ಮನೆ ರಾಜ್ಯ ರೈಲ್ವೆ ಮೈಸೂರು ವಿಭಾಗದಿಂದ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

ರೈಲ್ವೆ ಮೈಸೂರು ವಿಭಾಗದಿಂದ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

0

ಮೈಸೂರು(Mysuru): ಮೈಸೂರು ವಿಭಾಗದ ವತಿಯಿಂದ ರೈಲ್ವೆ ಕ್ರೀಡಾ ಮೈದಾನದಲ್ಲಿ ಸಂಭ್ರಮದಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ವಿಭಾಗಿಯ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರ್ವಾಲ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭ ಮಾತನಾಡಿದ ಅವರು, ಎಲ್ಲಾ ರೈಲ್ವೆ ಸಿಬ್ಬಂದಿ ಬಳಗಕ್ಕೆ ಮತ್ತು ಅವರ ಕುಟುಂಬಗಳಿಗೆ ಶುಭಾಶಯ ಕೋರಿದರು. ನಮ್ಮ ಪೂರ್ವಜರು ಮಾಡಿದ ಸ್ವಾತಂತ್ರ್ಯ ಹೋರಾಟ ಮತ್ತು ತ್ಯಾಗಗಾಥೆಗಳನ್ನು ಸ್ಮರಿಸಿದ ಅವರು, ಪ್ರತಿಯೊಬ್ಬರೂ ಅದರಿಂದ ಸ್ಫೂರ್ತಿ ಪಡೆಯಬೇಕೆಂದು ಕರೆ ನೀಡಿದರು.

ಕೋವಿಡ್-19 ಸಾಂಕ್ರಾಮಿಕದ ನಂತರ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದ್ದು, ದೇಶವು ಅಭಿವೃದ್ಧಿಯತ್ತ ಸಾಗುತ್ತಿದೆ. ರೈಲ್ವೆ ತನ್ನ ಬದ್ಧತೆ ಮತ್ತು ಸಮರ್ಪಿತ ಕಾರ್ಯಪಡೆಯ ಮೂಲಕ ಈ ಪ್ರಯಾಣದ ಮುಂಚೂಣಿಯಲ್ಲಿದೆ. ನೈಋತ್ಯ ರೈಲ್ವೆ ಮೈಸೂರು ವಿಭಾಗವು ತನ್ನದೇ ಆದ ಪ್ರಮುಖ ಪಾತ್ರವನ್ನು ನಿರ್ವಹಿಸಿ ಅದರ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿನ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಶಕ್ತಿ ತುಂಬುತ್ತಿದೆ ಎಂದು ಹೇಳಿದರು.

ಗ್ರಾಹಕರು ಒಟ್ಟಾರೆ ಚಟುವಟಿಕೆಗಳ ಕೇಂದ್ರಬಿಂದುವಾಗಿದ್ದೂ, ಪ್ರಯಾಣಿಕರ ಪ್ರಯಾಣದ ಅನುಭವವನ್ನು ಸುಧಾರಿಸಲು ಹಲವಾರು ಕ್ರಮಗಳನ್ನು ಪ್ರಾರಂಭಿಸಲಾಗಿದೆ. ಪ್ರಯಾಣಿಕರನ್ನು ಸಾಗಿಸುವ ಎಲ್ಲಾ ರೈಲುಗಳ ಸೇವೆಗಳನ್ನು ಕೋವಿಡ್ ಸಾಂಕ್ರಮಿಕದ ಪೂರ್ವಕಾಲದ ಮಟ್ಟಕ್ಕೆ ಪುನರಾರಂಭಿಸಿರುವುದು ಉಲ್ಲೇಖಾರ್ಹವಾಗಿದೆ ಎಂದು ಹೇಳಿದರು.

ಪ್ರಸಕ್ತ ವರ್ಷದಲ್ಲಿ, ಮೈಸೂರು ವಿಭಾಗದ ಸಮಯಪಾಲನೆಯ ಕಾರ್ಯಕ್ಷಮತೆಯು ಸುಮಾರು 99% ರಷ್ಟಿದ್ದು, ಶ್ಲಾಘನೀಯವಾಗಿದೆ. ಪ್ರಯಾಣಿಕರ ಹೆಚ್ಚಿನ ಬೇಡಿಕೆಯನ್ನು ಪೂರೈಸಲು ವಿವಿಧ ರೈಲುಗಳಿಗೆ 391 ಹೆಚ್ಚುವರಿ ಕೋಚ್‌ಗಳನ್ನು ಅಳವಡಿಸಲಾಗಿದೆ. ಹೆಚ್ಚುವರಿ ಕಾಯ್ದಿರಿಸದ ಹಾಗು ಮುಂಗಡ ಕಾಯ್ದಿರಿಸುವ ಟಿಕೇಟ್ ಕೌಂಟರ್‌ಗಳು ಮತ್ತು ಸ್ವಯಂಚಾಲಿತ ಟಿಕೆಟ್ ವಿತರಣಾ ಯಂತ್ರಗಳ (ATVM) ಅಳವಡಿಕೆಯೊಂದಿಗೆ ಪ್ರಯಾಣಿಕರಿಗೆ ತೊಂದರೆ-ಮುಕ್ತ ಟಿಕೆಟ್ ವಿತರಣೆ ಸಾಧ್ಯವಾಗಿದೆ ಎಂದರು.

