ಮನೆ ಸುದ್ದಿ ಜಾಲ ಬದಲಾದ ಜೀವನ ಶೈಲಿ, ಒತ್ತಡದಿಂದ ಹೃದಯಾಘಾತ ಹೆಚ್ಚಳ: ಡಾ.ಸಿ.ಎನ್ ಮಂಜುನಾಥ್

ಬದಲಾದ ಜೀವನ ಶೈಲಿ, ಒತ್ತಡದಿಂದ ಹೃದಯಾಘಾತ ಹೆಚ್ಚಳ: ಡಾ.ಸಿ.ಎನ್ ಮಂಜುನಾಥ್

0

ಮೈಸೂರು(Mysuru): ಜನರ ಜೀವನ ಶೈಲಿ ಬದಲಾಗಿದೆ. ಬದಲಾದ ಜೀವನ ಶೈಲಿಯಿಂದಾಗಿ ಅತಿಯಾದ ಒತ್ತಡದಿಂದ ಹೃದಯಾಘಾತ ಹೆಚ್ಚಾಗಿ ಸಂಭವಿಸುತ್ತಿದೆ ಬೆಂಗಳೂರಿನ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್ ಮಂಜುನಾಥ್ ತಿಳಿಸಿದರು.

ಇಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಿಂದ ಏರ್ಪಡಿಸಲಾಗಿದ್ದ ಹೃದ್ರೋಗ ಸಮಸ್ಯೆ ಸಂಬಂಧ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಾಯು ಮಾಲಿನ್ಯ ಹೆಚ್ಚಳ: ನಮ್ಮ ದೇಶದಲ್ಲಿ ಶೇ.50ರಷ್ಟು ಸಾವುಗಳು ಹೃದಯಾಘಾತ, ಹೃದಯ ಸಂಬಂಧಿ ಕಾಯಿಲೆ, ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ, ಕ್ಯಾನ್ಸರ್​ನಂತಹ ರೋಗಗಳಿಂದ ಸಂಭವಿಸುತ್ತಿವೆ. ವಾಹನಗಳು, ಕಾರ್ಖಾನೆಗಳು ಹೊರಸೂಸುವ ಹೊಗೆಯಿಂದಾಗಿ ವಾಯು ಮಾಲಿನ್ಯ ಹೆಚ್ಚಾಗುತ್ತಿದೆ. ಮಾಲಿನ್ಯವಾದ ಗಾಳಿಯಲ್ಲೇ ಉಸಿರಾಡುವುದು ಹೃದಯಾಘಾತಕ್ಕೆ ಕಾರಣವಾಗುತ್ತಿದೆ ಎಂದು ಹೇಳಿದರು.

ಅನುವಂಶೀಯ ಕಾರಣದಿಂದ ನಟ ಪುನೀತ್’ಗೆ ಹೃದಯಾಘಾತ:

ದಿ. ಪುನೀತ್ ರಾಜ್​​​ಕುಮಾರ್ ಕುಟುಂಬಸ್ಥರಿಗೆ ಹೃದಯ ಸಂಬಂಧಿ ತೊಂದರೆಗಳಿದ್ದು, ಅನುವಂಶೀಯ ಕಾರಣಗಳಿಂದ ಹೃದಯಾಘಾತ ಉಂಟಾಗಿ ಸಾವನ್ನಪ್ಪಿದ್ದಾರೆ. ಪುನೀತ್ ಅವರ ಸಹೋದರರಾದ ರಾಘವೇಂದ್ರ ರಾಜ್​​ಕುಮಾರ್, ಶಿವರಾಜ್​​​ಕುಮಾರ್ ಇಬ್ಬರಿಗೂ ಹೃದಯ ಸಂಬಂಧಿ ತೊಂದರೆಗಳಾಗಿದ್ದು, ಅದು ಅನುವಂಶೀಯವಾಗಿ ಬಂದಿರುವುದಾಗಿದೆ ಎಂದು ತಿಳಿಸಿದರು.

