ಮನೆ ರಾಜ್ಯ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ: ಕೆ.ಎಸ್.ಈಶ್ವರಪ್ಪಗೆ ಕ್ಲೀನ್ ಚಿಟ್

ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ: ಕೆ.ಎಸ್.ಈಶ್ವರಪ್ಪಗೆ ಕ್ಲೀನ್ ಚಿಟ್

0

ಬೆಂಗಳೂರು (Bengaluru): ರಾಜ್ಯದಲ್ಲಿ ಭಾರೀ ಸದ್ದು ಮಾಡಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಾಜಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ನೀಡಲಾಗಿದೆ.
ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಅಂತಿಮ ವರದಿಯನ್ನು ಉಡುಪಿ ಪೊಲೀಸರು ಬುಧವಾರ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಪ್ರಕರಣದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪಗೆ ಕ್ಲೀನ್ ಚಿಟ್ ನೀಡಲಾಗಿದೆ. ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದಿಸಿದ್ದಕ್ಕೆ ಸಾಕ್ಷ್ಯಗಳೇ ಇಲ್ಲ ಎಂದು ಅಂತಿಮ ವರದಿಯಲ್ಲಿ ಉಡುಪಿ ಪೊಲೀಸರು ಉಲ್ಲೇಖಿಸಿದ್ದಾರೆ.
ಪ್ರಕರಣದಲ್ಲಿ ಈಶ್ವರಪ್ಪ ಅವರನ್ನು ಕರೆದು ವಿಚಾರಣೆಯನ್ನೂ ನಡೆಸಿಲ್ಲ. ಆದರೂ ಆತ್ಮಹತ್ಯೆಗೆ ಕುಮ್ಮಕ್ಕು ಎಂಬುದಕ್ಕೆ ಸಾಕ್ಷ್ಯಾಧಾರಗಳೇ ಇಲ್ಲ ಎಂದು ತನಿಖೆ ನಡೆಸಿರುವ ಉಡುಪಿ ಪೊಲೀಸರು ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದಾರೆ.
ಕೆ.ಎಸ್.ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ನೀಡಿರುವುದಕ್ಕೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅವರು, ಈಶ್ವರಪ್ಪ ಕೇಸ್ ಕ್ಲೋಸ್ ಮಾಡಿದ್ದಾರೆ. ಇದೊಂದು ದುರ್ದೈವದ ಸಂಗತಿ. ಮಾಜಿ ಸಚಿವರ ವಿರುದ್ಧ ಸಂತೋಷ್ ಪಾಟೀಲ್‌ ನೇರ ಆರೋಪ ಮಾಡಿದ್ದರು. ಸಾವಿಗೆ ಕಾರಣ ಈಶ್ವರಪ್ಪ ಅಂತ ಹೇಳಿದ್ದರು. ಅದರೆ ಬಿ-ರಿಪೋರ್ಟ್ ಹಾಕಿ‌ ಕೇಸ್ ಕ್ಲೋಸ್ ಮಾಡಿದ್ದಾರೆ. ಸರ್ಕಾರ ಸಂಪೂರ್ಣ ವಿಫಲವಾಗಿದೆ. ಲಾ ಡಿಪಾರ್ಟ್ ಮೆಂಟ್ ಪೇಲ್ಯೂರ್ ಆಗಿದೆ ಎಂದು ಕಿಡಿಕಾರಿದರಲ್ಲದೆ, ಸರ್ಕಾರವೇ ಇದರಲ್ಲಿ ಶಾಮೀಲಾಗಿದೆ ಎಂದು ಆರೋಪಿಸಿದ್ದಾರೆ.
ಬೆಳಗಾವಿ ಮೂಲದ ಸಂತೋಷ್ ಪಾಟೀಲ್​ ಅವರು ಕಳೆದ ಏಪ್ರಿಲ್ 11ರಂದು ಉಡುಪಿಯ ಹೋಟೆಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈಶ್ವರಪ್ಪ ವಿರುದ್ಧ 40 ಪರ್ಸೆಂಟ್​ ಕಮಿಷನ್ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ಕೆ.ಎಸ್​ ಈಶ್ವರಪ್ಪ ಅವರು ರಾಜೀನಾಮೆ ನೀಡಿದ್ದರು.