ಮೈಸೂರು(Mysuru): ಶಿಕ್ಷಕರು ಸಮಾಜದ ಆಧಾರ ಸ್ತಂಭಗಳು, ನಮ್ಮಲ್ಲಿ ಉತ್ತಮವಾದದ್ದನ್ನು ಬೆಳಕಿಗೆ ತರುವಲ್ಲಿ ಮತ್ತು ದೇಶಕ್ಕೆ ಸೇವೆ ಸಲ್ಲಿಸಲು ನಮಗೆ ಸ್ಪೂರ್ತಿ ನೀಡುತ್ತಾರೆ ಎಂದು ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.
ವಿಜ್ಞಾನ ಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಭಾರತದ ಶ್ರೇಷ್ಠ ಕವಿ ಹಾಗೂ ಚಿಂತಕರೆನಿಸಿಕೊಂಡಿದ್ದ ರವೀಂದ್ರನಾಥ ಠಾಕೂರರು ಮೈಸೂರಿನಲ್ಲಿ ರಾಧಾಕೃಷ್ಣರವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಈ ಮಹಾನ್ ವ್ಯಕ್ತಿಗಳು ಪರಸ್ಪರರನ್ನು ಆಲಿಂಗಿಸಿಕೊಂಡಿದ್ದರು ಎಂದು ಪ್ರತ್ಯಕ್ಷದರ್ಶಿಗಳು ದಾಖಲಿಸಿದ್ದಾರೆ. ವಿಶ್ವವಿದ್ಯಾನಿಲಯಕ್ಕೆ ಸಂಬಂಧಿಸಿದ ಮಹಾನ್ ಘಟನೆಗಳಲ್ಲಿ ಇದೂ ಒಂದು ಎಂದು ಪ್ರೊ.ಜಿ.ಹೇಮಂತ್ ಕುಮಾರ್ ಸ್ಮರಿಸಿದರು.
ಡಾ. ರಾಧಾಕೃಷ್ಣನ್ ಅವರು ಮೈಸೂರನ್ನು ಬಿಟ್ಟು ಕಲ್ಕತ್ತಾಕ್ಕೆ ಹೋಗುವಾಗ ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಅವರನ್ನು ಬೀಳ್ಕೊಟ್ಟ ವಿಧಾನ ಮತ್ತು ಸನ್ನಿವೇಶವನ್ನು ಎ.ಎನ್. ಮೂರ್ತಿರಾಯರು ತಮ್ಮ ಪ್ರಬಂಧ ಒಂದರಲ್ಲಿ ಬಲು ಮನೋಜ್ಞವಾಗಿ ದಾಖಲಿಸಿದ್ದಾರೆ ಎಂದು ನೆನಪಿಸಿಕೊಂಡರು.
ಎಲ್ಲಾ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯನ್ನು ನೀಡುವಾಗ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಯೋಚಿಸಿ ಮಾರ್ಗದರ್ಶನವನ್ನು ನೀಡುವುದರ ಜೊತೆಗೆ ಶಿಕ್ಷಣವನ್ನು ನೀಡಬೇಕಾಗುತ್ತದೆ. ಶಿಕ್ಷಕರಿಲ್ಲದಿದ್ದರೆ ವಕೀಲರು ಐಟಿ, ವೈದ್ಯರಿಲ್ಲ, ಐಎಎಸ್ ಅಧಿಕಾರಿ ಇಲ್ಲ, ಸಂಶೋಧಕರು ಇಲ್ಲ, ಗಗನಯಾತ್ರಿ ಇಲ್ಲ. ಶಿಕ್ಷಕರು ತೋರಿಸುವ ಹಾದಿ ಬಹುಮುಖ್ಯ ಪಾತ್ರವನ್ನು ಹೊಂದಿರುತ್ತದೆ ಎಂದು ನುಡಿದರು.
ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ರೋಗ ಸಂಸ್ಥೆ ನಿರ್ದೇಶಕಿ ಡಾ.ಪ್ರತಿಮಾ ಮೂರ್ತಿ ಮಾತನಾಡಿ, ಯಶಸ್ಸು ಎಂಬುದು ರಾತ್ರೋರಾತ್ರಿ ಸಿಗುವುದಿಲ್ಲ. ನಿರಂತರ ಪರಿಶ್ರಮ ಹಾಗೂ ಬದ್ಧತೆ ಇದ್ದರಷ್ಟೇ ಅದು ಲಭಿಸುತ್ತದೆ. ಸಮಾಜಕ್ಕೆ ಒಳಿತು ಉಂಟು ಮಾಡುವ ಮೂಲಕ ಶಿಕ್ಷಕರು ಬದುಕಿನ ಸಾರ್ಥಕತೆ ಕಾಣಬೇಕು ಎಂದು ಕಿವಿಮಾತು ಹೇಳಿದರು.
ನಮ್ಮೆಲ್ಲರಿಗೂ ಮಾನಸಿಕ ಆರೋಗ್ಯ ತುಂಬಾ ಮುಖ್ಯ. ಯಶಸ್ಸು ಎಲ್ಲರಿಗೂ ಬೇಕು. ಈ ಹಾದಿಯಲ್ಲಿ ಮಾನಸಿಕ ಒತ್ತಡ ಸಹಜ. ಇದರ ನಿರ್ವಹಣೆ ತುಂಬಾ ಮುಖ್ಯ. ಗುರಿ ಮುಟ್ಟುವುದಷ್ಟೆ ಯಶಸ್ಸು ಅಲ್ಲ. ಬದುಕಿನ ವಿವಿಧ ಮಜಲುಗಳನ್ನು ನಾವು ಅನುಭವಿಸಬೇಕು. ಸಾಧನೆ ಹಾದಿಯನ್ನು ಒಂದು ವಾಕ್ಯದಲ್ಲಿ ಹೇಳಲು ಸಾಧ್ಯವಿಲ್ಲ. ಇಂದು ಕೇವಲ ದುಡ್ಡೇ ಯಶಸ್ಸು ಅನ್ನೋ ಹಾಗೆ ಆಗಿದೆ. ಮೌಲ್ಯ ಇಲ್ಲದಾಗಿದೆ. ಸಾಧನೆ ಜೊತೆಗೆ ಸಾರ್ಥಕತೆ ತುಂಬಾ ಮುಖ್ಯ. ಅರ್ಥಪೂರ್ಣ ಬದುಕು ನಮ್ಮದಾಗಬೇಕಿದೆ ಎಂದರು.
ಚಿನ್ಮಯ ಮಿಷನ್ ನ ಆದಿತ್ಯಾನಂದಾಜೀ ಮಾತನಾಡಿದರು. ಮೈಸೂರು ವಿವಿ ಕುಲಸಚಿವ ಪ್ರೊ. ಆರ್. ಶಿವಪ್ಪ, ಪರೀಕ್ಷಾಂಗ ಕುಲಸಚಿವ ಪ್ರೊ.ಎ.ಪಿ.ಜ್ಞಾನಪ್ರಕಾಶ್, ಸಿಂಡಿಕೇಟ್ ಸದಸ್ಯ ಈ.ಸಿ .ನಿಂಗರಾಜ್ ಗೌಡ ಸೇರಿದಂತೆ ಇತರರು ಇದ್ದರು.