ಮನೆ ಕಾನೂನು ಮಾಹಿತಿ ನೀಡದಿರುವುದಕ್ಕೆ ಸಕಾರಣವಿದ್ದಾಗ ಪಿಐಒಗೆ ದಂಡ ವಿಧಿಸುವಂತಿಲ್ಲ: ಕರ್ನಾಟಕ ಹೈಕೋರ್ಟ್‌

ಮಾಹಿತಿ ನೀಡದಿರುವುದಕ್ಕೆ ಸಕಾರಣವಿದ್ದಾಗ ಪಿಐಒಗೆ ದಂಡ ವಿಧಿಸುವಂತಿಲ್ಲ: ಕರ್ನಾಟಕ ಹೈಕೋರ್ಟ್‌

0

ಬೆಂಗಳೂರು(Bengaluru): ಮಾಹಿತಿ ಹಕ್ಕು ಕಾಯಿದೆಯಡಿ ಕೋರಿದ ಮಾಹಿತಿ ನೀಡದಿರುವುದಕ್ಕೆ ಸಕಾರಣಗಳು ಇದ್ದಾಗ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ದಂಡ ವಿಧಿಸುವುದು ಸರಿಯಲ್ಲ ಎಂದು ಹೈಕೋರ್ಟ್‌ ಆದೇಶಿಸಿದೆ.

ಅಲ್ಲದೆ, ಮಾಹಿತಿ ನೀಡದ್ದಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ 10 ಸಾವಿರ ರೂ. ದಂಡ ವಿಧಿಸಿ ಕರ್ನಾಟಕ ಮಾಹಿತಿ ಆಯೋಗ ನೀಡಿದ್ದ ಆದೇಶ ರದ್ದುಗೊಳಿಸಿದೆ. ಡಿಸಿಎಫ್‌ ಅಂಬಾಡಿ ಮಾಧವ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ.ಸಿ.ಎಂ ಪೂಣಚ್ಚ ಅವರಿದ್ದ ಏಕಸದಸ್ಯಪೀಠ ಮಾನ್ಯ ಮಾಡಿ ಈ ಆದೇಶ ಹೊರಡಿಸಿದೆ.

ಪ್ರಕರಣದ ದಾಖಲೆ ಪರಿಶೀಲಿಸಿದಾಗ ಮಾಹಿತಿ ನೀಡುವಲ್ಲಿ ಸ್ವಲ್ಪ ವಿಳಂಬವಾಗಿರುವುದು ಸ್ಪಷ್ಟವಾದರೂ, ಅರ್ಜಿದಾರರು ಏಕೆ ವಿಳಂಬವಾಯಿತು ಎನ್ನುವುದಕ್ಕೆ ಸಕಾರಣ ನೀಡಿದ್ದಾರೆ. ಹಾಗಾಗಿ ಪ್ರಕರಣ ರದ್ದುಗೊಳಿಸಲಾಗುತ್ತಿದೆ ಎಂದು ನ್ಯಾಯಪೀಠ ಹೇಳಿದೆ.

ವಾದ-ಪ್ರತಿವಾದ ಆಲಿಸಿದ ಬಳಿಕ ಪ್ರತಿವಾದಿಗಳು ಕೋರಿದ್ದ ಮಾಹಿತಿಯನ್ನು ಅರ್ಜಿದಾರರು ಒದಗಿಸಿದ್ದಾರೆ. ಆದರೆ, ಅದನ್ನು ಒದಗಿಸುವಲ್ಲಿ ವಿಳಂಬವಾಗಿದೆ. ಅದು ಉದ್ದೇಶಪೂರ್ವಕವಲ್ಲ. ಹಾಗಾಗಿ, ಅರ್ಜಿ ಪುರಸ್ಕರಿಸಲಾಗುತ್ತಿದೆ ಎಂದು ಹೇಳಿರುವ ನ್ಯಾಯಪೀಠ, ನೈಜ ಉದ್ದೇಶ ಅಥವಾ ಸಕಾರಣಗಳಿಂದಾಗಿ ಮಾಹಿತಿ ನೀಡುವುದು ವಿಳಂಬವಾದರೆ ಅಂತಹ ವೇಳೆ ಪಿಐಒಗಳನ್ನು ದಂಡಿಸುವುದು ಸಮಂಜಸವಲ್ಲ ಎಂದು ಆದೇಶಿಸಿದೆ.

ಬೆಂಗಳೂರಿನ ಸಂಪಂಗಿ ರಾಮ ನಗರದ ಸಾಮಾಜಿಕ ಕಾರ್ಯಕರ್ತ ಎ.ಆರ್‌ ಶಶಿಕುಮಾರ್‌ 2011ರ ಜ.19ರಂದು ಸಕಲೇಶಪುರದ ಆಲೂರು ಸುತ್ತಮುತ್ತ ಆಗುತ್ತಿನ ಆನೆಗಳ ಹಾವಳಿ, ಗ್ರಾಮಸ್ಥರು ನೀಡಿರುವ ಮನವಿ, ಆನೆಗಳ ಸಂರಕ್ಷಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಕೋರಿದ್ದರು. ಆ ಮಾಹಿತಿ ನೀಡಲು ಅರ್ಜಿದಾರರು ಅಗತ್ಯ ಹಣ ಪಾವತಿಸಿರಲಿಲ್ಲ. ಆನಂತರ ಹಣ ಪಡೆದು ತಡವಾಗಿ ಮಾಹಿತಿ ಒದಗಿಸಲಾಗಿತ್ತು. ಅದನ್ನು ಪ್ರಶ್ನಿಸಿ ಅರ್ಜಿದಾರರು ಮಾಹಿತಿ ಹಕ್ಕು ಆಯೋಗದ ಮೊರೆ ಹೋದಾಗ, ಆಯೋಗ ಮಾಹಿತಿ ನೀಡುವುದು ತಡವಾಗಿದ್ದ ಪಿಐಒ ಆಗಿದ್ದ ಡಿಸಿಎಫ್‌ ಗೆ 10 ಸಾವಿರ ರೂ. ದಂಡ ವಿಧಿಸಿತ್ತು. ಅದನ್ನು ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.