ಮೂಳೆಗಳು ನಮ್ಮ ದೇಹದ ಸದೃಢತೆಗೆ ಮುಖ್ಯವಾಗಿದೆ. ನಮ್ಮ ಇಡೀ ದೇಹದಲ್ಲಿ 206 ಮೂಳೆಗಳ ಅರೋಗ್ಯವು ನಾವು ತಿನ್ನುವ ಆಹಾರ, ದೈಹಿಕ ಚಟುವಟಿಕೆಗಳ ಆಧಾರದ ಮೇಲೆ ನಿಂತಿರುತ್ತದೆ. ಕ್ಯಾಲ್ಸಿಯಂಯುಕ್ತ ಆಹಾರಗಳ ಮೂಲಕ ಒಂದು ರೀತಿಯಲ್ಲಿ ಮೂಳೆಗಳನ್ನು ಬಲಪಡಿಸಿಕೊಂಡರೆ ಯೋಗಾಸನಗಳ ಮೂಲಕವೂ ಮೂಳೆಗಳನ್ನು ಬಲಪಡಿಸಬಹುದಾಗಿದೆ. ನಿಯಮಿತ ಮತ್ತು ನಿರಂತರ ಈ ಯೋಗಾಸನಗಳನ್ನು ಮಾಡುವುದರಿಂದ ಮೂಳೆಗಳನ್ನು ಬಲಪಡಿಸಬಹುದು.
ವೃಕ್ಷಾಸನ
ಒಂಟಿ ಕಾಲಿನಲ್ಲಿ ನಿಂತು ಮಾಡುವ ಈ ಆಸನ ಮೂಳೆಗಳನ್ನು ಬಲಪಡಿಸುವಲ್ಲಿ ಉತ್ತಮವಾಗಿದೆ. ವೃಕ್ಷಾಸನದಿಂದ ಏಕಾಗ್ರತೆ ಕೂಡ ಹೆಚ್ಚಾಗುತ್ತದೆ. ಯೋಗಾಭ್ಯಾಸ ಆರಂಭಿಸುವವರಿಗೆ, ಮಕ್ಕಳಿಗೆ ಈ ಆಸನ ಬಹಳ ಉಪಯುಕ್ತವಾಗಿದೆ.
ಮಾಡುವ ವಿಧಾನ: ಮೊದಲು ನೇರವಾಗಿ ನಿಂತುಕೊಳ್ಳಿ. ನಂತರ ನಿಧಾನವಾಗಿ ಬಲಗಾಲಿನ ಪಾದವನ್ನು ಎಡಗಾಲಿನ ತೊಡೆಗೆ ತಾಗಿಸಿ ಒಂಟಿ ಕಾಲಿನಲ್ಲಿ ನಿಂತುಕೊಳ್ಳಿ. ಕೈಗಳನ್ನು ಮೇಲಕ್ಕೆತ್ತಿ ತಲೆಯ ಮೇಲೆ ನಮಸ್ಕಾರದ ಭಂಗಿಯಲ್ಲಿ ನಿಂತುಕೊಂಡು ದೀರ್ಘವಾಗಿ ಉಸಿರಾಟ ನಡೆಸಿ.
ಭುಜಂಗಾಸನ
ಈ ಆಸನವು ಬೆನ್ನು ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಅಲ್ಲದೆ ದೇಹದಲ್ಲಿನ ಮೂಳೆಗಳನ್ನು ಬಲಗೊಳಿಸುತ್ತದೆ. ಈ ಆಸನದಿಂದ ಮುಖ್ಯವಾಗಿ ಭುಜದ ಸ್ನಾಯು, ಮೂಳೆಗಳು ಶಕ್ತಿಯುತವಾಗುತ್ತವೆ.
