ಮನೆ ರಾಜ್ಯ ಆಗಸ್ಟ್ ಮಾಹೆಯಲ್ಲಿ ಮೈಶುಗರ್ ಕಾರ್ಖಾನೆ ಆರಂಭ: ಸಿಎಂ ಬಸವರಾಜ ಬೊಮ್ಮಾಯಿ

ಆಗಸ್ಟ್ ಮಾಹೆಯಲ್ಲಿ ಮೈಶುಗರ್ ಕಾರ್ಖಾನೆ ಆರಂಭ: ಸಿಎಂ ಬಸವರಾಜ ಬೊಮ್ಮಾಯಿ

0

ಮಂಡ್ಯ (Mandya): ಸರ್ಕಾರದ ವ್ಯಾಪ್ತಿಯಲ್ಲಿರುವ ಮೈ ಶುಗರ್ ಕಾರ್ಖಾನೆಯನ್ನು ಯಾವುದೇ ಖಾಸಗಿ ಸಂಸ್ಥೆಗೆ ನೀಡದೇ ಸರ್ಕಾರ ಮುನ್ನಡೆಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಕೃಷ್ಣರಾಜಸಾಗರದಲ್ಲಿ ಕಾವೇರಿ ಮಾತೆಯ ಪೂಜೆ ಹಾಗೂ ಬಾಗಿನ ಸಮರ್ಪಣೆ ಮಾಡಿದ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಾಗಲೇ ಸಿದ್ಧತೆಗಳು ಪ್ರಾರಂಭವಾಗಿದ್ದು, ಆಗಸ್ಟ್ ಮಾಹೆಯಲ್ಲಿ ಕಬ್ಬು ಅರೆಯುವಿಕೆ ಪ್ರಾರಂಭಿಸಲಾಗುವುದು. ಸಕ್ಕರೆ ಕಾರ್ಖಾನೆ ನಡೆಸಲು ಇನ್ನೂ ಹೆಚ್ಚಿನ ಅನುದಾನ ಬೇಕಿದ್ದು,ಅನುದಾನವನ್ನು ಬ್ಯಾಂಕಿನಿಂದ ಹಾಗೂ ಸರ್ಕಾರದಿಂದ ಒದಗಿಸಲಾಗುವುದು ಎಂದರು.
ರೈತರ ಜೀವಾಳವಾಗಿರುವ ಮೈಶುಗರ್ ಕಾರ್ಖಾನೆಯ ಬಗ್ಗೆ ಸಭೆ ನಡೆಸಿ, ಸರ್ಕಾರಿ ಸ್ವಾಮ್ಯದ ಈ ಕಾರ್ಖಾನೆಯನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಆಗಸ್ಟ್ 2 ಅಥವಾ 3ನೇ ವಾರದಲ್ಲಿ ಕಾರ್ಖಾನೆಯನ್ನು ಪ್ರಾರಂಭಿಸಿ, ಇದಕ್ಕೆ ಬೇಕಾಗಿರುವ ಬಂಡವಾಳ ವೆಚ್ಚ, ದುಡಿಯುವ ಬಂಡವಾಳವನ್ನು ಸರ್ಕಾರವೇ ನೀಡಲಿದೆ. ಈ ವರ್ಷವೇ ಸರ್ಕಾರ ಮೈ ಶುಗರ್ ಕಾರ್ಖಾನೆಯನ್ನು ಪ್ರಾರಂಭಿಸಿ, ರೈತರಿಗೆ ಅನುಕೂಲ ಕಲ್ಪಿಸಲಾಗುವುದು ಎಂದರು.
2008 ರಲ್ಲಿ ನೀರವಾರಿ ಸಚಿವರಾಗಿದ್ದ ಸಂದರ್ಭದಲ್ಲಿ ಕೆ.ಆರ್.ಎಸ್.ಗೆ ಭೇಟಿ ನೀಡಿದಾಗ ಗೇಟ್ ಗಳಲ್ಲಿ ರಂದ್ರ ಬಿದ್ದು ನೀರು ಸೋರಿಕೆಯನ್ನು ತಡೆಯಲು ಗೋಣಿಚೀಲ ಇಡಲಾಗಿತ್ತು. 300 ಕ್ಯೂಸ್ಯಕ್ಸ್ ನಷ್ಟು ನೀರು ಲೆಕ್ಕಕ್ಕೆ ಸಿಗುತ್ತಿಲ್ಲ ಎಂಬುದು ತಿಳಿಯಿತು. ನಂತರ ಇದನ್ನು ತಡೆಗಟ್ಟಬೇಕು ಎಂದು ಸಂಕಲ್ಪ ಮಾಡಿ ಗೇಟ್ ಗಳನ್ನು ಬದಲಾವಣೆ ಮಾಡಲು ನಿರ್ಧಾರಿಸಲಾಯಿತು ಎಂದರು.
ಮೊದಲು 16 ಗೇಟ್ ನ್ನು ಸರಿಪಡಿಸಲಾಯಿತು. 136 ಗೇಟ್ ಗಳಲ್ಲಿ ಇನ್ನೂ 61 ಗೇಟನ್ನು ಬದಲಾವಣೆ ಮಾಡಬೇಕಿದೆ‌. 61 ಗೇಟ್ ನ್ನು 1.5 ವರ್ಷದಲ್ಲಿ ಬದಲಾವಣೆ ಮಾಡಿ ನಂತರ ಕೆ.ಆರ್.ಎಸ್ ನ 75 ವರ್ಷದ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದರು.
ಗೇಟ್ ಗಳ ಬದಲಾವಣೆಗೆ 160 ಕೋಟಿಗೂ ಹೆಚ್ಚಿನ ಅನುದಾನ ನೀಡಲಾಗಿದೆ. ಇದರಿಂದ ಗೇಟ್ ನ್ನು ಆಧುನೀಕರಣ ಮಾಡಲಾಗಿದೆ. ಯೋಜನೆಗಳನ್ನು ದೂರದೃಷ್ಠಿಯೊಂದಿಗೆ ರೂಪಿಸಬೇಕು. 560 ಕೋಟಿ ರೂ.ಅನುದಾನ ನೀಡಿ ವಿಶ್ವೇಶ್ವರ ನಾಲೆ ಹಾಗೂ ಉಪನಾಲೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಇನ್ನೂ ಹೆಚ್ಚಿನ ನಾಲೆಗಳನ್ನು ಮುಂದಿನ ದಿನಗಳಲ್ಲಿ ಅಭಿವೃದ್ಧಿಪಡಿಸಿ ವಿಶ್ವೇಶ್ವರ ನಾಲೆಯ ಸಂಪೂರ್ಣ ನೀರು ರೈತರಿಗೆ ತಲುಪುವಂತೆ ಮಾಡಲಾಗುವುದು ಎಂದರು.