ಹೆಚ್ಚುವರಿ ಪಾರ್ಕಿಂಗ್ ಸ್ಥಳ, ಶೌಚಾಲಯ, ಕುಡಿಯುವ ನೀರು, ಬೆಳಕು, ಮಾಹಿತಿ ವ್ಯವಸ್ಥೆ ಮತ್ತು ಪ್ರದರ್ಶನ ಫಲಕಗಳನ್ನು ನೀಡಲಾಗಿದೆ. ಸಿಸಿಟಿವಿ ಕಣ್ಗಾವಲು ವ್ಯವಸ್ಥೆಯ ನೆರವಿನಿಂದ ಕೂಡಿದ ದೋಷರಹಿತ ಭದ್ರತಾ ವ್ಯವಸ್ಥೆಗಳು ರೈಲು ಬಳಕೆದಾರರಿಗೆ ಭರವಸೆ ಕೊಟ್ಟಿವೆ. ಅರಸೀಕೆರೆ, ಬೀರೂರು ಮತ್ತು ಕಡೂರು ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚಿನ ಸಾಮರ್ಥ್ಯದ ಆರು ಲಿಫ್ಟ್‌ಗಳನ್ನು ಇತ್ತೀಚಿಗೆ ನಿಯೋಜಿಸಲಾಗಿದೆ ಎಂದು ಹೇಳಿದರು.

ಮೈಸೂರು ರೈಲು ನಿಲ್ದಾಣಕ್ಕೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು “ಅನುಕರಣೀಯ” (ಪಂಚತಾರಾ – 5 ಸ್ಟಾರ್ ರೇಟಿಂಗ್) ಜೊತೆಗೆ “ಈಟ್ ರೈಟ್ ಸ್ಟೇಷನ್” ಪ್ರಮಾಣೀಕರಣವನ್ನು ನೀಡಿದೆ ಎಂದರು.

ರೈಲ್ವೆಯ ಅತಿದೊಡ್ಡ ಆಸ್ತಿ ಎಂದರೆ ಸಮರ್ಪಿತ ಮತ್ತು ಬದ್ಧತೆಯ ಉದ್ಯೋಗಿಗಳಾಗಿದ್ದು, ಸಿಬ್ಬಂದಿಯ ಯೋಗಕ್ಷೇಮವು ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ. ಪ್ರಸಕ್ತ ವರ್ಷದಲ್ಲಿ ಇನ್ನೂರೈವತ್ತೇಳು ಉದ್ಯೋಗಿಗಳು ಬಡ್ತಿ ಪಡೆದರೆ, ಐವತ್ತೇಳು ಮಂದಿಗೆ ಆರ್ಥಿಕ ಉನ್ನತೀಕರಣವನ್ನು ನೀಡಲಾಗಿದೆ. ಸಮರ್ಪಿತ ಕೆಲಸಕ್ಕಾಗಿ ಎಲ್ಲಾ ಅಧಿಕಾರಿಗಳು, ಮೇಲ್ವಿಚಾರಕರು ಮತ್ತು ಸಿಬ್ಬಂದಿಗಳು, ರೈಲ್ವೆ ಸಂರಕ್ಷಣಾ ಸಿಬ್ಬಂದಿ ಮತ್ತು ಕಾರ್ಮಿಕ ಸಂಘಟನೆಗಳನ್ನು ಅಭಿನಂದಿಸುತ್ತಾ, ಇನ್ನಷ್ಟು ಸಾಧನೆ ಮಾಡಲು ಶ್ರಮಿಸಿ, ದಾರಿಯಲ್ಲಿ ಬರುವ ಸವಾಲುಗಳನ್ನು ಎದುರಿಸಲು ಸಂಕಲ್ಪ ಮಾಡಿ, ನಮ್ಮ ರಾಷ್ಟ್ರದ ಅಭಿವೃದ್ಧಿಯನ್ನು ‘ಆತ್ಮನಿರ್ಭರ ಭಾರತ್’ ಕಡೆಗೆ ಕೊಂಡೊಯ್ದು ಮತ್ತಷ್ಟು ಮೈಲಿಗಲ್ಲುಗಳನ್ನು ಸ್ಥಾಪಿಸುವಂತೆ ಕರೆ ನೀಡಿದರು.