ಬೆಂಗಳೂರು(Bengaluru): ಜೈ ಭೀಮ್ ಮತ್ತು ಜನ ಗಣ ಮನ ಎರಡು ಸಿನಿಮಾಗಳು ಸೂಕ್ಷ್ಮ ಕಥಾಹಂದರದ ಸಿನಿಮಾಗಳಾಗಿದ್ದು ನನ್ನ ಮನಸ್ಸನ್ನು ಕಲಕಿದೆ ಮತ್ತು ತೀವ್ರ ತಳಮಳಕ್ಕೆ ಕಾರಣವೂ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಜೆಡಿಎಸ್ ನಾಯಕ ಹೆಚ್. ಡಿ. ಕುಮಾರಸ್ವಾಮಿ ಅವರು ಕೋವಿಡ್ ಸೋಂಕಿಗೆ ಒಳಗಾಗಿದ್ದು ಕಳೆದೊಂದು ವಾರದಿಂದ ಮನೆಯಲ್ಲಿಯೇ ಚಿಕಿತ್ಸೆ ಪಡೆದಿದ್ದರು. ಈ ಸಂದರ್ಭದಲ್ಲಿ ಪುಸ್ತಕ ಓದುವುದಕ್ಕೆ ಮತ್ತು ಸಿನಿಮಾ ವೀಕ್ಷಣೆಯಲ್ಲಿ ತಮ್ಮ ಸಮಯವನ್ನು ಕಳೆದಿದ್ದು, ಈ ನಡುವೆ ಜೈ ಭೀಮ್ ಮತ್ತು ಜನ ಗಣ ಮನ ಸಿನಿಮಾವನ್ನು ವೀಕ್ಷಿಸಿದ್ದು, ಇವೆರಡು ಚಿತ್ರಗಳು ಕುರಿತು ತಮ್ಮ ಅಭಿಪ್ರಾಯವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಾದ ರಮಣ ಅವರು ವಿಚಾರಣಾಧೀನ ಕೈದಿಗಳ ದುಸ್ಥಿತಿಯ ಬಗ್ಗೆ ಜೈಪುರದಲ್ಲಿ ನೀಡಿದ್ದ ಹೇಳಿಕೆ ಜೈ ಭೀಮ್ ಚಿತ್ರದಲ್ಲಿ ಅದೇ ಕೈದಿಗಳ ಸುತ್ತ ಬಿಚ್ಚಿಕೊಳ್ಳುವ ಕಠೋರ ಕಹಿ ಸತ್ಯಗಳ ಬಗ್ಗೆ ಇಡೀ ಭಾರತವೇ ಆಲೋಚಿಸಬೇಕು. ನಾನು ಆಲೋಚಿಸುತ್ತಿದ್ದೇನೆ, ಬದಲಾವಣೆಗೆ ಖಂಡಿತ ಪ್ರಯತ್ನಿಸುತ್ತೇನೆ. ಭಾರತೀಯ ನ್ಯಾಯ ವ್ಯವಸ್ಥೆ ಬಡವರು ದಲಿತರು ಆಶಕ್ತರಿಗೆ ಗಗನಕುಸುಮವಾ ? ಓರ್ವ ಸಿರಿವಂತ ಅಪರಾಧಿಗೆ ಕೆಳಗಡೆ ಜಾಮೀನು ಸಿಕ್ಕಿದರೆ, ಅದೇ ಬಡ ಅಪರಾಧಿಗಳ ( ಅನೇಕ ಪ್ರಕರಣಗಳಲ್ಲಿ ಮುಗ್ಧರು) ಆರ್ತಿಗಳಿಗೆ ಮೋಕ್ಷವೇ ಕಾಣುವುದಿಲ್ಲ ಸರಳುಗಳ ಹಿಂದಿನ ನರಕವನ್ನು ಜೈ ಭೀಮ್ ನೈಜವಾಗಿ ತೋರಿಸಿದೆ ಎಂದು ಹೇಳಿದ್ದಾರೆ.
