ಮೈಸೂರು : ದಾವಣಗೆರೆ ಉಪ ಚುನಾವಣೆ ಫಲಿತಾಂಶದ ಬಳಿಕ ಮುಸ್ಲಿಂ ಮುಖಂಡರ ಅಮಾನತು ಆದೇಶ ವಾಪಸ್ ಆಗಬಹುದು’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ” ಅಬ್ದುಲ್ ಜಬ್ಬಾರ್ ಸೇರಿದಂತೆ ಕೇವಲ ಅಲ್ಪಸಂಖ್ಯಾತ ನಾಯಕರ ಮೇಲಿನ ಕ್ರಮವು ಮುಸ್ಲಿಂ ಮತಗಳ ಮೇಲೆ ಖಂಡಿತ ಪರಿಣಾಮ ಬೀರಲಿದೆ. ಈ ಕಾರಣಕ್ಕೆ ನಾವೆಲ್ಲ ಮಧ್ಯಸ್ಥಿಕೆ ವಹಿಸಿದ್ದೇವೆ ” ಎಂದರು.
ಅಮಾನತು ಆಗಿದ್ದವರು ಪಕ್ಷಕ್ಕೆ ವಾಪಸ್ ಆಗಿದ್ದಾರೆ – “ಈ ಹಿಂದೆಯೂ ಹೀಗೆ ಅಮಾನತು ಆಗಿದ್ದವರು ಪಕ್ಷಕ್ಕೆ ವಾಪಸ್ ಆಗಿದ್ದಾರೆ. ಜಬ್ಬಾರ್ ಕೂಡ ಮರಳಬಹುದು. ಸದ್ಯ ಅವರನ್ನು ಹೊರತುಪಡಿಸಿ ಉಳಿದ ಯಾರ ಮೇಲೂ ಕ್ರಮ ಕೈಗೊಂಡಿಲ್ಲ” ಎಂದರು.
ಫಲಿತಾಂಶ ಬಳಿಕ ಚರ್ಚೆ – “ದಾವಣಗೆರೆ ಉಪ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆದಿದೆಯೋ, ಇಲ್ಲವೋ ಗೊತ್ತಿಲ್ಲ. ಚುನಾವಣೆ ಫಲಿತಾಂಶದ ಬಳಿಕ ಈ ಕುರಿತು ಚರ್ಚಿಸುತ್ತೇವೆ” ಎಂದರು. ಎಸ್ ಡಿಪಿಐಗೆ ಕಾಂಗ್ರೆಸ್ ನ ಕೆಲವು ಮುಖಂಡರಿಂದಲೇ ಹಣಕಾಸು ನೆರವು ನೀಡಲಾಗಿದೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿ “ಈ ಬಗ್ಗೆ ನನಗೆ ಮಾಹಿತಿ ಇಲ್ಲ” ಎಂದರು.
ಹಿಂದಿನಷ್ಟೇ ಕಠಿಣವಾಗಿ ಇದ್ದಾರೆ – “ಕೆಎನ್ ರಾಜಣ್ಣ ಅವರ ಹೇಳಿಕೆ ಅವರ ವೈಯಕ್ತಿಕ. ರಾಜಕಾರಣದಲ್ಲಿ ಯಾವಾಗಲೂ ನಿಷ್ಠುರವಾಗಿ ಇರಲು ಆಗದು. ಕೆಲವೊಮ್ಮೆ ಹೊಂದಾಣಿಕೆ ಅನಿವಾರ್ಯ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದಿನಷ್ಟೇ ಕಠಿಣವಾಗಿ ಇದ್ದಾರೆ” ಎಂದರು.














