ಮೈಸೂರು(Mysuru): ನೈಋತ್ಯ ರೈಲ್ವೆಯ ಮೈಸೂರು ವಿಭಾಗವು “ಸ್ವಚ್ಛ ರೈಲು, ಸ್ವಚ್ಛ ಭಾರತ” ಯೋಜನೆಯ ಅಡಿಯಲ್ಲಿ ಸ್ವಚ್ಛತಾ ಪಖ್ವಾಡ ಪಾಕ್ಷಿಕ ಅಭಿಯಾನದ ಭಾಗವಾಗಿ ಇಂದು ಪ್ರಮುಖ ನಿಲ್ದಾಣಗಳಲ್ಲಿ ವಿವಿಧ ಸ್ವಚ್ಛತಾ ಸಂಬಂಧಿತ ಚಟುವಟಿಕೆಗಳನ್ನು ನಡೆಸಲಾಯಿತು.
ಮೈಸೂರು ಮತ್ತು ದಾವಣಗೆರೆ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್‌ಗಳು, ಹಳಿಗಳು, ಡ್ರೈನ್‌ಗಳು ಮತ್ತು ಶೌಚಾಲಯಗಳಲ್ಲಿ ತೀವ್ರವಾದ ಯಾಂತ್ರೀಕೃತ ಸ್ವಚ್ಛತಾ ಅಭಿಯಾನವನ್ನು ನಡೆಸಲಾಯಿತು.
ರೈಲ್ವೆ ಅಧಿಕಾರಿಗಳು, ರೈಲ್ವೆ ನಿಲ್ದಾಣಗಳಲ್ಲಿ ಬ್ಯಾನರ್ ಮತ್ತು ಫಲಕಗಳೊಂದಿಗೆ ಜಾಗೃತಿ ಅಭಿಯಾನಗಳನ್ನು ನಡೆಸಿ, ರೈಲ್ವೆ ಪ್ರಯಾಣಿಕರು ಏಕ ಬಳಕೆ ಪ್ಲಾಸ್ಟಿಕ್ ಅನ್ನು ಬಳಸದಂತೆ ಮತ್ತು ಯಾವಾಗಲೂ ಪ್ಲಾಸ್ಟಿಕ್ ಪರ್ಯಾಯಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ತಿಳಿಸಿ ಪ್ಲಾಟ್‌ಫಾರ್ಮ್‌ಗಳು ಅಥವಾ ಟ್ರ್ಯಾಕ್‌ಗಳಲ್ಲಿ ಕಸ ಎಸೆಯುವುದು ಮತ್ತು ಉಗುಳುವುದನ್ನು ತಪ್ಪಿಸುವಂತೆ ಜಾಗೃತಿ ಮೂಡಿಸಿದರು.
ಆಹಾರ ಮಳಿಗೆಗಳು, ಕ್ಯಾಂಟೀನ್‌ಗಳು ಮತ್ತು ರೈಲು ಬದಿಯ ವ್ಯಾಪಾರಿಗಳಿಗೆ ಪ್ಲಾಸ್ಟಿಕ್‌ನಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು ಮತ್ತು ಏಕ ಬಳಕೆಯ ಪ್ಲಾಸ್ಟಿಕ್ ಬಳಸದಂತೆ ಎಚ್ಚರಿಕೆ ನೀಡಲಾಯಿತು. ತ್ಯಾಜ್ಯವನ್ನು ಸರಿಯಾಗಿ ವಿಂಗಡಿಸುವುದನ್ನು ಖಂಡಿತಪಡಿಸಿಕೊಳ್ಳಲು ಅವರಿಗೆ ಸಲಹೆ ನೀಡಲಾಯಿತು.
ಕಸ ಹಾಕದಿರುವ ಬಗ್ಗೆ ಮತ್ತು ಏಕ ಬಳಕೆಯ ಪ್ಲಾಸ್ಟಿಕ್‌ನ ನಿಷೇಧದ ಕುರಿತು ವ್ಯಾಪಕವಾಗಿ ಪ್ರಯಾಣಿಕರಿಗೆ ವಿಷಯ ತಲುಪಿಸಲು ವಿವಿಧ ನಿಲ್ದಾಣಗಳ ಪ್ರಯಾಣಿಕರ ಘೋಷಣಾ ವ್ಯವಸ್ಥೆ ಮತ್ತು ವೀಡಿಯೊ ಪರದೆಗಳಲ್ಲಿ ಆಡಿಯೋ ಮತ್ತು ದೃಶ್ಯ ಪ್ರಕಟಣೆಗಳನ್ನು ನಿಯಮಿತವಾಗಿ ತೋರಿಸುವುದರ ಮೂಲಕ ಜಾಗೃತಿ ನೀಡಲಾಗುತ್ತಿದೆ. ಸ್ವಚ್ಛತೆ ಮತ್ತು ಪ್ಲಾಸ್ಟಿಕ್ ಉಪಯೋಗದ ಬದಲಿಯಾಗಿ ಪರ್ಯಾಯವಾಗಿ ಉಪಯೋಗಿಸುವ ವಸ್ತುಗಳ ಬಗ್ಗೆ ತಿಳಿವಳಿಕೆ ಮತ್ತು ಜಾಗೃತಿ ಪಲಕಗಳನ್ನು ನಿಲ್ದಾಣಗಳ ಪ್ರವೇಶ/ನಿರ್ಗಮನ ಮತ್ತು ಇತರ ಪ್ರಮುಖ ಸ್ಥಳಗಳಲ್ಲಿ ಪ್ರದರ್ಶಿಸಲಾಗಿದೆ.
ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರ್ವಾಲ್ ಮಾತನಾಡಿ, ರೈಲ್ವೆಯು ಪರಿಸರ ಸ್ನೇಹಿಯಾದ ಬೃಹತ್ ಸಾರಿಗೆ ವಿಧಾನವಾಗಿದ್ದು, ಸ್ವಚ್ಛ ಮತ್ತು ಹಸಿರು ಪರಿಸರವನ್ನು ಉತ್ತೇಜಿಸುವಲ್ಲಿ ಯಾವಾಗಲೂ ಮುಂಚೂಣಿಯಲ್ಲಿದೆ ಎಂದು ತಿಳಿಸಿ ಪ್ರಯಾಣಿಕರು ಕಸದ ತೊಟ್ಟಿಗಳನ್ನು ಬಳಸಲು ಮನವಿ ಮಾಡಿದರು. ಮತ್ತು ನಿಲ್ದಾಣಗಳ ಆವರಣ ಮತ್ತು ಹಳಿಗಳಲ್ಲಿ ಕಸ ಹಾಕುವುದನ್ನು ತಪ್ಪಿಸಿ ಹಾಗು ರೈಲ್ವೆ ಆವರಣದಿಂದ ಪ್ಲಾಸ್ಟಿಕ್ ತ್ಯಾಜ್ಯವನ್ನು ಹೊರಹಾಕಲು ರೈಲ್ವೆಗೆ ಸಹಾಯ ಮಾಡಿ ಎಂದು ಕೋರಿದರು.