ಮುಖ್ಯ ನ್ಯಾಯಮೂರ್ತಿಗಳು ಹೇಳಿತು ಇದನ್ನೇ ವಿಚಾರಣೆಗೆ ಇಲ್ಲದೆ ಕೈದಿಗಳ ದೀರ್ಘಾವಧಿ ಸೆರೆ ಪ್ರಶ್ನಾರ್ಹ. ನಮ್ಮ ದೇಶದಲ್ಲಿ ಸೆರೆವಾಸದಲ್ಲಿರುವ 6.10 ಲಕ್ಷ ಕೈದಿಗಳಲ್ಲಿ ಶೇಕಡ 80% ಜನ ವಿಚಾರಣಾಧೀನ ಕೈದಿಗಳೇ!! ಇವರೆಲ್ಲರೂ ವಿಚಾರಣೆ ಪೂರ್ಣಗೊಳ್ಳದೆ ಕಂಬಿಗಳ ಹಿಂದೆ ಜೀವಶ್ಚವಗಳಂತೆ ಬದುಕುತ್ತಿದ್ದಾರೆ. 2017 ರಲ್ಲಿ ಛತ್ತೀಸ್ಗಡದಲ್ಲಿ ಸಿಆರ್ಪಿಎಫ್ ಜವಾನರ ಮೇಲೆ ನಡೆದ ದಾಳಿ ಪ್ರಕರಣದಲ್ಲಿ 121 ಬಡಕಟ್ಟು ಜನರನ್ನು ಬಂಧಿಸಲಾಗಿತ್ತು ಐದು ವರ್ಷ ಅವರು ಜೈಲುಗಳಲ್ಲಿ ನರಕ ಅನುಭವಿಸಿದರು. ಕೊನೆಗೆ ಅವರ ಪಾತ್ರದ ಬಗ್ಗೆ ಸಾಕ್ಷ್ಯ ಇಲ್ಲ ಎಂದು ಎನ್ ಐಎ ಕೋರ್ಟ್ ತೀರ್ಪು ನೀಡಿ ಆ ಮುಗ್ದರನ್ನು ಖುಲಾಸೆಗೊಳಿಸಿದೆ ಇದು ಸಮಾಧಾನ ಸಂಗತಿ. ಹಾಗಾದರೆ, 5 ವರ್ಷಗಳ ಅವರ ಸೆರೆವಾಸಕ್ಕೆ ಉತ್ತರದಾಯಿಗಳು ಯಾರು? ಅವರ ಕುಟುಂಬ ಸದಸ್ಯರು ಅನುಭವಿಸಿದ ಕಷ್ಟಕ್ಕೆ ಪರಿಹಾರವೇನು? ಎಂದು ಪ್ರಶ್ನಿಸಿದ್ದಾರೆ.
ಆತುರಗೆಟ್ಟ ಆರೋಪ ಪಟ್ಟಿ, ವಿವೇಚನೆ ಇಲ್ಲದ ಬಂಧನ, ಜಾಮೀನು ಪಡೆಯಲು ಹೆಣಗಾಟದ ಕರಾಳತೆಯ ಮೇಲೆ ʼಜೈ ಭೀಮ್ʼ ಬೆಳಕು ಚೆಲ್ಲಿದೆ. ಮಾನ್ಯ ಮುಖ್ಯ ನ್ಯಾಯಮೂರ್ತಿಗಳು ಇದನ್ನೇ ಹೇಳಿ ಕಳವಳ ವ್ಯಕ್ತಪಡಪಡಿಸಿದ್ದಾರೆ.
ಅವರ ದನಿ ದೇಶಕ್ಕೇ ಕೇಳಿಸಿದೆ. ಹಾಗಾದರೆ, ನಾವು ಬದಲಾಗುವುದು ಯಾವಾಗ? ಸುಧಾರಣೆಗಳು ಎಂದು? ನಾನು ಪ್ರಾಮಾಣಿಕವಾಗಿ ಪ್ರಯತ್ನಿಸುವೆ. ಸಂವಿಧಾನ ನಮಗೆ ಶ್ರೇಷ್ಠ ನ್ಯಾಯಾಂಗವನ್ನು ಕೊಟ್ಟಿದೆ. ಕಷ್ಟ ಎದುರಾದಾಗ ಬಿಲಿನಿಯರ್ʼನಿಂದ ಕಟ್ಟಕಡೆಯ ಬಡಪ್ರಜೆವರೆಗೂ ಎಲ್ಲರೂ ಕೋರ್ಟ್ ಕಡೆ ನೋಡುತ್ತಾರೆ. ಎಲ್ಲರೂ ಇಲ್ಲಿ ಸಮಾನರು. ಅದು ಹಕ್ಕು ಹೌದು. ತಮಿಳುನಾಡಿನ ಕಡಲೂರಿನಲ್ಲಿ ನಡೆದ ನೈಜ ಘಟನೆ ಆಧರಿಸಿದ ‘ಜೈ ಭೀಮ್’ ಚಿತ್ರ ಮನುಷ್ಯತ್ವಕ್ಕೇ ಸವಾಲೆಸೆಯುವ ಅನೇಕ ಪ್ರಶ್ನೆಗಳನ್ನು ಎತ್ತಿದೆ.
ʼಜನ ಗಣ ಮನʼ ಚಿತ್ರ ಇವತ್ತಿನ ರಾಜಕೀಯ ಕಪಟತೆ, ಕುಟಿಲತೆ, ಲಂಪಟತೆಯನ್ನು ಮನೋಜ್ಞವಾಗಿ ತೆರೆದಿಟ್ಟಿದೆ. ರಾಜಕೀಯದ ಕಪಿಮುಷ್ಠಿಗೆ ಸಿಲುಕಿ ನರಳುವ ವ್ಯವಸ್ಥೆಯ ಅಸಹಾಯಕ ಮುಖದ ದರ್ಶನ ಮಾಡಿಸಿದೆ. ವ್ಯವಸ್ಥೆಗೆ ಕನ್ನಡಿಯಂತಿರುವ ಸಿನಿಮಾಗಳು ಆವೇಶಕ್ಕೆ, ಆಲೋಚನೆಗೆ ದೂಡುತ್ತವೆ. ಎರಡೂ ಚಿತ್ರಗಳ ನಿರ್ದೇಶಕರು ಅಭಿನಂದನಾರ್ಹರು ಎಂದು ಚಿತ್ರಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.