ಮನೆ ದೇಶ ಇಂದು ನಿತೀಶ್‌ ಕುಮಾರ್‌ ಮತ್ತೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ

ಇಂದು ನಿತೀಶ್‌ ಕುಮಾರ್‌ ಮತ್ತೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ

0

ಪಾಟ್ನಾ (Patna): ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನಿತೀಶ್‌ ಕುಮಾರ್‌ ಇಂದು ಮತ್ತೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಆರ್‌ಜೆಡಿ ನೇತೃತ್ವದ ಮಹಾಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಹಕ್ಕು ಮಂಡಿಸಿರುವ ಅವರು, ಇಂದು ಮಧ್ಯಾಹ್ನ 2 ಗಂಟೆಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಪಡೆದುಕೊಳ್ಳಲಿದ್ದಾರೆ. ನಿತೀಶ್‌ ಅವರು ತಮಗೆ 164 ಶಾಸಕರ ಬೆಂಬಲ ಇದೆ ಎಂದಿದ್ದಾರೆ. ಈ ಶಾಸಕರ ಪಟ್ಟಿಯನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದಾರೆ. ವಿಧಾನಸಭೆಯ ಸದಸ್ಯ ಬಲ 242. ಸರಳ ಬಹುಮತಕ್ಕೆ 123 ಶಾಸಕರ ಬೆಂಬಲ ಬೇಕಿದೆ.

ನಿತೀಶ್‌ ಅವರು 2017ರವರೆಗೆ ಮಹಾಮೈತ್ರಿಕೂಟದ ಭಾಗವಾಗಿಯೇ ಇದ್ದರು. ಆದರೆ, 2017ರಲ್ಲಿ ಮಹಾಮೈತ್ರಿಕೂಟ ತೊರೆದು ಬಿಜೆಪಿ ನೇತೃತ್ವದ ಎನ್‌ಡಿಎ ಸೇರಿಕೊಂಡರು. ಮಹಾಮೈತ್ರಿಕೂಟಕ್ಕೆ ಸೇರುವ ಮೊದಲೂ ಅವರು ಎನ್‌ಡಿಎಯಲ್ಲಿಯೇ ಇದ್ದರು. ಈಗ, 9 ವರ್ಷಗಳಲ್ಲಿ ಎರಡನೇ ಬಾರಿಗೆ ಬಿಜೆಪಿ ಜತೆಗಿನ ನಂಟನ್ನು ಅವರು ಕಡಿದುಕೊಂಡಿದ್ದಾರೆ. ನರೇಂದ್ರ ಮೋದಿ ಅವರನ್ನು ಪ್ರಧಾನಿ ಹುದ್ದೆಯ ಅಭ್ಯರ್ಥಿ ಎಂದು ಬಿಜೆಪಿ 2013ರಲ್ಲಿ ನಿರ್ಧರಿಸಿದಾಗ ನಿತೀಶ್‌ ಅವರು ಎನ್‌ಡಿಎ ತೊರೆದಿದ್ದರು.

ಬಿಜೆಪಿಯ ಸಖ್ಯ ತೊರೆದ ಜೆಡಿಯು ನಾಯಕ ನಿತೀಶ್‌ ಕುಮಾರ್‌ ಅವರು ನಿನ್ನೆ ರಾಜ್ಯಪಾಲ ಫಗು ಚೌಹಾಣ್‌ ಅವರನ್ನು ಎರಡೆರಡು ಬಾರಿ ಭೇಟಿಯಾದರು. ಮೊದಲ ಬಾರಿ ಭೇಟಿಯಾಗಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದರು. ಬಳಿಕ, ಆರ್‌ಜೆಡಿ ನೇತೃತ್ವದ ಮಹಾಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಹಕ್ಕು ಮಂಡಿಸಿದ್ದರು.