ಮನೆ ರಾಜ್ಯ ಕರಾಮುವಿ ಕುಲಪತಿಗಳ ವಿಶೇಷಾಧಿಕಾರಿಯನ್ನು ಕರ್ತವ್ಯದಿಂದ ಬಿಡುಗಡೆಗೊಳಿಸುವಂತೆ ಮನವಿ

ಕರಾಮುವಿ ಕುಲಪತಿಗಳ ವಿಶೇಷಾಧಿಕಾರಿಯನ್ನು ಕರ್ತವ್ಯದಿಂದ ಬಿಡುಗಡೆಗೊಳಿಸುವಂತೆ ಮನವಿ

0

ಮೈಸೂರು(Mysuru): ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ, ವಿದ್ಯಾಶಂಕರ್ ಅವರ ವಿಶೇಷಾಧಿಕಾರಿಯಾಗಿರುವ ದೇವರಾಜು ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸುವಂತೆ ಕರಾಮುವಿ ಖಾಯಂ ಅಧ್ಯಾಪಕರ ಸಂಘ ಮನವಿ ಮಾಡಿದೆ.

ಈ ಸಂಬಂಧ ಕರಾಮುವಿ ಕುಲಸಚಿವರಿಗೆ ಪತ್ರ ಬರೆದಿರುವ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿ,  ಕುಲಪತಿಗಳ ವಿಶೇಷಾಧಿಕಾರಿಗಳಾದ  ದೇವರಾಜು ಅವರು 02.03.2022ರಂದು ನಮ್ಮ ವಿ.ವಿ.ಯ ಸಹಾಯಕ ಕುಲಸಚಿವರಾದ ಪ್ರದೀಪ್‌ ಗಿರಿಯವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ವಿಚಾರವಾಗಿ ಮೈಸೂರಿನ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 0046/2022 ದಾಖಲಾಗಿದೆ.

ಈ ಪ್ರಕರಣದಲ್ಲಿ ಇವರು A1 ಆರೋಪಿಯಾಗಿದ್ದಾರೆ. ಈ ಪ್ರಕರಣದಲ್ಲಿ ಇವರ ವಿರುದ್ಧ ಕಲಂ, 324, 323, 504, 506 ಕೇಸ್ ದಾಖಲಾಗಿದೆ. ಇವರ ವಿರುದ್ಧ ಗಂಭೀರ ಪ್ರಕರಣ ದಾಖಲಾಗಿರುವುದರಿಂದ, ವಿ.ವಿ.ಯ ಖಾಯಂ ನೌಕರರಲ್ಲದ್ದರಿಂದ ಹಾಗೂ ವಿ.ವಿ.ಯ ಅಧ್ಯಾಪಕರೂ ಒಳಗೊಂಡಂತೆ ಎಲ್ಲಾ ಸಿಬ್ಬಂದಿ ವರ್ಗದವರು ಭಯಭೀತರಾಗಿದ್ದಾರೆ.

ಪ್ರಸ್ತುತ ದೇವರಾಜುರವರ ಮೇಲೆ ಮಹಿಳಾ ದೌರ್ಜನ್ಯ ವಿಚಾರವಾಗಿ ಸಿ.ಸಿ.ಬಿ ಹಾಗೂ ಪೊಲೀಸ್‌ ಕಮೀಷನರ್ ವ್ಯಾಪ್ತಿಯಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಮಹಿಳಾ ಸಿಬ್ಬಂದಿಗಳೂ ಭಯಭೀತರಾಗಿದ್ದಾರೆ. ದೇವರಾಜು ಅವರು ನೆನ್ನೆಯಿಂದ ಅಂದರೆ ದಿನಾಂಕ 05.08.2022ರಿಂದ ಕಚೇರಿಗೆ ಹಾಜರಾಗುತ್ತಿದ್ದಾರೆ. ಹೀಗಾಗಿ ವಿವಿಯ ಸಿಬ್ಬಂದಿ ವರ್ಗದವರಿಗೆ ಧಿಗ್ಬ್ರಮೆ ಹಾಗೂ ಭಯದ ವಾತಾವರಣ ಹೆಚ್ಚಾಗಿದೆ.

ಆದ್ದರಿಂದ ಭಯದ ವಾತಾವರಣ ತಿಳಿಗೊಳಿಸಿ ವಿವಿಯಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಿಸುವ ಹಿತದೃಷ್ಟಿಯಿಂದ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಈ ಕೂಡಲೇ ದೇವರಾಜು ಅವರನ್ನ ಕರ್ತವ್ಯದಿಂದ ಬಿಡುಗಡೆಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.