ಮನೆ ದೇವಸ್ಥಾನ ತಲಕಾಡಿನ ಕೀರ್ತಿನಾರಾಯಣ ದೇವಾಲಯ

ತಲಕಾಡಿನ ಕೀರ್ತಿನಾರಾಯಣ ದೇವಾಲಯ

0

ಕಾರ್ತಿಕ ಬಹುಳ ಅಮಾವಾಸ್ಯೆಯ ಸೋಮವಾರ ಸೂರ್ಯಚಂದ್ರರಿಬ್ಬರೂ ವೃಶ್ಚಿಕ ರಾಶಿಯಲ್ಲಿ ಸೇರಿದಾಗ ಸಂಭವಿಸುವ ಕುಹುಯೋಗದಲ್ಲಿ  ಪಂಚಲಿಂಗ ದರ್ಶನ ಮಹೋತ್ಸವ ನಡೆಯುವ  ತಲಕಾಡು ವಾಸ್ತವದಲ್ಲಿ ಶೈವಕ್ಷೇತ್ರವೆಂದು ವಿಶ್ವವಿಖ್ಯಾತವಾಗಿದ್ದರೂ, ಇದೊಂದು ಹರಿಹರ ಕ್ಷೇತ್ರ. ಪಂಚ ಲಿಂಗಗಳ ಪೈಕಿ ಮೂರು ಅಂದರೆ ಮರಳೇಶ್ವರ, ವೈದ್ಯನಾಥೇಶ್ವರ, ಪಾತಾಳೇಶ್ವರನಿರುವ ತಲಕಾಡಿನಲ್ಲಿ ಕೀರ್ತಿ ನಾರಾಯಣನೂ ನೆಲೆಸಿದ್ದಾನೆ.

ಈ ದೇವಾಲಯವು ಹೊಯ್ಸಳರು ಪ್ರತಿಷ್ಠಾಪಿಸಿದ ಭವ್ಯ ದೇವಾಲಯ. 1117ರಲ್ಲಿ ಹೊಯ್ಸಳರ ದೊರೆ ವಿಷ್ಣುವರ್ಧನ ಈ ದೇವಾಲಯ ನಿರ್ಮಾಣ ಮಾಡಿದನೆಂದು ಇತಿಹಾಸ ಸಾರುತ್ತದೆ. ಆದರೆ  ಈ ದೇವಾಲಯ ಇತರ ಹೊಯ್ಸಳರ ದೇವಾಲಯಗಳಂತೆ ಬಳಪ ಕಲ್ಲಿನ ಸೂಕ್ಷ್ಮ ಕೆತ್ತನೆಯ ದೇವಾಲಯವಾಗಿರದೆ, ಕಣಶಿಲೆಯಲ್ಲಿ ನಿರ್ಮಿಸಿದ ಗುಡಿಯಾಗಿದೆ. ಆದರೆ ನವರಂಗದ ಮಧ್ಯದ ನಾಲ್ಕು ಕಂಬಗಳನ್ನು ಮಾತ್ರ ಬಳಪದ ಕಲ್ಲಿನಿಂದ ನಿರ್ಮಿಸಲಾಗಿದೆ. ಈ ಕಂಬಗಳನ್ನು ತಿರುಗಣಿ (ಲೇತ್)ನಲ್ಲಿ ತಿರುಗಿಸಿ ತಯಾರಿಸಲಾಗಿದೆ. ಉಳಿದ ಕಂಬಗಳು ಕಣಶಿಲೆಯ ಕಂಬಗಳಾಗಿದ್ದರೂ, ಹೊಯ್ಸಳರ ವಾಸ್ತುಶೈಲಿಯ ಪ್ರಭಾವ ಇದರಲ್ಲಿ ಕಾಣ ಸಿಗುತ್ತದೆ.

ಈ ದೇವಾಲಯವನ್ನು ಕೂಡ ಎತ್ತರದ ಜಗತಿಯ ಮೇಲೆ ನಿರ್ಮಿಸಲಾಗಿದೆ. ಪೂರ್ವಾಭಿಮುಖವಾಗಿರುವ ಈ ದೇವಾಲಯ ಗರ್ಭಗೃಹ, ಅರ್ಧ ಮಂಟಪ, ಮೂರು ಪ್ರವೇಶ ದ್ವಾರವುಳ್ಳ ನವರಂಗಗಳನ್ನು ಒಳಗೊಂಡಿದೆ. ಈ ದೇವಾಲಯಕ್ಕೆ ವಿಜಯನಗರದ ಅರಸರ ಕಾಲದಲ್ಲಿ ದ್ವಾರ ಮಂಟಪ ನಿರ್ಮಿಸಲಾಗಿದೆ. ದೇವಾಲಯದ ಸುತ್ತಲೂ ಇರುವ ಪ್ರಾಕಾರವಿದ್ದ ಕುರುಹುಗಳಿವೆ.