ಮಾಡುವ ವಿಧಾನ: ನಿಮ್ಮ ಹೊಟ್ಟೆಯ ಮೇಲೆ ಮಲಗಿ ಮತ್ತು ನಿಮ್ಮ ತಲೆಯನ್ನು ನೆಲದ ಮೇಲೆ ಇರಿಸಿ. ನಿಮ್ಮ ಎರಡೂ ಕೈಗಳನ್ನು ನಿಮ್ಮ ಭುಜದ ಎರಡೂ ಬದಿಯಲ್ಲಿ ಇರಿಸಿ. ನಿಧಾನವಾಗಿ, ನಿಮ್ಮ ಅಂಗೈಗಳ ಮೇಲೆ ಒತ್ತಡ ಹಾಕಿ ಮತ್ತು ನಿಮ್ಮ ಬೆನ್ನು ಮತ್ತು ಹೊಟ್ಟೆಯನ್ನು ನಿಧಾನವಾಗಿ ಮೇಲಕ್ಕೆ ಎತ್ತಿರಿ. ನಿಮ್ಮ ತೋಳುಗಳನ್ನು ನೇರಗೊಳಿಸಿ ಮತ್ತು ನಿಮ್ಮ ಭುಜಗಳನ್ನು ಬೆನ್ನಿನ ವಿರುದ್ಧ ಒತ್ತಿರಿ. ಒಂದು ಬಿಂದುವಿನಲ್ಲಿ ದೃಷ್ಟಿಯನ್ನು ಇರಿಸಿಕೊಂಡು ಸುಮಾರು 15-30 ಸೆಕೆಂಡುಗಳ ಕಾಲ ಈ ಭಂಗಿಯನ್ನು ಹಿಡಿದುಕೊಳ್ಳಿ. ನಂತರ ನಿಧಾನವಾಗಿ ಆರಂಭಿಕ ಸ್ಥಾನಕ್ಕೆ ಹಿಂತಿರುಗಿ.
ಅಧೋಮುಖಶ್ವಾನಾಸನ
ಸೊಂಟ, ಕಾಲು, ಕೈಗಳ ಸ್ನಾಯುಗಳಿಗೆ ಬಲವನ್ನು ನೀಡುವ ಈ ಆಸನ ಮೂಳೆಗಳನ್ನು ಬಲಪಡಿಸಲು ಕೂಡ ಸಹಾಯಕವಾಗಿದೆ. ಆರಾಮದಲ್ಲಿ ಮಾಡುವ ಈ ಆಸನವನ್ನು ಎಲ್ಲಾ ವಯೋಮಾನದವರು ಮಾಡಬಹುದಾಗಿದೆ.
ಮಾಡುವ ವಿಧಾನ: ಮೊದಲು ಹೊಟ್ಟೆಯ ಮೇಲೆ ಮಲಗಿಕೊಳ್ಳಿ. ನಂತರ ನಿಧಾನವಾಗಿ ಕೈಗಳನ್ನು ನೆಲಕ್ಕೆ ಇರಿಸಿ ನಿಂತುಕೊಳ್ಳಿ. ಇದು ಈಗ ನೀವು ಎರಡು ಕೈ ಮತ್ತು ಎರಡು ಕಾಲಗಳ ಮೇಲೆ ನಿಂತಂತೆ ಆಗುತ್ತದೆ. ತಲೆ ಕೆಳಕ್ಕೆ ಬಾಗಿರಲಿ. ಕಾಲುಗಳ ಬೆರಳು ಅಗಲಗೊಳಿಸಿ. ಇದು ನಿಮಗೆ ಆರಾಮದಾಯಕ ಅನುಭವ ನೀಡುತ್ತದೆ. ಅಲ್ಲದೆ ಇಡೀ ದಿನ ಕುಳಿತು ಕೆಲಸ ಮಾಡಿದ ಸುಸ್ತು ಕಡಿಮೆಯಾಗುತ್ತದೆ. ನಂತರ ನಿಧಾನವಾಗಿ ಬಾಲಾಸನಕ್ಕೆ ಹಿಂತಿರುಗಿ ವಿಶ್ರಾಂತಿ ಪಡೆಯಿರಿ.
ಬದ್ಧಕೋನಾಸನ
ಕಾಲು ಮತ್ತು ತೊಡೆಯ ಭಾಗದ ಮೂಳೆಗಳನ್ನು ಸದೃಢಗೊಳಿಸಲು ಈ ಬದ್ಧಕೋನಾಸನ ಸಹಾಯಕವಾಗಿದೆ. ಮಹಿಳೆಯರಿಗೆ ಹೆಚ್ಚು ಉಪಯುಕ್ತವಾಗಿರುವ ಈ ಆಸನಕ್ಕೆ ಬಟರ್‌ಫ್ಲೈ ಪೋಸ್ ಎಂದೂ ಕರೆಯುತ್ತಾರೆ. ಕುಳಿತು ಮಾಡುವ ಸುಲಭ ಆಸನ ಇದಾಗಿದೆ.
