ಮನೆ ರಾಜಕೀಯ ಸಿದ್ದರಾಮಯ್ಯ ಸರ್ಕಾರದಲ್ಲಿ ನಡೆದ ಹಗರಣಗಳ ತನಿಖೆ ಮಾಡಿಸುತ್ತೇವೆ: ನಳಿನ್‌ ಕುಮಾರ್ ಕಟೀಲ್

ಸಿದ್ದರಾಮಯ್ಯ ಸರ್ಕಾರದಲ್ಲಿ ನಡೆದ ಹಗರಣಗಳ ತನಿಖೆ ಮಾಡಿಸುತ್ತೇವೆ: ನಳಿನ್‌ ಕುಮಾರ್ ಕಟೀಲ್

0

ಮೈಸೂರು(Mysuru): ಸಿದ್ದರಾಮಯ್ಯ ಸರ್ಕಾರವಿದ್ದಾಗ ನಡೆದಿರುವ ಹಗರಣಗಳ ತನಿಖೆ ಮಾಡಿಸುತ್ತೇವೆ. ಇದಕ್ಕಾಗಿ ಸಮರ್ಪಕ ದಾಖಲಾತಿಗಳನ್ನು ಸಂಗ್ರಹಿಸುತ್ತಿದ್ದೇವೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ತಿಳಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಸೋಮವಾರ ಮಾತನಾಡಿದ ಅವರು, ಸಂಪೂರ್ಣ ತನಿಖೆ ಮಾಡುತ್ತೇವೆ. ತಪ್ಪಿತಸ್ಥರನ್ನು ಒಳಗೆ ಕೂರಿಸುತ್ತೇವೆ ಎಂದರು.

ಅರ್ಕಾವತಿ ರೀ ಡೂ, ಹಾಸಿಗೆ ಹಗರಣ, ಇಂಧನ ಇಲಾಖೆ ಹಗರಣ ಇವೆಲ್ಲವನ್ನೂ ಸಿದ್ದರಾಮಯ್ಯ ಮುಚ್ಚಿಡುವ ಕೆಲಸ‌ ಮಾಡಿದ್ದಾರೆ. ಅವುಗಳಿಗೆ ಸಂಬಂಧಪಟ್ಟ ದಾಖಲೆಗಳನ್ನು ಬಚ್ಚಿಟ್ಟಿದ್ದರು. ಅವನ್ನೆಲ್ಲಾ ಹೊರಗೆ ತೆಗೆಯುವ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದು ಹೇಳಿದರು.

ನಾವು‌ ವಿರೋಧ ಪಕ್ಷದಲ್ಲಿದ್ದಾಗಲೂ ಸಿದ್ದರಾಮಯ್ಯ ಹಗರಣದ ವಿರುದ್ಧ ಧ್ವನಿ ಎತ್ತಿದ್ದೆವು. ಹೋರಾಟ ಮಾಡಿದ್ದೆವು. ಸಮಾಜವಾದಿ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ನೈತಿಕತೆ ಇದ್ದಿದ್ದರೆ ಅವರೇ ತನಿಖೆ ಮಾಡುತ್ತಿದ್ದರು. ಆದರೆ, ಅವರು ಮಾಡಲಿಲ್ಲ; ಎಲ್ಲವನ್ನೂ ಮುಚ್ಚಿಟ್ಟರು ಎಂದು ದೂರಿದರು.

ಸಿದ್ದರಾಮಯ್ಯ ಯಾವುದೇ ಆಧಾರ, ದಾಖಲೆಗಳಿಲ್ಲದೆ ಭ್ರಷ್ಟಾಚಾರದ ಆರೋಪವನ್ನು ನಮ್ಮ ಸರ್ಕಾರದ ವಿರುದ್ಧ ಮಾಡುತ್ತಿದ್ದಾರೆ. ಕಾಂಗ್ರೆಸ್‌ನ ಅವರ ನಾಯಕ ರಾಹುಲ್ ಗಾಂಧಿ ಕೂಡ ಇದೇ ರೀತಿ ರಫೇಲ್ ಸೇರಿದಂತೆ ಹಲವು ಆರೋಪ ಮಾಡಿದ್ದರು. ಅದೇ ಕಥೆ ಈಗಲೂ ಆಗುತ್ತಿದೆ ಎಂದು ಟೀಕಿಸಿದರು.

ಕಾಂಗ್ರೆಸ್ ವರಿಷ್ಠರು, ಉಪಾಧ್ಯಕ್ಷರು, ಕೆಪಿಸಿಸಿ ಅಧ್ಯಕ್ಷರು ಯಾವ ಪ್ರಕರಣದಲ್ಲಿ ಜಾಮೀನಿನ ಮೇಲಿದ್ದಾರೆ ಎಂಬುದನ್ನು ನೋಡಿಕೊಳ್ಳಲಿ ಎಂದು ವ್ಯಂಗ್ಯವಾಡಿದರು.