ಗರ್ಭಗೃಹ, ದ್ವಾರಬಂಧ, ನವರಂಗದ ಮಧ್ಯದ ಭುವನೇಶ್ವರಿಗಳು ಅದ್ಭುತವಾಗಿವೆ. ಇಲ್ಲಿರುವ ಪ್ರಧಾನ ಗರ್ಭಗೃಹದಲ್ಲಿ ಬೃಹದಾಕಾರದ ಅತ್ಯಂತ ಸುಂದರವಾದ ಚತುರ್ಭುಜದ ನಿಂತಿರುವ ಕೀರ್ತಿನಾರಾಯಣನ ಕೃಷ್ಣವರ್ಣದ ಸುಂದರ ವಿಗ್ರಹವಿದೆ. ಕೀರ್ತಿನಾರಾಯಣನ ಸೌಂದರ್ಯವನ್ನು, ಶಿಲ್ಪಿಯ ಕೈಚಳಕವನ್ನು ನೋಡುತ್ತಿದ್ದರೆ ಆಗುವ ಆನಂದ ಅಪರಿಮಿತ. ಅಲಂಕಾರದ ನಂತರವಂತೂ ಕೀರ್ತಿನಾರಾಯಣನ ಸೊಬಗು ನೂರ್ಮಡಿಯಾಗುತ್ತದೆ. ಕೀರ್ತಿ ನಾರಾಯಣನ ಸುಂದರ ಮೂರ್ತಿಯ ಹಿಂದೆ ಕಲ್ಲಿನ ಪ್ರಭಾವಳಿ ಇದೆ. ಈ ಪ್ರಭಾವಳಿಯಲ್ಲಿ ಸುಂದರ ಕೆತ್ತನೆಗಳಿವೆ. ಚತುರ್ಭುಜನಾದ ಕೀರ್ತಿ ನಾರಾಯಣ ಶಂಖ, ಚಕ್ರ, ಗದೆ ಮತ್ತು ಪದ್ಮವನ್ನು ಕೈಯಲ್ಲಿ ಹಿಡಿದಿದ್ದು, ಇದರ ಸೂಕ್ಷ್ಮ ಕೆತ್ತನೆ ಮನಮೋಹಕವಾಗಿದೆ.

ಹೊಯ್ಸಳರ ದೊರೆ ವಿಷ್ಣುವರ್ಧನ ನಿರ್ಮಿಸಿದ ಐದು ನಾರಾಯಣ ದೇವಾಲಯಗಳಲ್ಲಿ ಇದೂ ಒಂದಾಗಿದೆ. ವಿಷ್ಣುವರ್ಧನ ಗದಗಿನಲ್ಲಿ ವೀರನಾರಾಯಣನನ್ನೂ, ಗುಂಡ್ಲುಪೇಟೆಯಲ್ಲಿ ವಿಜಯನಾರಾಯಣನನ್ನೂ, ತಲಕಾಡಿನಲ್ಲಿ ಕೀರ್ತಿ ನಾರಾಯಣನನ್ನೂ, ಕೆರೆ ತೊಣ್ಣೂರಿನಲ್ಲಿ ನಂಬಿ ನಾರಾಯಣನನ್ನೂ ಹಾಗೂ ಮೇಲುಕೋಟೆಯಲ್ಲಿ ಚೆಲುವ ನಾರಾಯಣನನ್ನೂ ಪ್ರತಿಷ್ಠಾಪಿಸಿ, ದೇಗುಲ ನಿರ್ಮಿಸಿದನೆಂದು ತಿಳಿದುಬರುತ್ತದೆ.

