ಮನೆ ಆರೋಗ್ಯ ಮಳೆಗಾಲದಲ್ಲಿ ಕಾಡುವ ಅಲರ್ಜಿಗೆ ಈ ಆಹಾರಗಳು ಒಳ್ಳೆಯದು

ಮಳೆಗಾಲದಲ್ಲಿ ಕಾಡುವ ಅಲರ್ಜಿಗೆ ಈ ಆಹಾರಗಳು ಒಳ್ಳೆಯದು

0

ತಂಪಾದ ವಾತಾವರಣ ನಮ್ಮ ದೇಹಕ್ಕೆ ಬೇಗನೆ ಸೋಂಕನ್ನು ತಗುಲುವಂತೆ ಮಾಡಬಹುದು. ಹೀಗಾಗಿ ಮಳೆಗಾಲದಲ್ಲಿ ನಮ್ಮಆಹಾರ ಶೈಲಿ, ಜೀವನಶೈಲಿ ಉತ್ತಮವಾಗಿರಬೇಕು. ಅಲರ್ಜಿಯನ್ನು ತಡೆಯಲು ಯಾವ ರೀತಿಯ ಆಹಾರ ಸೇವಿಸಬೇಕು ಎನ್ನುವ ಮಾಹಿತಿ ಇಲ್ಲಿದೆ ನೋಡಿ.

ಮಳೆಗಾಲ ಎಂದರೆ ತಣ್ಣನೆಯ ಅನುಭವ, ಎಲ್ಲೆಂದರಲ್ಲಿ ನೀರು, ಚಿಗುರಿ ನಿಂತ ಪರಿಸರ ಕಣ್ಸೆಳೆಯುತ್ತಿದ್ದರೆ ಇನ್ನೊಂದೆಡೆ ಆರೋಗ್ಯ ಸಮಸ್ಯೆಗಳು ತಲೆ ಎತ್ತುತ್ತವೆ. ಶೀತ, ನೆಗಡಿ, ಅಲರ್ಜಿ, ಹೊಟ್ಟೆಯ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತವೆ.

ಅದಕ್ಕಾಗಿಯೇ ಮಳೆಗಾಲದಲ್ಲಿ ಆಹಾರ ಸೇವನೆ ಸರಿಯಾಗಿರಬೇಕು ಎನ್ನುವುದು. ಕೆಲವರಲ್ಲಿ ಆಹಾರ ಸೇವನೆಯಿಂದ ಅಲರ್ಜಿಯಾಗುತ್ತದೆ. ಹಾಗಾದರೆ ಮಳೆಗಾಲದಲ್ಲಿ ಅಲರ್ಜಿಯನ್ನು ತಡೆಯಲು ಯಾವೆಲ್ಲಾ ಆಹರಗಳನ್ನು ಸೇವನೆ ಮಾಡಬೇಕು, ಅಲರ್ಜಿ ಯಾಕಾಗುತ್ತದೆ ಎನ್ನುವುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಮಳೆಗಾಲದಲ್ಲಿ ಅಲರ್ಜಿಯಾಗಲು ಕಾರಣವೆಂದರೆ…

ಮಳೆಗಾಲದಲ್ಲಿ ವಾತಾವರಣ ತಂಪಾಗಿರುತ್ತದೆ. ಅಲ್ಲದೆ ಕೆಲವು ಆಹಾರಗಳು ಬೇಗನೆ ಜೀರ್ಣವಾಗುವುದಿಲ್ಲ. ಆಹಾರ ಸರಿಯಾಗಿ ಜೀರ್ಣವಾಗದೇ ಇದ್ದಾಗ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಇದರಿಂದಾಗಿಯೇ ಅಲರ್ಜಿ ಉಂಟಾಗುತ್ತದೆ. ಈ ರೀತಿ ಆಹಾರ ಜೀರ್ಣವಾಗದೇ ಇದ್ದಾಗ ದೇಹಕ್ಕೆ ಪೋಷಕಾಂಶಗಳು ಕಡಿಮೆಯಾಗಿ ರೋಗ ನಿರೋಧಕ ಶಕ್ತಿ ಕೂಡ ಕುಗ್ಗುತ್ತದೆ.