ಹೃದ್ರೋಗಕ್ಕೆ ತುತ್ತಾಗುತ್ತಿರುವ ವಯಸ್ಕರಲ್ಲಿ ಶೇಕಡ 50ರಷ್ಟು ಧೂಮಪಾನಿಗಳಾಗಿದ್ದಾರೆ. ಇನ್ನೂ ಕೆಲವರಿಗೆ ಅನುವಂಶೀಯವಾಗಿಯೂ ಹೃದಯಾಘಾತ ಆಗುವ ಸಂಭವವಿದೆ ಎಂದರು.

ಸಕಾಲಕ್ಕೆ ವೈದ್ಯಕೀಯ ತಪಾಸಣೆ ಮಾಡಿಸಿ: ಹೃದಯಾಘಾತ ಸಂಭವಿಸಿದಾಗ ತಡ ಮಾಡದೇ ಚಿಕಿತ್ಸೆ ಪಡೆಯಬೇಕು. 30 ನಿಮಿಷ ತಡ ಮಾಡಿದರೆ ಸಾವಿನ‌ ಪ್ರಮಾಣ ಶೇ.7ರಷ್ಟು ಹೆಚ್ಚುತ್ತಾ ಹೋಗುತ್ತದೆ. ಕೂಡಲೇ ಪ್ರಾಥಮಿಕ ಚಿಕಿತ್ಸೆ ಪಡೆಯುವುದರಿಂದ ಸಾವನ್ನು ತಡೆಯಬಹುದು. ಜೊತೆಗೆ 35 ವರ್ಷ ದಾಟಿದ ಪುರುಷರು, 45 ವರ್ಷ ದಾಟಿದ ಮಹಿಳೆಯರು ಸಕಾಲಕ್ಕೆ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದರು.

ಶೇ.50 ರಷ್ಟು ಸೋಮಾರಿಗಳು: ಈ ಮೊದಲು ಹೃದಯ ಸಂಬಂಧಿ ಕಾಯಿಲೆಗಳು ಪಟ್ಟಣಗಳಿಗೆ ಮಾತ್ರ ಸೀಮಿತ ಎಂದು ಹೇಳಲಾಗುತ್ತಿತ್ತು. ಇಂದು ಬದಲಾದ ಜೀವನ ಶೈಲಿಯಿಂದ ಹಳ್ಳಿಯಲ್ಲಿಯೂ ಹೃದಯಾಘಾತ ಸಂಖ್ಯೆ ಹೆಚ್ಚಾಗುತ್ತಿವೆ. ಕಾರಣ, ಜನರು ನಿರಾಯಾಸ ಜೀವನದತ್ತ ವಾಲುತ್ತಿರುವುದಾಗಿದೆ. ಭಾರತ ದೇಶದಲ್ಲೇ ಶೇ.50ರಷ್ಟು ಜನರು ಸೋಮಾರಿಗಳು ಕಂಡು ಬರುತ್ತಿರುವುದು ದುರ್ದೈವ ಸಂಗತಿ.

ಹಳ್ಳಿಗಳಲ್ಲಿ ವೈದ್ಯರಿಗೆ ಪೂರಕ ವಾತಾವರಣ ನಿರ್ಮಿಸಿ:  ಹಳ್ಳಿಗಳಲ್ಲಿ ಕರ್ತವ್ಯ ನಿರ್ವಹಿಸಲು ಬಹುತೇಕ ವೈದ್ಯರು ಸಿದ್ಧರಿದ್ದಾರೆ‌. ಆದರೆ ಹಳ್ಳಿಗಳಲ್ಲಿ ಕರ್ತವ್ಯ ನಿರ್ವಹಿಸಲು ಪೂರಕ ವಾತಾವರಣವಿಲ್ಲ. ಹಳ್ಳಿಗಳಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರ ಮೇಲೆ ಸ್ಥಳೀಯ ಜನಪ್ರತಿನಿಧಿಗಳು ದಬ್ಬಾಳಿಕೆ ನಡೆಸುತ್ತಾರೆ. ಹಳ್ಳಿಗಳಲ್ಲಿ ವೈದ್ಯರು ಕರ್ತವ್ಯ ನಿರ್ವಹಿಸಲು ಸರ್ಕಾರ ಪೂರಕ ವಾತಾವರಣ ನಿರ್ಮಿಸಬೇಕು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.