ತಲಕಾಡಿನ ಈ ದೇವಾಲಯ ಮರಳಿನಲ್ಲಿ ಮುಚ್ಚಿ ಹೋಗಿತ್ತು ಮತ್ತು ಹಲವು ಭಾಗ ಕುಸಿದು ಹೋಗಿತ್ತು. ಇತ್ತೀಚೆಗೆ ಕೇಂದ್ರೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ,  ಈಗ ದೇವಾಲಯವನ್ನು ಸಂಪೂರ್ಣವಾಗಿ ತಳಪಾಯದವರೆಗೂ ಬಿಚ್ಚಿ, ಪುನರ್ ನಿರ್ಮಾಣ ಮಾಡಿದ್ದು, ದೇವಾಲಯ ತನ್ನ ಗತ ವೈಭವವನ್ನು ಮತ್ತೆ ಗಳಿಸಿಕೊಂಡಿದೆ. ನವವಧುವಿನಂತೆ ಕಂಗೊಳಿಸುತ್ತಿದೆ. ಗರ್ಭಗೃಹದ ಮೇಲೆ ಗಾರೆಯ ಗೋಪುರ ನಿರ್ಮಿಸಲಾಗಿದೆ. ದೇವಾಲಯದ ಹೊರ ಭಿತ್ತಿಯ ಹೊರ ಮೈ ಸಂಪೂರ್ಣ ವಾಸ್ತು ಅಲಂಕರಣಗಳಿಂದ ಕೂಡಿದೆ.

ದೇವಾಲಯದ ಗರ್ಭಗೃಹದ ನೇರಕ್ಕೆ ಕಣಶಿಲೆಯಲ್ಲಿ ನಿರ್ಮಿಸಿದ ಮತ್ತು ಸುಂದರ ಕೆತ್ತನೆಯ ದ್ವಾರ ಮಂಟಪವಿದೆ. ಈ ದ್ವಾರ ಮಂಟಪ ಸಹ ಕ್ರಿ. ಶ. 1700ರಲ್ಲಿ ನೈಸರ್ಗಿಕ ವಿಕೋಪದಿಂದ, ಮರಳು ಸಹಿತವಾದ ಬಿರುಗಾಳಿಯ ಹೊಡೆತಕ್ಕೆ ಸಿಲುಕಿ ಅಗಾಧ ಮರಳು ರಾಶಿಯಲ್ಲಿ ಮುಚ್ಚಿಹೋಗಿತ್ತು. ಹಳೆಯ ಊರೇ ಇಲ್ಲವಾಗಿತ್ತು. ಈಗಿರುವ ಊರು 18-19ನೇ ಶತಮಾನದಲ್ಲಿ ನಿರ್ಮಿಸಲಾದ ಊರು. ಈಗ ಇದನ್ನೂ ಉತ್ಖನನ ಮಾಡಿರುವ ಪುರಾತತ್ವ ಇಲಾಖೆ ಹಿಂದೆ ಹೇಗಿತ್ತೋ ಅದೇ ಸ್ವರೂಪದಲ್ಲಿ ಪುನರ್ನಿರ್ಮಾಣ ಮಾಡಿದೆ. ಈ ದ್ವಾರ ಮಂಟಪದ ಬಿತ್ತಿಗಳಲ್ಲಿ ಅರೆಗಂಬಗಳನ್ನು ಸುಂದರವಾಗಿ ಕೆತ್ತಲಾಗಿದೆ.

ತಲಕಾಡು ಗಂಗರ ಕಾಲದಲ್ಲಿ ರಾಜಧಾನಿಯೂ ಆಗಿತ್ತು, ಚೋಳ ವಂಶದ ರಾಜ ರಾಜ ಚೋಳ ತಲಕಾಡನ್ನು ಗೆದ್ದು, ಇದಕ್ಕೆ ರಾಜರಾಜಪುರ ಎಂದೂ ಹೆಸರಿಟ್ಟಿದ್ದ, ಬಳಿಕ ಹೊಯ್ಸಳರ ದೊರೆ ವಿಷ್ಣುವರ್ಧನ ತಲಕಾಡನ್ನು ತನ್ನ ವಶ ಮಾಡಿಕೊಂಡು ತಲಕಾಡುಗೊಂಡನೆಂದೂ ಕರೆಸಿಕೊಂಡ. ಹೊಯ್ಸಳರು ತಲಕಾಡಿನಲ್ಲಿ 3೦ಕ್ಕೂ ಹೆಚ್ಚು ದೇವಾಲಯ ಕಟ್ಟಿಸಿದ್ದರೆನ್ನುತ್ತದೆ ಇತಿಹಾಸ.

ತಲನವಪುರ, ಗಜಾರಣ್ಯ ಕ್ಷೇತ್ರವೆಂದೂ ಖ್ಯಾತವಾಗಿದ್ದ ತಲಕಾಡು ಶಿವ ಮತ್ತು ವಿಷ್ಣುವಿನ ನಡುವೆ ಬೇಧವಿಲ್ಲ ಎಂದು ಸಾರುತ್ತಾ ಹರಿಹರ ಕ್ಷೇತ್ರವಾಗಿ ಕಂಗೊಳಿಸುತ್ತಿದೆ.