ಇದರಿಂದ ಶೀತ, ಕೆಮ್ಮು, ದೇಹದ ಮೇಲೆ ತುರಿಕೆ, ಹೊಟ್ಟೆಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಅಂತಹ ಸಂದರ್ಭದಲ್ಲಿ ಈ ರೀತಿ ಆಹಾರಗಳನ್ನು ಸೇವಿಸಿ.

ಸೀಸನಲ್‌ ಆಹಾರ ಸೇವಿಸಿ

ಆಯಾ ಕಾಲದಲ್ಲಿ ಸಿಗುವ ಹಣ್ಣು, ತರಕಾರಿಗಳನ್ನು ಸೇವನೆ ಮಾಡುವುದು ಒಳ್ಳೆಯದು. ಇದರಿಂದ ಆರೋಗ್ಯವೂ ಉತ್ತಮವಾಗಿರುತ್ತದೆ. ಮಳೆಗಾಲದಲ್ಲಿ ವಿಶೇಷವಾಗಿ ಸೇಬು, ಮೂಸಂಬಿ, ಪೇರಲ, ನೇರಳೆಹಣ್ಣುಗಳನ್ನು ತಿನ್ನಿ.

ಇನ್ನು ತರಕಾರಿಗಳಲ್ಲಿ ಕಳಲೆ, ಮೂಲಂಗಿ, ಬೀನ್ಸ್‌ನಂತಹ ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ. ಕಳಲೆ ವಿಶೇಷವಾಗಿ ಮಳೆಗಾಲದಲ್ಲಿ ಸಿಗುವ ತರಕಾರಿಯಾಗಿದೆ. ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಬಿಸಿ ಆಹಾರಗಳಿಗೆ ಆದ್ಯತೆ ಇರಲಿ

ಮಳೆಗಾಲದಲ್ಲಿ ವಾತಾವರಣ ತಂಪಾಗಿರುವ ಕಾರಣ ದೇಹಕ್ಕೆ ಬೇಗನೆ ಸೋಂಕು ತಗುಲುತ್ತದೆ. ಹೀಗಾಗಿ ನೈಸರ್ಗಿಕ ಚಹಾಗಳನ್ನು ಸೇವಿಸುತ್ತಿರಿ. ಶುಂಠಿ ಟೀ, ಗ್ರೀನ್‌ ಟೀ, ಅರಿಶಿನ ಬೆರೆಸಿದ ಹಾಲು, ಬೆಳ್ಳುಳ್ಳಿ ಸೇರಿಸಿದ ಆಹಾರವನ್ನು ಸೇವಿಸುತ್ತಿರಿ.

ಇದರಿಂದ ದೇಹ ಆಂತರಿಕವಾಗಿ ಬೆಚ್ಚಗಿರುತ್ತದೆ. ಇನ್ನು ಇದರ ಜೊತೆಗೆ ನೀವು ತರಕಾರಿಗಳ ಸೂಪ್‌, ಬೇಯಿಸಿದ ಕಾಳುಗಳನ್ನು ಸೇವನೆ ಮಾಡಬಹುದು. ಇದರಿಂದ ದೇಹದಲ್ಲಿ ರೋಗ ನೀರೋಧಕ ಶಕ್ತಿಯೂ ಉತ್ತಮವಾಗುತ್ತದೆ. ಮಳೆಗಾಲದ ಅಲರ್ಜಿಯಿಂದಲೂ ದೂರವಿರಬಹುದು.

​ಶುಂಠಿ ಮತ್ತು ಬೆಳ್ಳುಳ್ಳಿ

ಉರಿಯೂತದ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳ ಜೊತೆಗೆ, ಶುಂಠಿ ಮತ್ತು ಬೆಳ್ಳುಳ್ಳಿ ಆಂಟಿವೈರಲ್ ಗುಣಲಕ್ಷಣಗಳನ್ನು ಹೊಂದಿದ್ದು ಅದು ಜ್ವರ ಮತ್ತು ಶೀತವನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಶುಂಠಿ ಚಹಾವು ಗಂಟಲಿನ ಅಸ್ವಸ್ಥತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇನ್ನು ಆಂಟಿಮೈಕ್ರೊಬಿಯಲ್ ಅಥವಾ ಆಂಟಿಫಂಗಲ್ ಗುಣಲಕ್ಷಣಗಳನ್ನು ಹೊಂದಿರುವ ಬೆಳ್ಳುಳ್ಳಿಯನ್ನು ಗ್ರೇವಿ, ಚಟ್ನಿ, ಸೂಪ್‌ ಇತರ ಆಹಾರಗಳಲ್ಲಿ ಬಳಸಬಹುದು.

