ಮೈಸೂರು (Mysuru): ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಗ್ರಾಮೀಣ ಭಾಗದ ಜಲಮೂಲಗಳನ್ನು ಸಂರಕ್ಷಿಸುವ ಸಲುವಾಗಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೈಗೊಳ್ಳಲಾದ ‘ಅಮೃತ ಸರೋವರ’ ಅಭಿಯಾನದಲ್ಲಿ ಮೈಸೂರು ತಾಲ್ಲೂಕಿನಲ್ಲಿ ಅಭಿವೃದ್ಧಿಪಡಿಸಿದ ನಾಲ್ಕು ಕೆರೆ ದಂಡೆಯಲ್ಲಿ ಹುತಾತ್ಮ ಯೋಧರ ಕುಟುಂಬದವರು ಧ್ವಜಾರೋಹಣ ನೆರವೇರಿಸಿದರು.
ತಾಲ್ಲೂಕಿನ ಗುಂಗ್ರಾಲ್ ಛತ್ರ ಗ್ರಾಮ ಪಂಚಾಯತಿ ವ್ಯಾಪ್ತಿಯ ದಡದಕಲ್ಲಹಳ್ಳಿ ಗ್ರಾಮದ ಬಚ್ಚಲಗೆರೆ, ಡಿ.ಎಂ.ಜಿ.ಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾದಳ್ಳಿ ಕೆರೆ, ಬೀರಿಹುಂಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಮಾರಬೀಡು ಗ್ರಾಮದ ಗೆಂಡೆಕೆರೆ ಹಾಗೂ ಗೋಪಾಲಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ನಗರ್ತಹಳ್ಳಿ ಕೆರೆಯ ಬಳಿ ಅಮೃತ ಮಹೋತ್ಸವ ಕಾರ್ಯಕ್ರಮ ನಡೆಸಲಾಯಿತು.
ದಡದಕಲ್ಲಹಳ್ಳಿ ಗ್ರಾಮದ ಬಚ್ಚಲಗೆರೆ ದಂಡೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದ ಹುತಾತ್ಮ ಯೋಧ ಎ.ಪಿ.ಪ್ರಶಾಂತ್ ಅವರ ತಂದೆ ಪೊನ್ನಪ್ಪ ಅವರು ಮಾತನಾಡಿ, ನಮ್ಮ ಹಿರಿಯ ಮಗ ಸೇನೆಗೆ ಸೇರಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ. ಈ ಅವಧಿಯಲ್ಲಿ ಎಂಟು ಪದಕಗಳನ್ನು ಪಡೆದುಕೊಂಡಿದ್ದ. ಜಮ್ಮುವಿನ ಸುರಾನ್ ಕೋಟ್ ಜಿಲ್ಲೆಯ ಮಕ್ಸಂದರ್ ಗ್ರಾಮದಲ್ಲಿ ಉಗ್ರರ ಗುಂಡಿನ ದಾಳಿಯಲ್ಲಿ ಹುತಾತ್ಮನಾದ ಎಂದು ಸ್ಮರಿಸಿದರು.
ನಮ್ಮ ಮಗ ಸೇನೆಯಲ್ಲಿದ್ದ ಎಂಬುದೇ ನಮಗೆ ಹೆಮ್ಮೆಯ ಸಂಗತಿ. ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿದ್ದು ಅವಿಸ್ಮರಣೀಯ ಎಂದರು.
ತಾಲ್ಲೂಕು ಪಂಚಾಯತ್ ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕರಾದ ಕೆ.ಎಂ.ರಘುನಾಥ್ ಅವರು ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು 75ನೇ ವರ್ಷದ ಸಂಭ್ರಮಾಚರಣೆಯಲ್ಲಿ ನಾವಿದ್ದೇವೆ. ಸರ್ಕಾರವು ಗ್ರಾಮೀಣ ಪ್ರದೇಶದ ಅಭಿವೃದ್ಧಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದೆ. ಅದರಲ್ಲಿ ಜಲಮೂಲ ರಕ್ಷಣೆ ಮಾಡುವಂಥ ಕಾರ್ಯಕ್ರಮಗಳು ಮಹತ್ವದ್ದು. ಅಮೃತ ಸರೋವರ ಕಾರ್ಯಕ್ರಮದಡಿ ಗ್ರಾಮೀಣ ಭಾಗದ ಕೆರೆಗಳನ್ನು ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ತಾಲ್ಲೂಕಿನ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆರೆಗಳನ್ನು ಉತ್ತಮವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಹೆಚ್.ಡಿ.ಗಿರೀಶ್, ಹುತಾತ್ಮ ಯೋಧರ ತಾಯಿ ಸರೋಜ, ಗುಂಗ್ರಾಲ್ ಛತ್ರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಲೀಲಾವತಿ, ಉಪಾಧ್ಯಕ್ಷರಾದ ಮಂಜುಳಾ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪ್ರದೀಪ್ ಕುಮಾರ್, ಕಾರ್ಯದರ್ಶಿ ದಿವ್ಯಾ ಮತ್ತಿತರರು ಉಪಸ್ಥಿತರಿದ್ದರು.














