ಮನೆ ಸುದ್ದಿ ಜಾಲ ಹಾವೇರಿ: ಮಾಜಿ ಸಚಿವ ಮನೋಹರ ತಹಶೀಲ್ದಾರ ವಿಧಿವಶ

ಹಾವೇರಿ: ಮಾಜಿ ಸಚಿವ ಮನೋಹರ ತಹಶೀಲ್ದಾರ ವಿಧಿವಶ

0

ಹಾವೇರಿ: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಸಚಿವ ಮನೋಹರ್ ತಹಶೀಲ್ದಾರ್ (80) ಚಿಕಿತ್ಸೆ ಫಲಿಸದೇ ಬೆಂಗಳೂರಿನ ಚಾಮರಾಜಪೇಟೆಯ ಶಂಕರ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

Join Our Whatsapp Group

1978ರಲ್ಲಿ ಮೊದಲ ಬಾರಿಗೆ ಹಾನಗಲ್ಲ ವಿಧಾನಸಭೆ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದ ಮನೋಹರ್‌ ತಹಶೀಲ್ದಾರ್‌ ಅವರು 1989, 1999, 2013 ಸೇರಿ 4 ಬಾರಿ ಗೆಲುವು ಸಾಧಿಸಿದ್ದರು.

ಬಲಿಜ ಸಮುದಾಯಕ್ಕೆ ಸೇರಿದ್ದ ತಹಶೀಲ್ದಾರ್‌ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಗಳಾಗಿದ್ದ ವೇಳೆ ವಿಧಾನಸಭೆ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

2015ರಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಬಕಾರಿ ಸಚಿವರಾಗಿದ್ದ ಇವರು 2023ರ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗದ ಕಾರಣ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದರು. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದರು.

ಅನಾರೋಗ್ಯನ ಹಿನ್ನೆಲೆಯಲ್ಲಿ ಮನೋಹರ ತಹಶೀಲ್ದಾರ ಅವರು ಬೆಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರಿಂದ ಇತ್ತೀಚಿಗೆ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯದ ಬಗ್ಗೆ ವಿಚಾರಣೆ ನಡೆಸಿದ್ದರು.

ಮನೋಹರ ತಹಶೀಲ್ದಾರ ಅವರು ಮೂವರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗ, ಕಾರ್ಯಕರ್ತರು, ಅಭಿಮಾನಿಗಳನ್ನು ಅಗಲಿದ್ದಾರೆ.

ಸಾರ್ವಜನಿಕರ ದರ್ಶನಕ್ಕೆ ಅವಕಾಶ..

ಮಾಜಿ ಸಚಿವ ಮನೋಹರ ತಹಶೀಲ್ದಾರ ಅವರ ಪಾರ್ಥಿವ ಶರೀರವನ್ನು ಇಂದು ಮಧ್ಯಾಹ್ನ 12 ಗಂಟೆಯಿಂದ ಹಾನಗಲ್ಲ ಪಟ್ಟಣದ ಎನ್‌ಸಿಜೆಸಿ ಮಹಾವಿದ್ಯಾಲಯ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತದೆ. ಬಳಿಕ ಹುಟ್ಟೂರಾದ ಅಕ್ಕಿಹೊಳಿ ಗ್ರಾಮದಲ್ಲಿರುವ ತೋಟದ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಸಲು ಸಿದ್ಧತೆ ಕೈಗೊಳ್ಳಲಾಗುತ್ತಿದೆ.