ಒಮೆಗಾ -3 ಆಹಾರಗಳು

ಒಮೆಗಾ -3 ಕೊಬ್ಬಿನಾಮ್ಲಗಳು ಉರಿಯೂತದ ಗುಣಲಕ್ಷಣಗಳನ್ನು ಹೊಂದಿವೆ. ಮಳೆಗಾಲದಲ್ಲಿ ಆಹಾರ ಮತ್ತು ನೀರಿನ ಮೂಲಕ ಸೋಂಕಿನ ಅಪಾಯ ಹೆಚ್ಚಾದಾಗ ಹೆಚ್ಚಿನ ರೋಗನಿರೋಧಕ ಶಕ್ತಿಯು ನೀಡುವ ಮೂಲಕ ದೇಹವನ್ನು ರಕ್ಷಿಸುತ್ತವೆ. ಒಮೆಗಾ-3 ಕೊಬ್ಬಿನಾಮ್ಲಗಳನ್ನು ಮೀನು, ಸೀಗಡಿ, ಸಿಂಪಿ, ವಾಲ್‌ನಟ್ಸ್, ಪಿಸ್ತಾ, ಚಿಯಾ ಬೀಜಗಳು, ಅಗಸೆ ಬೀಜಗಳು ಮತ್ತು ಇತರ ಬೀಜಗಳು ಮತ್ತು ಎಣ್ಣೆಕಾಳುಗಳಲ್ಲಿ ಕಾಣಬಹುದು.

ದಿನಕ್ಕೆ ಎರಡು ಬಾರಿ ಸ್ನಾನ ಮಾಡಿ

ಮಳೆಗಾಲದಲ್ಲಿ ಹೊರಗಿನ ಸೋಂಕುಗಳು ಬಹುಬೇಗ ದೇಹವನ್ನು ಹೊಕ್ಕುತ್ತವೆ. ಹೀಗಾಗಿ ಮನೆಯಿಂದ ಹೊರಹೋಗಿ ಬಂದ ಮೇಲೆ ತಪ್ಪದೇ ಸ್ನಾನ ಮಾಡಿ. ಇದರಿಂದ ಸೋಂಕು ಹರಡುವುದನ್ನು ತಡೆಯಬಹುದು.

ಅಲ್ಲದೆ ಸ್ನಾನದ ಬಳಿಕ ಮಾಶ್ಚರೈಸರ್‌ ಕ್ರೀಮ್‌ಗಳನ್ನು ಹಚ್ಚುವುದನ್ನು ಮರೆಯದಿರಿ. ಇದರಿಂದ ಚರ್ಮವನ್ನು ಒಣಗದಂತೆ ರಕ್ಷಿಸಬಹುದು.

ಹಿಂದಿನ ಲೇಖನಕರಾಮುವಿ ಕುಲಪತಿಗಳ ವಿಶೇಷಾಧಿಕಾರಿಯನ್ನು ಕರ್ತವ್ಯದಿಂದ ಬಿಡುಗಡೆಗೊಳಿಸುವಂತೆ ಮನವಿ
ಮುಂದಿನ ಲೇಖನಸರಗಳ್ಳತನ ಮತ್ತು ದ್ವಿಚಕ್ರ ವಾಹನ ಕಳ್ಳರ ಬಂಧನ: ೫ ಲಕ್ಷ ರೂ.‌ಮೌಲ್ಯದ  ಚಿನ್ನಾಭರಣ, ೩ ದ್ವಿಚಕ್ರ ವಾಹನ ವಶಕ್ಕೆ