ಮನೆ ರಾಜ್ಯ ಮುಚ್ಚಿಟ್ಟಿದ್ದ ಸುಮಾರು 5 ಸಾವಿರ ಕೋಟಿ ರೂ. ಮೌಲ್ಯದ ಮುಡಾದ ಆಸ್ತಿ ಪತ್ತೆ

ಮುಚ್ಚಿಟ್ಟಿದ್ದ ಸುಮಾರು 5 ಸಾವಿರ ಕೋಟಿ ರೂ. ಮೌಲ್ಯದ ಮುಡಾದ ಆಸ್ತಿ ಪತ್ತೆ

0

ಬೆಂಗಳೂರು (Bengaluru): ಮೈಸೂರು ನಗರಾಭಿ ವೃದ್ಧಿಪ್ರಾಧಿಕಾರದ (ಮುಡಾ) ವ್ಯಾಪ್ತಿಯಲ್ಲಿ ಅಧಿಕಾರಿಗಳು ಮುಚ್ಚಿಟ್ಟಿದ್ದ ಸುಮಾರು 5 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆ ಮಾಡಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ತಿಳಿಸಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದ್ದಾರೆ. ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸುಮಾರು 13 ಸಾವಿರ ನಿವೇಶನಗಳು ಪತ್ತೆಯಾಗಿವೆ. ಅವುಗಳನ್ನು ಹಂಚಿಕೆಯಾಗಲಿ, ಹರಾಜಿನ ಮೂಲಕವಾಗಲಿ ವಿಲೇವಾರಿ ಮಾಡದಿರುವುದು ಗಮನಕ್ಕೆ ಬಂದಿದೆ. ಹಂಚಿಕೆಯಾಗಿದ್ದ ಕೆಲವು ನಿವೇಶನಗಳು ಫಲಾನುಭವಿಗಳಿಲ್ಲದ ಕಾರಣಕ್ಕೆ ಅಥವಾ ತಾಂತ್ರಿಕ ಕಾರಣದಿಂದ ರದ್ದು ಆಗಿದೆ. ಬಳಿಕ ಅವುಗಳ ಮರು ಹಂಚಿಕೆ ಆಗಿಲ್ಲ. 200ರಿಂದ 300 ಎಕರೆಯಷ್ಟು ಪ್ರಾಧಿಕಾರದ ಭೂಮಿ ಕೂಡ ಪತ್ತೆಯಾಗಿದ್ದು, ಎಲ್ಲವನ್ನೂ ಲೆಕ್ಕಾಚಾರ ಮಾಡಿದರೆ 4 ಸಾವಿರ ಕೋಟಿ ರೂ. ಯಿಂದ 5 ಸಾವಿರ ಕೋಟಿ ರೂ. ಬೆಲೆ ಬಾಳುತ್ತವೆ ಎಂದರು.

ಇವುಗಳನ್ನು ಫಲಾನುಭವಿಗಳಿಗೆ ಮಾರಾಟ ಮಾಡಿದ್ದರೆ ಪ್ರಾಧಿಕಾರಕ್ಕೆ ಆದಾಯ ಬರುತ್ತಿತ್ತು. ಮುಂದಿನ ದಿನಗಳಲ್ಲಿ ಇದನ್ನು ವಿಲೇವಾರಿ ಮಾಡಲು ಸೂಚಿಸಿದ್ದೇನೆ. ಖಾಲಿ ನಿವೇಶನಗಳನ್ನು ಬಡಾವಣೆಗಳಾಗಿ ಅಭಿವೃದ್ಧಿಪಡಿಸುವುದು, ನಿವೇಶನಗಳನ್ನು ಹಂಚಿಕೆ ಮಾಡುವುದು, ಹರಾಜು ಹಾಕುವುದರ ಜೊತೆಗೆ ಗುಂಪು ಮನೆಗಳನ್ನು ನಿರ್ಮಿಸಲಾಗುವುದು ಎಂದು ಸಚಿವರು ತಿಳಿಸಿದರು.