ಮನೆ ದೇಶ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಕನ್ನಡದ 3 ಚಿತ್ರಗಳಿಗೆ ಪ್ರಶಸ್ತಿ

68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಕನ್ನಡದ 3 ಚಿತ್ರಗಳಿಗೆ ಪ್ರಶಸ್ತಿ

0

ನವದೆಹಲಿ (New Delhi): 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟಗೊಂಡಿದ್ದು, ದಿವಂಗತ ನಟ ಸಂಚಾರಿ ವಿಜಯ್ ಕೊನೆಯ ಚಿತ್ರ ತಲೆದಂಡ ಸೇರಿ ಕನ್ನಡದ 3 ಚಿತ್ರಗಳಿಗೆ ಪ್ರಶಸ್ತಿ ಲಭಿಸಿದೆ.

ಈಗಾಗಲೇ ಸಾಕಷ್ಟು ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಸಾಗರ್ ಪುರಾಣಿಕ್ ನಿರ್ದೇಶನದ, ಪವನ್ ಒಡೆಯರ್ ನಿರ್ಮಾಣದ ಡೊಳ್ಳು ಚಿತ್ರಕ್ಕೆ ಎರಡು ಪ್ರಶಸ್ತಿಗಳು ಸಂದಿದ್ದು, ಸಂಚಾರಿ ವಿಜಯ್ ನಟನೆಯ ‘ತಲೆದಂಡ’ ಸಿನಿಮಾಗೂ ರಾಷ್ಟ್ರಪ್ರಶಸ್ತಿ ಸಂದಿದೆ. ಅಲ್ಲದೇ, ಗಿರೀಶ್ ಕಾಸರವಳ್ಳಿ ನಿರ್ದೇಶನದ, ವಾರ್ತಾ ಇಲಾಖೆ ನಿರ್ಮಿಸಿರುವ ಡಾ.ಪಿ.ಟಿ ವೆಂಕೇಶ್ ಕುಮಾರ್ ಬದುಕಿನ ‘ನಾದದ ನವನೀತ’ ಚಿತ್ರಕ್ಕೂ ರಾಷ್ಟ್ರೀಯ ಪ್ರಶಸ್ತಿ ಒಲಿದು ಬಂದಿದೆ.

ಅತ್ಯುತ್ತಮ ಪರಿಸರ ಕಾಳಜಿ ಚಿತ್ರವಾಗಿ ಕೃಪಾಕರ್ ನಿರ್ದೇಶನದ, ಸಂಚಾರಿ ವಿಜಯ್ ನಟನೆಯ ‘ತಲೆದಂಡ’ ಚಿತ್ರ ರಾಷ್ಟ್ರೀಯ ಪ್ರಶಸ್ತಿ ದೊರೆತರೆ, ಲೋಕೇಷನ್ ಸೌಂಡ್ ಡಿಸೈನಿಂಗ್ ವಿಭಾಗದಲ್ಲಿ ಡೊಳ್ಳು ಸಿನಿಮಾ ಪ್ರಶಸ್ತಿ ಪಡೆದುಕೊಂಡಿದೆ. ಅತ್ಯುತ್ತಮ ಪ್ರಾದೇಶಿಕ ಚಿತ್ರ ಡೊಳ್ಳು ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡರೆ, ಅತ್ಯುತ್ತಮ ಪ್ರಾದೇಶಿಕ ತುಳು ಸಿನಿಮಾ ಪ್ರಶಸ್ತಿಯು ಸಂತೋಷ್ ನಿರ್ದೇಶನದ ‘ಜೀಟಿಗೆ’ ದೊರೆತಿದೆ. ಕಲೆ ಮತ್ತು ಸಾಂಸ್ಕೃತಿಕ ಚಿತ್ರವಾಗಿ ಗಿರೀಶ್ ಕಾಸರವಳ್ಳಿ ನಿರ್ದೇಶನ ಮಾಡಿರುವ ‘ನಾದದ ನವನೀತ’ ಚಿತ್ರಕ್ಕೆ ಪ್ರಶಸ್ತಿ ಸಂದಿದೆ. 

ಈ ಹಿಂದೆ ಲಿಂಗದೇವರು ನಿರ್ದೇಶನದಲ್ಲಿ ಮೂಡಿ ಬಂದ ‘ನಾನು ಅವನಲ್ಲ ಅವಳು’ ಸಿನಿಮಾಗಾಗಿ ವಿಜಯ್ ಅವರಿಗೆ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಬಂದಿತ್ತು. ಅಲ್ಲದೇ, ವಿಜಯ್ ನಟನೆಯ ನಾಲ್ಕು ಸಿನಿಮಾಗಳಿಗೆ ರಾಷ್ಟ್ರ ಪ್ರಶಸ್ತಿ ಬಂದಿದ್ದು, ಮೂರು ಸಿನಿಮಾಗಳಿಗೆ ಮತ್ತು ಒಂದು ಚಿತ್ರಕ್ಕಾಗಿ ವಿಜಯ್ ವೈಯಕ್ತಿಕ ಪ್ರಶಸ್ತಿ ಪಡೆದಿದ್ದಾರೆ. 

ಪ್ರಶಸ್ತಿ ಪಡೆದ ಕರ್ನಾಟಕದ ಚಿತ್ರಗಳು: ಅತ್ಯುತ್ತಮ ಪರಿಸರ ಕಾಳಜಿ ಚಿತ್ರ : ತಲೆದಂಡ, ಅತ್ಯುತ್ತಮ ಲೋಕೆಷನ್ ಸೌಂಡ್ ಡಿಸೈನ್ ಚಿತ್ರ : ಡೊಳ್ಳು, ಅತ್ಯುತ್ತಮ ಕಲೆ ಮತ್ತು ಸಾಂಸ್ಕೃತಿಕ ಚಿತ್ರ : ನಾದದ ನವನೀತ, ಅತ್ಯುತ್ತಮ ಪ್ರಾದೇಶಿಕ ಸಿನಿಮಾ : ಡೊಳ್ಳು, ಅತ್ಯುತ್ತಮ ಪ್ರಾದೇಶಿಕ ತುಳು ಸಿನಿಮಾ: ಜೀಟಿಗೆ.