ಮೈಸೂರು(Mysuru): ಯಡಿಯೂರಪ್ಪ ಇಲ್ಲದ ಬಿಜೆಪಿಯನ್ನು ಊಯಿಸಿಕೊಳ್ಳಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಬಿಜೆಪಿ ನೆಲೆಯೂರಲು ಯಡಿಯೂರಪ್ಪ ಕೊಡುಗೆ ಅಪಾರವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಎಚ್ ವಿಶ್ವನಾಥ್ ತಿಳಿಸಿದ್ದಾರೆ.
ನಗರದಲ್ಲಿಂದು ಮಾತನಾಡಿರುವ ಅವರು, ಯಡಿಯೂರಪ್ಪ ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೂ ಕೂಡ ಪಕ್ಷಕ್ಕೆ ಅವರ ಮಾರ್ಗದರ್ಶನ ನೀಡುವ ಅವಶ್ಯಕತೆ ಇದೆ. ಹೀಗಾಗಿ ಯಡಿಯೂರಪ್ಪ ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯಬೇಕು ಎಂದರು.
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಮನೆ ಮಂದಿಯೆಲ್ಲಾ ರಾಜಕಾರಣದಲ್ಲಿದ್ದಾರೆ. ಅದನ್ನೇಕೆ ಯಾರು ಪ್ರಶ್ನಿಸುವುದಿಲ್ಲ. ಸತತ ಎಂಟು ಬಾರಿ ಪ್ರತಿನಿಧಿಸಿರುವ ಶಿಕಾರಿಪುರ ಕ್ಷೇತ್ರದಲ್ಲಿ ಪುತ್ರ ವಿಜಯೇಂದ್ರಗೆ ಯಡಿಯೂರಪ್ಪ ಟಿಕೆಟ್ ಕೇಳಿರುವುದರಲ್ಲಿ ತಪ್ಪೇನಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ಸಿದ್ಧರಾಮೋತ್ಸವದ ಬಗ್ಗೆ ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್, ಸಿದ್ದರಾಮೋತ್ಸವದ ಅಗತ್ಯವಿರಲಿಲ್ಲ, ಕಾಂಗ್ರೆಸ್ಸಿನ ಉತ್ಸವ ನಡೆಯಬೇಕಿತ್ತು. ಮೊನ್ನೆ ಕಲಾಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯಾರೊಬ್ಬರೂ ಕಾಂಗ್ರೆಸ್ ಬಗ್ಗೆ ಮಾತನಾಡಲಿಲ್ಲ. ಸ್ವತಃ ಸಿದ್ದರಾಮಯ್ಯ ಕೂಡ ಕಾಂಗ್ರೆಸ್ ಹೆಸರೇಳಲಿಲ್ಲ. ಬರೀ ಸಿದ್ದರಾಮಯ್ಯ ಪುಂಗಿ ಊದಿದರೇ, ಕಾಂಗ್ರೆಸ್ ಪುಂಗಿ ಊದುವವರು ಯಾರು? ಎಂದು ಲೇವಡಿ ಮಾಡಿದರು.