ಮಾಡುವ ವಿಧಾನ: ಮೊದಲು ಎರಡೂ ಕಾಲುಗಳನ್ನು ಮುಂದಕ್ಕೆ ಚಾಚಿ ನಂತರ ಅರ್ಧಕ್ಕೆ ಮಡಚಿ. ಎರಡು ಮೊಣಕಾಲುಗಳ ನಡುವೆ ಪಾದಗಳನ್ನು ಇರಿಸಿ. ಹಿಮ್ಮಡಿಗಳು ಸೊಂಟದ ಹತ್ತಿರ ಬರುವಂತೆ ನೋಡಿಕೊಳ್ಳಿ, ಕಾಲ್ಬೆರಳುಗಳಿಂದ ದೃಢವಾಗಿ ಹಿಡಿದುಕೊಳ್ಳಿ. ಆಳವಾದ ಉಸಿರನ್ನು ತೆಗೆದುಕೊಳ್ಳಿ ಮತ್ತು ವಿಶ್ರಾಂತಿ ಪಡೆಯಿರಿ. ನಂತರ ನಿಧಾನವಾಗಿ ಉಸಿರನ್ನು ಬಿಡಿ. ನಂತರ ನಿಧಾನವಾಗಿ ಕೆಳಗೆ ಬಾಗಿ ಮತ್ತು ನಿಮ್ಮ ಸೊಂಟದಿಂದ ನೆಲವನ್ನು ಸ್ಪರ್ಶಿಸಿ. ಕೆಲವು ಸೆಕೆಂಡುಗಳ ಕಾಲ ಈ ಸ್ಥಾನದಲ್ಲಿರಿ. ನಂತರ ನಿಧಾನವಾಗಿ ಸಾಮಾನ್ಯ ಸ್ಥಿತಿಗೆ ಹಿಂತಿರುಗಿ. ಇದು ಮುಟ್ಟಿನ ಸಮಯದಲ್ಲಿ ನೋವು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ.
ವಜ್ರಾಸನ
ಸುಲಭವಾಗಿ ಮಾಡಬಹುದಾದ ಆಸನಗಳಲ್ಲಿ ವಜ್ರಾಸನ ಕೂಡ ಒಂದಾಗಿದೆ. ಕಾಲನ್ನು ಮಡಚಿ ಕುಳಿತುಕೊಳ್ಳುವುದರಿಂದ ಕಾಲಿನ ಮೂಳೆಗಳ ಮೇಲೆ ಒತ್ತಡ ಬೀಳುತ್ತದೆ. ಇದರಿಂದ ಮೂಳೆಗಳು ಭಾರವನ್ನು ತಡೆದುಕೊಳ್ಳುಷ್ಟು ಬಲವಾಗುತ್ತದೆ.
ಮಾಡುವ ವಿಧಾನ: ನಿಮ್ಮ ಕಾಲುಗಳನ್ನು ನೇರವಾಗಿ ನಿಮ್ಮ ಮುಂದೆ ಚಾಚಿ ಕುಳಿತುಕೊಳ್ಳಿ. ನಂತರ ಎರಡೂ ಕಾಲುಗಳನ್ನು ಮಡಚಿ ಮಂಡಿಯೂರಿ ಕುಳಿತುಕೊಳ್ಳಿ. ಹಿಮ್ಮಡಿಗಳ ಮೇಲೆ ಸೊಂಟವನ್ನು ಇರಿಸಿ. ಕಾಲ್ಬೆರಳುಗಳು ನಿಮ್ಮ ಹಿಂದೆ ನೆಲಕ್ಕೆ ತಾಗಿಸಿ ಕುಳಿತುಕೊಳ್ಳಿ. ನಿಮ್ಮ ತಲೆ, ಕುತ್ತಿಗೆ ಮತ್ತು ಬೆನ್ನುಮೂಳೆ ನೇರವಾಗಿರಲಿ. ನಿಮ್ಮ ಅಂಗೈಗಳನ್ನು ನಿಮ್ಮ ತೊಡೆಯ ಮೇಲೆ ಇರಿಸಿ. ಹೊಸದಾಗಿ ವಜ್ರಾಸನವನ್ನು ಅಭ್ಯಾಸ ಮಾಡುತ್ತಿದ್ದೀರಿ ಎಂದರೆ 30 ಸೆಕೆಂಡುಗಳ ಅದೇ ಭಂಗಿಯಲ್ಲಿ ಕುಳಿತು ದೀರ್ಘವಾಗಿ ಉಸಿರಾಟ ನಡೆಸಿ. ಕ್ರಮೇಣ ಅದರ ಸಮಯವನ್ನು ಹೆಚ್ಚಿಸಿಕೊಳ್ಳಿ.