ಮನೆ ರಾಜಕೀಯ ಆಷಾಢಭೂತಿತನದ ರಾಜಕಾರಣಿಗಳನ್ನು ದೂರವಿಡಿ: ಪ್ರಲ್ಹಾದ್ ಜೋಶಿ

ಆಷಾಢಭೂತಿತನದ ರಾಜಕಾರಣಿಗಳನ್ನು ದೂರವಿಡಿ: ಪ್ರಲ್ಹಾದ್ ಜೋಶಿ

0

ಮೈಸೂರು(Mysuru): ಆಷಾಢಭೂತಿತನದ ರಾಜಕಾರಣಿಗಳನ್ನು ದೂರವಿಡಬೇಕು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದರು.

ನಗರದ ವಿದ್ಯಾರಣ್ಯಪುರಂನ ರಾಮಲಿಂಗೇಶ್ವರ ದೇವಸ್ಥಾನದ ಉದ್ಯಾನದಲ್ಲಿ ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ಸೋಮವಾರ ಆಯೋಜಿಸಿದ್ದ ‘ಮೋದಿ ಯುಗ ಉತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆಡಳಿತ ನಡೆಸುವವರಿಗೆ ವಿರೋಧಿಸುವವರು ಇರಬೇಕು ನಿಜ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿರೋಧಿಸುವ ಬರದಲ್ಲಿ ದೇಶವನ್ನೇ ವಿರೋಧಿಸುವುದು, ಭಾರತ ಮಾತೆಯನ್ನು ಅವಹೇಳನ ಮಾಡುವವರನ್ನು ಗೌರವಿಸುವುದು ಎಷ್ಟು ಸರಿ? ಎಂದರು.

ಕಾಂಗ್ರೆಸ್‌ನವರದ್ದು ಭಾರತ್‌ ಜೋಡೊ ಯಾತ್ರೆ ಅಲ್ಲ; ಭಾರತ್‌ ತೋಡೊ (ಒಡೆಯುವ) ಕಾರ್ಯಕ್ರಮ. ಭಾರತ್ ಜೋಡೊ ನಡೆಸುತ್ತಿರುವವರು, ಭಾರತ್ ತೋಡೊ ಮಾಡುವವರನ್ನು ಮೊದಲು ಭೇಟಿಯಾಗಿದ್ದಾರೆ. ಭಾರತ ಮಾತೆಯ ಬಗ್ಗೆ ಅತ್ಯಂತ ಅವಹೇಳಕನಾರಿಯಾಗಿ ಮಾತನಾಡಿದ್ದ ಪಾದ್ರಿಯನ್ನು ಭೇಟಿಯಾಗಿ, ಭಾರತಾಂಬೆಯನ್ನು ಪೂಜಿಸುವ ದೇಶದ ಜನರಿಗೆ ಅಪಮಾನ ಎಸಗಿದ್ಡಾರೆ. ಆ ಯಾತ್ರೆ ನಡೆಸುತ್ತಿರುವವರಿಗೆ ನಾಚಿಕೆ ಆಗಬೇಕಲ್ಲವೇ? ಎಂದು ಕೇಳಿದರು.

ಬಿಜೆಪಿ ಸರ್ಕಾರ ಬಂದರೆ ದೇಶ ಚೂರಾಗುತ್ತದೆ ಎಂದು ಕಾಂಗ್ರೆಸ್‌ನವರು ಅಪಪ್ರಚಾರ ಮಾಡಿದ್ದರು. ಆದರೆ, ಜಾಗತಿಕವಾಗಿ ಭಾರತವು ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಮೋದಿ ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲೆಲ್ಲೂ ಒಂದೇ ಒಂದು ಭಯೋತ್ಪಾದನೆಯ ಘಟನೆ ನಡೆದಿಲ್ಲ‌. ಎಲ್ಲೂ ಬಾಂಬ್ ಸ್ಫೋಟವಾಗಿಲ್ಲ. ಜನರು ಸುರಕ್ಷಿತವಾಗಿದ್ದಾರೆ ಎಂದು ಸಮರ್ಥಿಸಿಕೊಂಡರು.

ಜಾಗತಿಕ ಮಟ್ಟದಲ್ಲಿ ಹಾಗೂ ಮಾರುಕಟ್ಟೆಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳದೇ ಕಾಂಗ್ರೆಸ್‌ನವರು ಟೀಕೆಯಲ್ಲಿ ತೊಡಗಿದ್ದಾರೆ ಎಂದು ಟೀಕಿಸಿದರು.

ಕಾರ್ಯಕ್ರಮದಲ್ಲಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದಮೂರ್ತಿ, ಬಿಜೆಪಿ ಮುಖಂಡ ಎಚ್‌.ವಿ.ರಾಜೀವ್, ಮೇಯರ್ ಶಿವಕುಮಾರ್, ಉಪ ಮೇಯರ್‌ ಡಾ.ಜಿ.ರೂಪಾ ಯೋಗೇಶ್, ನಗರಪಾಲಿಕೆ ಸದಸ್ಯ ಮಾ.ವಿ.ರಾಮಪ್ರಸಾದ್, ಬಿಜೆಪಿ ನಗರ ಘಟಕದ ಅಧ್ಯಕ್ಷ ಟಿ.ಎಸ್.ಶ್ರೀವತ್ಸ ಇದ್ದರು.