್ತೆ ಮೇಲೆ ನೀರು ಹರಿಯುತ್ತಿದೆ.

ಕಲಬುರಗಿ, ಬೀದರ್, ಯಾದಗಿರಿ ಹಾಗೂ ‌ಕೊಪ್ಪಳ ಜಿಲ್ಲೆಗಳಲ್ಲಿ ಮಳೆ ಸುರಿಯಿತು. ಕಲಬುರಗಿ ನಗರ ಸೇರಿದಂತೆ ಅಫಜಲಪುರ, ಚಿತ್ತಾಪುರ, ಕಮಲಾಪುರ, ಕಾಳಗಿ, ಯಡ್ರಾಮಿ ತಾಲ್ಲೂಕಿನ ಹಲವೆಡೆ ಮಳೆಯಾಗಿದೆ. ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿ 20 ನಿಮಿಷ ಮಳೆ ಸುರಿದಿದೆ. ಕೊಪ್ಪಳ ನಗರ ಮತ್ತು ಯಲಬುರ್ಗಾದಲ್ಲಿ ಜಿಟಿಜಿಟಿ ಮಳೆಯಾಗಿದೆ. ಯಾದಗಿರಿ,ಶಹಾಪುರದಲ್ಲಿಯೂ ಮಳೆಯಾಯಿತು.