ಮನೆ ಅಂತಾರಾಷ್ಟ್ರೀಯ ಶ್ರೀಲಂಕಾಗೆ ರಾನಿಲ್​ ವಿಕ್ರಮಸಿಂಘೆ ನೂತನ ಅಧ್ಯಕ್ಷ

ಶ್ರೀಲಂಕಾಗೆ ರಾನಿಲ್​ ವಿಕ್ರಮಸಿಂಘೆ ನೂತನ ಅಧ್ಯಕ್ಷ

0

ಕೊಲಂಬೋ(Colombo): ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾದಲ್ಲಿ ಭಾರಿ ಭದ್ರತೆಯ ಮಧ್ಯೆ ಇಂದು ದೇಶದ ನೂತನ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆದಿದ್ದು, ಹಂಗಾಮಿ ಅಧ್ಯಕ್ಷರಾಗಿದ್ದ ರಾನಿಲ್​ ವಿಕ್ರಮಸಿಂಘೆ ರಾಷ್ಟ್ರದ 9ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಕಣದಲ್ಲಿದ್ದ ಸಂಸದರಾದ ಡಲ್ಲಾಸ್ ಅಲಹೆಪ್ಪುರುಮಾ ಮತ್ತು ಅನುರಾ ಕುಮಾರಾ ಡಿಸ್ಸನಾಯಕೆ ಸೋಲು ಅನುಭವಿಸಿದ್ದಾರೆ.

ಶ್ರೀಲಂಕಾದ ಹಿಂದಿನ ಅಧ್ಯಕ್ಷ ಗೊಟಬಯ ರಾಜಪಕ್ಸ ವಿರುದ್ಧ ಜನರು ದಂಗೆ ಎದ್ದ ಕಾರಣ ದೇಶ ಬಿಟ್ಟು ಪರಾರಿಯಾಗಿದ್ದಲ್ಲದೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಬಳಿಕ ರಾನಿಲ್​​ ವಿಕ್ರಮಸಿಂಘೆ ಹಂಗಾಮಿ ಅಧ್ಯಕ್ಷರಾಗಿದ್ದರು.ಇಂದು ಸಂಸತ್ತಿನಲ್ಲಿ ಬಿಗಿ ಬಂದೋಬಸ್ತ್​ನಲ್ಲಿ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ವಿಕ್ರಮಸಿಂಘೆಗೆ ಅಧಿಕ ಮತಗಳು ಬಿದ್ದವು.

ಇನ್ನುಳಿದಂತೆ ಡಲ್ಲಾಸ್ ಅಲಹೆಪ್ಪುರುಮಾ ಮತ್ತು ಅನುರಾ ಕುಮಾರಾ ಡಿಸ್ಸನಾಯಕೆ ಅಲ್ಪ ಮತ ಗಳಿಸಿದರು. ಪ್ರತಿಪಕ್ಷಗಳ ಮುಖಂಡ ಸಜಿತ್ ಪ್ರೇಮದಾಸ ಮತದಾನಕ್ಕೂ ಮೊದಲೇ ಅಧ್ಯಕ್ಷ ಚುನಾವಣೆಯಿಂದ ಹಿಂದೆ ಸರಿದಿದ್ದರು.

ಜನರ ಬೆಂಬಲ ಕೋರಿದ ನೂತನ ಅಧ್ಯಕ್ಷರು:  ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಾತನಾಡಿದ ರಾನಿಲ್​ ವಿಕ್ರಮಸಿಂಘೆ, ನನ್ನ ಮುಂದೆ ದೊಡ್ಡ ಸವಾಲಿದೆ. ಆರ್ಥಿಕವಾಗಿ ದಿವಾಳಿಯಾಗಿರುವ ರಾಷ್ಟ್ರವನ್ನು ಮತ್ತೆ ಕಟ್ಟಬೇಕಿದೆ. ದೇಶ ಸಂದಿಗ್ಧ ಪರಿಸ್ಥಿತಿಯಲ್ಲಿದೆ. ಇದರಿಂದ ಹೊರಬರಲು ಜನರು ಬೆಂಬಲ ನೀಡಬೇಕು ಎಂದು ಕೋರಿದ್ದಾರೆ.