ಮನೆ ರಾಜ್ಯ ದಸರಾಗೆ ಪ್ರಧಾನಿ ಬದಲಾಗಿ ಕೇಂದ್ರದ ನಾಲ್ವರು ಮಂತ್ರಿಗಳು ಆಗಮಿಸುವ ನಿರೀಕ್ಷೆ: ಸಚಿವ ಎಸ್ ಟಿ ಸೋಮಶೇಖರ್

ದಸರಾಗೆ ಪ್ರಧಾನಿ ಬದಲಾಗಿ ಕೇಂದ್ರದ ನಾಲ್ವರು ಮಂತ್ರಿಗಳು ಆಗಮಿಸುವ ನಿರೀಕ್ಷೆ: ಸಚಿವ ಎಸ್ ಟಿ ಸೋಮಶೇಖರ್

0

ಮೈಸೂರು(Mysuru): ದಸರಾ ಜಂಬೂ ಸವಾರಿಯ ಪುಷ್ಪಾರ್ಚನೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುವುದಿಲ್ಲ, ಬದಲಾಗಿ ಕೇಂದ್ರದ 4 ಜನ ಮಂತ್ರಿಗಳು ದಸರಾ ಉದ್ಘಾಟನೆಗೆ ಆಗಮಿಸುವ ನಿರೀಕ್ಷೆಯಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಸ್ಪಷ್ಟನೆ ನೀಡಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದಸರಾ ಉದ್ಘಾಟನೆಗೆ ಸೆ.26 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗವಹಿಸಲಿದ್ದು, ಅವರ ಕಾರ್ಯಕ್ರಮದ ಪಟ್ಟಿ ಅಂತಿಮವಾಗುತ್ತಿದೆ. ಅವರು ಮೈಸೂರು ಅರಮನೆಗೆ ಭೇಟಿ ನೀಡುವ ಬಗ್ಗೆ ಮಾಹಿತಿ ಕೇಳಲಾಗಿದೆ. ಆದರೆ, ರಾಷ್ಟ್ರಪತಿ ಭವನದಿಂದ ಅರಮನೆ ಭೇಟಿ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ, ಬಂದಮೇಲೆ ಕಾರ್ಯಕ್ರಮ ಪಟ್ಟಿ ಅಂತಿಮವಾಗುತ್ತದೆ ಎಂದರು.

ರಾಷ್ಟ್ರಪತಿ ಅವರ ಕಾರ್ಯಕ್ರಮ ಪಟ್ಟಿಯ ಆಧಾರದ ಮೇಲೆ ಚಾಮುಂಡಿ ಬೆಟ್ಟದಲ್ಲಿ ನಡೆಯುವ ದಸರಾ ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ಯಾರಿರಬೇಕು ಎಂಬುದು ಅಂತಿಮವಾಗಲಿದೆ ಎಂದರು.

ಈ ಬಾರಿ ದಸರಾ ಪಾಸ್ ಹಾಗೂ ಗೋಲ್ಡ್ ಪಾಸ್ ಬಗ್ಗೆ ಇಂದು ಸಭೆ ನಡೆಯಲಿದ್ದು, ಸಂಜೆ ವೇಳೆಗೆ ಅಂತಿಮವಾಗಲಿದೆ. ಇದರ ಜೊತೆಗೆ ಯುವ ದಸರಾದಲ್ಲಿ ಯಾವೆಲ್ಲ ಕಾರ್ಯಕ್ರಮಗಳು ಇರಲಿವೆ ಎಂಬುದು ಸಹ ಇಂದೇ ಅಂತಿಮವಾಗಲಿದೆ. ದಸರಾಗೆ ರಾಜ್ಯ ಸರ್ಕಾರದಿಂದ ಹಣ ಬಿಡುಗಡೆ ಮಾಡುವುದಾಗಿ ಸ್ವತಃ ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ಹೇಳಿದರು.

ಈ ಬಾರಿ ಮೈಸೂರು ನಗರದಲ್ಲಿ ಆಕರ್ಷಕವಾಗಿ ದೀಪಾಲಂಕಾರ ಮಾಡಲು 4.5 ಕೋಟಿ ಹಣ ನಿಗದಿ ಮಾಡಲಾಗಿದೆ. ಎಲ್ಲ ಕೆಲಸವೂ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.