ಮನೆ ಕಾನೂನು ಪಿಯುಸಿ-ಸಿಇಟಿಯಲ್ಲಿನ ತಲಾ ಶೇ. 50 ಅಂಕ ಪರಿಗಣಿಸಿ ಹೊಸ ರ‍್ಯಾಂಕ್ ಪಟ್ಟಿ ಪ್ರಕಟಿಸಲು ಕೆಇಎಗೆ ಹೈಕೋರ್ಟ್‌...

ಪಿಯುಸಿ-ಸಿಇಟಿಯಲ್ಲಿನ ತಲಾ ಶೇ. 50 ಅಂಕ ಪರಿಗಣಿಸಿ ಹೊಸ ರ‍್ಯಾಂಕ್ ಪಟ್ಟಿ ಪ್ರಕಟಿಸಲು ಕೆಇಎಗೆ ಹೈಕೋರ್ಟ್‌ ಆದೇಶ

0

ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ರ‍್ಯಾಂಕ್ ಪಟ್ಟಿ ತಯಾರಿಸಲು ವಿದ್ಯಾರ್ಥಿಗಳು ಪಿಯುಸಿಯಲ್ಲಿ ಪಡೆದಿರುವ ಶೇ. 50 ಅಂಕ ಹಾಗೂ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (ಸಿಇಟಿ) ಪಡೆದಿರುವ ಶೇ.50 ಅಂಕಗಳನ್ನು ಪರಿಗಣಿಸಿ ಹೊಸದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ರ‍್ಯಾಂಕ್ ಪಟ್ಟಿ ಪ್ರಕಟಿಸಬೇಕು ಎಂದು ಕರ್ನಾಟಕ ಹೈಕೋರ್ಟ್‌ ಶನಿವಾರ ಮಹತ್ವದ ತೀರ್ಪು ಪ್ರಕಟಿಸಿದೆ.

2020-21ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳು ಪಿಯು ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು 2022ನೇ ಸಾಲಿನಲ್ಲಿ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಪರಿಗಣಿಸುವುದಿಲ್ಲ ಎಂದಿದ್ದ ಕೆಇಎ ಆದೇಶ ಪ್ರಶ್ನಿಸಿ ಚಿಕ್ಕಮಗಳೂರಿನ ಆರ್‌ ಈಶ್ವರ್‌ ಸೇರಿದಂತೆ ಹಲವರು ಪ್ರತ್ಯೇಕವಾಗಿ ಸಲ್ಲಿಸಿದ್ದ ಒಟ್ಟು ಏಳು ಮನವಿಗಳ ವಿಚಾರಣೆಯನ್ನು ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಪ್ರಕಟಿಸಿತು.

ಪುನರಾವರ್ತಿತ ವಿದ್ಯಾರ್ಥಿಗಳು ಸಲ್ಲಿಸಿರುವ ಅರ್ಜಿಗಳನ್ನು ಮಾನ್ಯ ಮಾಡಲಾಗಿದೆ. ಕೆಇಎ ಜುಲೈ 30ರಂದು ಮಾಡಿದ್ದ ಆಕ್ಷೇಪಾರ್ಹವಾದ ಆದೇಶವನ್ನು ವಜಾ ಮಾಡಲಾಗಿದೆ. ಎಲ್ಲಾ ವಿದ್ಯಾರ್ಥಿಗಳು ಪಿಯುಸಿಯಲ್ಲಿ ಪಡೆದ ಶೇ. 50ರಷ್ಟು ಅಂಕಗಳು ಹಾಗೂ ಸಿಇಟಿಯಲ್ಲಿ ಪಡೆದ ಶೇ. 50ರಷ್ಟು ಅಂಕಗಳನ್ನು ಪರಿಗಣಿಸಿ ಹೊಸದಾಗಿ ರ‍್ಯಾಂಕ್ ಪಟ್ಟಿಯನ್ನು ಕೆಇಎ ಪ್ರಕಟಿಸಬೇಕು ಎಂದು ನ್ಯಾಯಾಲಯ ತೀರ್ಪಿನಲ್ಲಿ ಹೇಳಿದೆ.

