ನವದೆಹಲಿ (New Delhi): ಆಸ್ಟ್ರೇಲಿಯಾ ವಿರುದ್ಧ ಮಂದಿನ ತಿಂಗಳು ನಡೆಯಲಿರುವ ಒಡಿಐ ಸರಣಿಗೆ 15 ಸದಸ್ಯರ ನ್ಯೂಜಿಲೆಂಡ್ ತಂಡವನ್ನು ಪ್ರಕಟಿಸಿದೆ.
ಇತ್ತೀಚೆಗಷ್ಟೇ ಕ್ರಿಕೆಟ್ ನ್ಯೂಜಿಲೆಂಡ್‌ನ ಕೇಂದ್ರ ಗುತ್ತಿಗೆಯಲ್ಲಿ ಸ್ಥಾನ ಕಳೆದುಕೊಂಡಿದ್ದ ಹಿರಿಯ ವೇಗಿ ಟ್ರೆಂಟ್ ಬೌಲ್ಟ್ ಅವರು ಇದೀಗ ಏಕದಿನ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ. ನ್ಯೂಜಿಲೆಂಡ್ ಏಕದಿನ ತಂಡದಲ್ಲಿ ಐವರು ಫಾಸ್ಟ್ ಬೌಲರ್‌ಗಳಲ್ಲಿ ಟ್ರೆಂಟ್ ಬೌಲ್ಟ್ ಕೂಡ ಒಬ್ಬರಾಗಿದ್ದಾರೆ. ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಡುವಣ ಏಕದಿನ ಸರಣಿಯ ಮೂರು ಪಂದ್ಯಗಳು ನಾರ್ಥ್ ಕ್ವೀನ್ಸ್‌ಲೆಂಡ್ ಸ್ಟೇಟ್‌ನ ಕೈರ್ನ್ಸ್‌ನಲ್ಲಿ ನಡೆಯಲಿವೆ. ಈ ಎರಡೂ ತಂಡಗಳು ಬಲಿಷ್ಠವಾಗಿರುವ ಕಾರಣ ಈ ಸರಣಿ ಅತ್ಯಂತ ತೀವ್ರ ಕುತೂಹಲದಿಂದ ಕೂಡಿರುತ್ತದೆ.
ಗಾಯದಿಂದಾಗಿ ವೆಸ್ಟ್ ಇಂಡೀಸ್ ಪ್ರವಾಸದಿಂದ ಹೊರ ಬಿದ್ದಿದ್ದ ಮ್ಯಾಟ್ ಹೆನ್ರಿ ಇದೀಗ ಸಂಪೂರ್ಣ ಫಿಟ್ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಒಡಿಐ ಸರಣಿ ಆಡುವ ನ್ಯೂಜಿಲೆಂಡ್ ತಂಡಕ್ಕೆ ಮರಳಿದ್ದಾರೆ. ಸ್ನಾಯು ಸೆಳೆತದ ಸಮಸ್ಯೆಯಿಂದಾಗಿ ವೆಸ್ಟ್ ಇಂಡೀಸ್ ವಿರುದ್ಧ ಎರಡು ಮತ್ತು ಮೂರನೇ ಪಂದ್ಯಗಳಿಗೆ ಅಲಭ್ಯರಾಗಿದ್ದ ನಾಯಕ ಕೇನ್ ವಿಲಿಯಮ್ಸನ್, ಎಂದಿನಂತೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಕಿವೀಸ್ ತಂಡವನ್ನು ಮುನ್ನಡೆಸಲಿದ್ದಾರೆ. ಮತ್ತೊಂದೆಡೆ ಹಾರ್ಡ್ ಹಿಟ್ಟಿಂಗ್ ಆಲ್‌ರೌಂಡರ್ ಗ್ಲೆನ್ ಫಿಲಿಪ್ಸ್ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ಬ್ಯಾಟ್ಸ್‌ಮನ್‌ಗಳಾದ ಹೆನ್ರಿ ನಿಕೋಲ್ಸ್ ಹಾಗೂ ವಿಲ್ ಯಂಗ್ ಅವರನ್ನು ತಂಡದಿಂದ ಕೈ ಬಿಡಲಾಗಿದ್ದು, ಹೆಚ್ಚುವರಿ ವೇಗಿಗಳಿಗೆ ಸ್ಥಾನ ಕಲ್ಪಿಸಿಕೊಡುವ ಸಲುವಾಗಿ ಸ್ಪಿನ್ನರ್ ಇಶ್ ಸೋಧಿ ಅವರನ್ನೂ ಏಕದಿನ ತಂಡದಿಂದ ಹೊರಗಿಡಲಾಗಿದೆ.
ನ್ಯೂಜಿಲೆಂಡ್ ತಂಡ: ಕೇನ್ ವಿಲಿಯಮ್ಸನ್(ನಾಯಕ), ಫಿನ್ ಆಲೆನ್, ಮೈಕಲ್ ಬ್ರೇಸ್‌ವೆಲ್, ಟ್ರೆಂಟ್ ಬೌಲ್ಟ್, ಡೆವೋನ್ ಕಾನ್ವೇ, ಲಾಕಿ ಫರ್ಗ್ಯೂಸನ್, ಮಾರ್ಟಿನ್ ಗಪ್ಟಿಲ್, ಮ್ಯಾಟ್ ಹೆನ್ರಿ, ಟಾಮ್ ಲೇಥಮ್, ಡ್ಯಾರಿಲ್ ಮಿಚೆಲ್, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಬೆನ್ ಸೀರ್ಸ್, ಟಿಮ್ ಸೌಥೀ.