ಮನೆ ರಾಜ್ಯ ಎಲ್ಲರೂ ಸಂಸ್ಕೃತ ಅಧ್ಯಯನ ಮಾಡಿ: ವಿ. ಟಿ.ಎನ್.ಪ್ರಭಾಕರ್

ಎಲ್ಲರೂ ಸಂಸ್ಕೃತ ಅಧ್ಯಯನ ಮಾಡಿ: ವಿ. ಟಿ.ಎನ್.ಪ್ರಭಾಕರ್

0

ಮೈಸೂರು(Mysuru): ಎಲ್ಲರೂ ಸಂಸ್ಕೃತವನ್ನು ಅಧ್ಯಯನ ಮಾಡಬೇಕು ಎಂದು ಸಂಸ್ಕೃತ ಭಾರತಿ ಕನ್ನಡ ದಕ್ಷಿಣ ಪ್ರಾಂತ್ಯಾಧ್ಯಕ್ಷ ವಿದ್ವಾನ್ ಟಿ.ಎನ್.ಪ್ರಭಾಕರ್ ಹೇಳಿದರು.

ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಈಚೆಗೆ ನಡೆದ ‘ಸಂಸ್ಕೃತೋತ್ಸವ’ ಉದ್ಘಾಟಿಸಿ ಅವರು ಮಾತನಾಡಿದರು.

ಸಂಸ್ಕೃತ ಭಾಷೆಯ ಬಗ್ಗೆ ಭಾರತೀಯರಿಗಿಂತಲೂ ವಿದೇಶಿಯರಿಗೆ ಹೆಚ್ಚು ಒಲವಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ, ಸಂಸ್ಕೃತ ಭಾಷೆ ಪರಿಪೂರ್ಣ ಮತ್ತು ಪ್ರಾಚೀನವಾದುದು. ಮಹತ್ತರವಾದ ಸಾಹಿತ್ಯ ರಾಶಿ ಈ ಭಾಷೆಯಲ್ಲಿ ರಚನೆಯಾಗಿದೆ. ಜಗತ್ತಿನ ಅನೇಕ ಭಾಷೆಗಳು ಇದರ ಪ್ರಭಾವಕ್ಕೆ ಒಳಗಾಗಿವೆ. ಕನ್ನಡ ಮತ್ತು ಸಾಹಿತ್ಯಕ್ಕೂ ಇದು ಅನ್ವಯವಾಗುತ್ತದೆ ಎಂದರು.

ಆದಿಕವಿ ಪಂಪನಿಂದ ಹಿಡಿದು ರಾಷ್ಟ್ರಕವಿ ಕುವೆಂಪುವರೆಗೆ ಎಲ್ಲರಲ್ಲಿಯೂ ಸಂಸ್ಕೃತದ ಪ್ರಭಾವವನ್ನು ಕಾಣಬಹುದು. ಅನನ್ಯ ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಿದ ಭಾಷೆಯು ಕಾಲ ಕ್ರಮೇಣ ಸಮಾಜದಿಂದ ಕಣ್ಮರೆಯಾಗತೊಡಗಿತು. ಮಾತಿನ ಭಾಷೆಯಾಗಿಯೂ ಸದ್ಯ ಬಳಕೆಯಾಗುತ್ತಿರುವುದು ಕಡಿಮೆ ಪ್ರಮಾಣದಲ್ಲಿದೆ. ಅದನ್ನು ಉಳಿಸಿ–ಬಳೆಸಲು ನಾವು ಕಾರ್ಯಪ್ರವೃತ್ತವಾಗಬೇಕು ಎಂದು ಹೇಳಿದರು.

ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಪಿ.ವಿಜಯೇಂದ್ರಕುಮಾರ್ ಮತ್ತು ಪಿಯು ಕಾಲೇಜಿನ ಪ್ರಾಂಶುಪಾಲ ಎಸ್.ಸೋಮಶೇಖರ ಇದ್ದರು.

ಗುರುಪ್ರಸಾದ್ ಪ್ರಾರ್ಥಿಸಿದರು. ಸಹಾಯಕ ಪ್ರಾಧ್ಯಾಪಕ ವಿದ್ವಾನ್ ಕೆ.ಶ್ರೀನಿಧಿ ಸ್ವಾಗತಿಸಿದರು. ಪ್ರೇರಣ್ ಮತ್ತು ತುಷಾರ್ ನಿರೂಪಿಸಿದರು.

ಸಹಾಯಕ ಪ್ರಾಧ್ಯಾಪಕಿ ಡಾ.ಕೋಮಲಾ ವಂದಿಸಿದರು.