ಮೈಸೂರು(Mysuru): ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಮಾವುತರು ಮತ್ತು ಕಾವಾಡಿಗರ ಮಕ್ಕಳೊಂದಿಗೆ ಹೆಜ್ಜೆ ಹಾಕಿ ಕುಣಿದು ಸಂಭ್ರಮಿಸಿ, ಮಕ್ಕಳಲ್ಲಿನ ಕಲೆಯನ್ನು ಪ್ರೋತ್ಸಾಹಿಸಿದರು.
ನಾಡಹಬ್ಬ ಮೈಸೂರು ದಸರಾ ಹಬ್ಬದ ಅಂಗವಾಗಿ ಮೈಸೂರು ಅರಮನೆ ಆವರಣದಲ್ಲಿ ಬೀಡುಬಿಟ್ಟಿರುವ ಮಾವುತರು ಮತ್ತು ಕಾವಾಡಿಗರ ಮಕ್ಕಳಿಗಾಗಿ ತೆರೆಯಲಾಗಿರುವ ತಾತ್ಕಾಲಿಕ ಟೆಂಟ್ ಶಾಲೆಯನ್ನು ಸಚಿವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಕ್ಕಳು ಸಚಿವರ ಎದರು ನೃತ್ಯ ಪ್ರದರ್ಶಿಸಿದರು. ಮಕ್ಕಳ ನೃತ್ಯವನ್ನು ತದೇಕಚಿತ್ತದಿಂದ ವೀಕ್ಷಿಸುತ್ತಿದ್ದ ಸಚಿವರು ನಂತರ ಅವರೊಂದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಮಕ್ಕಳು, ಶಿಕ್ಷಕರು ಸಹ ಸಚಿವರೊಂದಿಗೆ ಕುಣಿದು ಸಂತಸಪಟ್ಟರು.
ನಂತರ ಮಾವುತರು ಮತ್ತು ಕಾವಾಡಿಗರ ಕುಟುಂಬದವರ ಆರೋಗ್ಯದ ಹಿತದೃಷ್ಟಿಯಿಂದ ತೆರೆಯಲಾಗಿರುವ ಆರ್ಯುವೇದ ಪಂಚಕರ್ಮ ಇತ್ಯಾದಿ ಚಿಕಿತ್ಸೆಗಳನ್ನು ನೀಡುವ ಹೊರರೋಗಿಗಳ ಘಟಕಕ್ಕೆ ಸಚಿವರು ಚಾಲನೆ ನೀಡಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಮಾವುತರು ಮತ್ತು ಕಾವಾಡಿಗರ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗಬಾರದೆಂದು ತಾತ್ಕಾಲಿಕ ಶಾಲೆ ತೆರೆಯಲಾಗಿದೆ. ಸದ್ಯ 18 ಮಕ್ಕಳಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಮಕ್ಕಳು ಆಗಮಿಸಲಿದ್ದಾರೆ ಎಂದರು.
ದಸರಾ ನಿಮಿತ್ತ ಇಲ್ಲಿಗೆ ಆಗಮಿಸಿರುವ ಮಕ್ಕಳಿಗೆ ಸೂಕ್ತ ಶಿಕ್ಷಣ, ಮೌಲ ಸೌಕರ್ಯ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಕೊರತೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದರು.
ಶಾಲಾ ಉದ್ಘಾಟನೆ ಸಂದರ್ಭದಲ್ಲಿ ಮಕ್ಕಳ ಎರಡು ನೃತ್ಯ ಕಾರ್ಯಕ್ರಮ ನೋಡಿ ಖುಷಿಯಾಯಿತು. ಹೀಗಾಗಿ ಮಕ್ಕಳೊಂದಿಗೆ ಹೆಜ್ಜೆ ಹಾಕಿದೆ. ತುಂಬಾ ಸಂತೋಷವಾಯಿತು. ಮಕ್ಕಳು ಸಹ ಸಂಭ್ರಮಪಟ್ಟರು. ಮಕ್ಕಳಲ್ಲಿನ ಕಲೆಯನ್ನು ಪ್ರೋತ್ಸಾಹಿಸಲು ಹೆಜ್ಜೆ ಹಾಕಿದೆ ಎಂದು ಹೇಳಿದರು.
ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಾಕಷ್ಟು ಹೆಸರುಗಳು ಬಂದಿವೆ. ಹೊಸಬರಿಗೆ ಅವಕಾಶ ನೀಡಬೇಕು. ಮೈಸೂರು ಸುತ್ತಮುತ್ತಲಿನ ಭಾಗದವರಿಗೆ ಪ್ರಾಶಸ್ತ್ಯ ನೀಡಬೇಕು. ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಿರುವವರ ಪೂರ್ಣ ಮಾಹಿತಿ ಕಲೆಹಾಕಬೇಕು ಎಂದು ಜಿಲ್ಲಾ ಪಂಚಾಯತ್ ಸಿಇಒ ಅವರಿಗೆ ಸೂಚಿಸಲಾಗಿದೆ ಎಂದರು.