ಪುನರಾವರ್ತಿತ ವಿದ್ಯಾರ್ಥಿಗಳ ದೃಷ್ಟಿಯಿಂದ ಸಿಇಟಿ-2022ರ ಮೌಲ್ಯಮಾಪನವು ತಾರತಮ್ಯದಿಂದ ಕೂಡಿದೆ. 2020-21ನೇ ಶೈಕ್ಷಣಿಕ ಸಾಲಿನ ಪಿಯು ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು 2022ನೇ ಸಾಲಿನಲ್ಲಿ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಪರಿಗಣಿಸುವುದಿಲ್ಲ ಎಂಬ ಕೆಇಎ ಆದೇಶವು ಸ್ವೇಚ್ಛೆ, ಅತಾರ್ಕಿಕ ಮತ್ತು ವಿವೇಚನಾಯುತವಾಗಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು.

ಪುನರಾವರ್ತಿ ವಿದ್ಯಾರ್ಥಿಗಳ ಪಿಯುಸಿ ಅಂಕಗಳನ್ನು ಪರಿಗಣಿಸದೇ ಸಿಇಟಿ ರ‍್ಯಾಂಕ್ ಪಟ್ಟಿ ಪ್ರಕಟಿಸಿರುವುದು ಸಿಇಟಿ-2006ರ ಪ್ರವೇಶ ನಿಯಮಗಳ ಉಲ್ಲಂಘನೆಯಾಗಿದೆ. ಹೀಗೆ ಮಾಡುವುದರಿಂದ ಪುನರಾವರ್ತಿತ ವಿದ್ಯಾರ್ಥಿಗಳ ರ‍್ಯಾಂಕಿಂಗ್‌ ಕಡಿಮೆಯಾಗಲಿದೆ. ಇದು ಪೂರ್ವಾಗ್ರಹದಿಂದ ಕೂಡಿದ್ದ, ಅಸಮಾನವಾಗಿದ್ದು, ನ್ಯಾಯಸಮ್ಮತವಲ್ಲ. ಅಲ್ಲದೇ, ಸ್ವಾಭಾವಿಕ ನ್ಯಾಯತತ್ವಕ್ಕೆ ವಿರುದ್ಧವಾದ ಕ್ರಮ ಎಂದು ಅರ್ಜಿದಾರರು ವಾದಿಸಿದ್ದರು.

ಒಂದು ಹಂತದಲ್ಲಿ ಪೀಠವು ಸಮತೋಲನ ಸಾಧಿಸುವ ನಿಟ್ಟಿನಲ್ಲಿ ಹೊಸತಾಗಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ಹಾಗೂ ಹಿಂದಿನ ವರ್ಷದ ವಿದ್ಯಾರ್ಥಿಗಳು, ಈ ಎರಡೂ ಕಡೆಯವರ ವಾದವನ್ನು ಆಲಿಸಿ ಅರ್ಜಿದಾರ ವಿದ್ಯಾರ್ಥಿಗಳು ಸಿಇಟಿಯಲ್ಲಿ ಪಡೆದಿರುವ ಶೇ.75 ಅಂಕ ಮತ್ತು ಪಿಯು ಪರೀಕ್ಷೆಯಲ್ಲಿ ಪಡೆದಿರುವ ಶೇ.25ರಷ್ಟು ಅಂಕ ಪರಿಗಣಿಸಿ ರ‍್ಯಾಂಕಿಂಗ್‌ ಪಟ್ಟಿ ಪ್ರಕಟಿಸಲು ಸಾಧ್ಯವೇ ಎಂಬ ಬಗ್ಗೆ ತನ್ನ ನಿಲುವು ತಿಳಿಸುವಂತೆ ಕೆಇಎಗೆ ತಿಳಿಸಿತ್ತು. ಇದನ್ನು ಕೆಇಎ ಒಪ್ಪಿರಲಿಲ್ಲ.

ಅರ್ಜಿದಾರರ ಪರವಾಗಿ ಹಿರಿಯ ವಕೀಲ ಡಿ ಆರ್‌ ರವಿಶಂಕರ್‌, ವಕೀಲರಾದ ಶತಭಿಷ್‌ ಶಿವಣ್ಣ ಮತ್ತಿತರರು ವಾದಿಸಿದ್ದರು. ಕೆಇಎಯನ್ನು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಧ್ಯಾನ್‌ ಚಿನ್ನಪ್ಪ ಪ್ರತಿನಿಧಿಸಿದ್ದರು.