ಬೆಂಗಳೂರು (Bengaluru): ಪಿಎಸ್‌ಐ ನೇಮಕಾತಿಗೆ ಶೀಘ್ರದಲ್ಲಿ ಮರು ಪರೀಕ್ಷೆ ನಡೆಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಗೃಹ ಸಚಿವರ ಅಧಿಕೃತ ನಿವಾಸದಲ್ಲಿ ಸಚಿವರನ್ನು ಭೇಟಿಯಾದ ಪಿಎಸ್‌ಐ ಹುದ್ದೆ ಆಕಾಂಕ್ಷಿಗಳು ಈಗ ನಡೆದಿರುವ ಪರೀಕ್ಷೆಯನ್ನು ರದ್ದುಗೊಳಿಸಿರುವುದರಿಂದ ಆಗಿರುವ ತೊಂದರೆಯನ್ನು ಪರಿಹರಿಸುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಶೀಘ್ರದಲ್ಲಿ ಮರು ಪರೀಕ್ಷೆ ನಡೆಸುವ ಭರವಸೆ ನೀಡಿದರು.
ಮರು ಪರೀಕ್ಷೆ ನಡೆಯುವುದು ತಡವಾದರೆ ವಯೋಮಿತಿ ಮೀರಬಹುದು ಎಂಬ ಆತಂಕ ಅಗತ್ಯವಿಲ್ಲ. ಪರೀಕ್ಷೆ ಬರೆದಿರುವ ಎಲ್ಲ ಅಭ್ಯರ್ಥಿಗಳೂ ನಿಶ್ಚಿಂತೆಯಿಂದ ಮರು ಪರೀಕ್ಷೆಗೆ ತಯಾರಿ ನಡೆಸಿ ಎಂದರು.
ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಕುರಿತು ಸಿಐಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆ ಮುಕ್ತಾಯವಾದ ತಕ್ಷಣ ಮರು ಪರೀಕ್ಷೆಗೆ ಪ್ರಕಟಣೆ ಹೊರಡಿಸಲಾಗುವುದು. ಈಗ ರದ್ದುಗೊಂಡಿರುವ ಪರೀಕ್ಷೆಯನ್ನು ಬರೆದಿರುವ ಹಾಗೂ ಅಕ್ರಮದಲ್ಲಿ ಭಾಗಿಯಾಗದ ಎಲ್ಲ 56,000 ಅಭ್ಯರ್ಥಿಗಳಿಗೂ ಮರು ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು ಎಂದು ಜ್ಞಾನೇಂದ್ರ ತಿಳಿಸಿದರು.