ಮನೆ ರಾಜ್ಯ ರತ್ನ ಖಚಿತ ಸಿಂಹಾಸನ ಜೋಡಣಾ ಕಾರ್ಯ ಪೂರ್ಣ

ರತ್ನ ಖಚಿತ ಸಿಂಹಾಸನ ಜೋಡಣಾ ಕಾರ್ಯ ಪೂರ್ಣ

0

ಮೈಸೂರು: ದಸರಾ ಮಹೋತ್ಸವದ ಪ್ರಯುಕ್ತ ಅರಮನೆಯಲ್ಲಿ ರತ್ನಖಚಿತ ಸಿಂಹಾಸನದ ಜೋಡಣೆ ಕಾರ್ಯವು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಅವರ ನೇತೃತ್ವದಲ್ಲಿ ಮಂಗಳವಾರ ಸುಸೂತ್ರವಾಗಿ ನಡೆಯಿತು.‌

ಬೆಳಿಗ್ಗೆ 7 ರಿಂದ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆದವು. ಅರಮನೆ ಪುರೋಹಿತರ ಸಮ್ಮುಖದಲ್ಲಿ ಗಣಪತಿ ಹೋಮ, ಚಾಮುಂಡಿ ಪೂಜೆ, ಶಾಂತಿ ಹೋಮ ಮಾಡಲಾಯಿತು. ಆ ಬಳಿಕ ಅರಮನೆಯ ಭದ್ರತಾ ಕೊಠಡಿಯಲ್ಲಿದ್ದ ಸಿಂಹಾಸನದ ಬಿಡಿ ಭಾಗಗಳನ್ನು ದರ್ಬಾರ್‌ ಹಾಲ್‌ಗೆ ತಂದು ತರಲಾಯಿತು. ಮಧ್ಯಾಹ್ನ 1ರ ವೇಳೆಗೆ ಜೋಡಣೆ ಕಾರ್ಯ ಪೂರ್ಣಗೊಂಡಿತು ಎಂದು ಅರಮನೆಯ ಮೂಲಗಳು ತಿಳಿಸಿವೆ.

ಬೆಳಿಗ್ಗೆ 10.45 ರಿಂದ 11.05ರವರೆಗಿನ ಶುಭಮುಹೂರ್ತದಲ್ಲಿ ಸಿಂಹಾಸನದ 13 ಬಿಡಿಭಾಗಗಳ ಜೋಡಣಾ ಕಾರ್ಯ ನಡೆಯಿತು. ಅರಮನೆಯಲ್ಲಿ ಶರನ್ನವರಾತ್ರಿಯು ಸೆ.26ರಿಂದ ಅ.5ರವರೆಗೆ ಪ್ರಮೋದಾದೇವಿ ಒಡೆಯರ್‌ ನೇತೃತ್ವದಲ್ಲಿ ನಡೆಯಲಿದ್ದು, ವಿವಿಧ ಪೂಜಾ ಕಾರ್ಯಗಳು ನೆರವೇರಲಿವೆ.

ಸಿಂಹಾಸನ ಜೋಡಣಾ ಕಾರ್ಯಕ್ಕೆ ಮಾಧ್ಯಮದವರೂ ಸೇರಿದಂತೆ ಎಲ್ಲರಿಗೂ ನಿರ್ಬಂಧ ವಿಧಿಸಲಾಗಿತ್ತು. ಜೋಡಿಸಿದವರು ಯಾರು ಎಂಬ ಮಾಹಿತಿಯನ್ನೂ ಗೌಪ್ಯವಾಗಿಡಲಾಯಿತು.

ಯದುವೀರ್ 8ನೇ ದರ್ಬಾರ್: ಸೆ.26ರ ಸೋಮವಾರ ಖಾಸಗಿ ದರ್ಬಾರ್‌ನ ಪೂಜಾ ಕಾರ್ಯಕ್ರಮಗಳು ಬೆಳಿಗ್ಗೆ 5.30ರಿಂದ ಮಧ್ಯಾಹ್ನ 1.30ವರೆಗೆ ನಡೆಯಲಿವೆ.

ಇದಕ್ಕೂ ಮೊದಲು ಸಿಂಹಾಸನಕ್ಕೆ ಸಿಂಹದ ಮೂರ್ತಿ ಜೋಡಿಸುವ ಕಾರ್ಯ ನಡೆಯಲಿದೆ. ಕಂಕಣಧಾರಣೆ, ಕಳಸ ಪೂಜೆ ಸೇರಿ ಇತರ ಧಾರ್ಮಿಕ ಆಚರಣೆ ಬಳಿಕ, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ 8ನೇ ಭಾರಿ ಸಿಂಹಾಸನವೇರಿ ಖಾಸಗಿ ದರ್ಬಾರ್ ನಡೆಸಲಿದ್ದಾರೆ.

ಅ.4ರ ಮಂಗಳವಾರದಂದು ಬೆಳಿಗ್ಗೆ 5.30ರಿಂದ 1.30ರವರೆಗೆ ಆಯುಧಪೂಜೆ ಕಾರ್ಯಕ್ರಮಗಳು ನಡೆಯಲಿವೆ. ಬೆಳಿಗ್ಗೆ 8.10ಕ್ಕೆ ಅರಮನೆಯ ಆನೆ ಬಾಗಿಲು ಮೂಲಕ ಆಯುಧಗಳನ್ನು ಕೋಡಿ ಸೋಮೇಶ್ವರ ದೇಗುಲಕ್ಕೆ ಕೊಂಡೊಯ್ಯುತ್ತಾರೆ. ಬೆಳಿಗ್ಗೆ 9.25ಕ್ಕೆ ದೇಗುಲದಿಂದ ವಾಪಸ್‌ ಆಯುಧವನ್ನು ಅರಮನೆಯ ಕಲ್ಯಾಣ ಮಂಟಪಕ್ಕೆ ತರುತ್ತಾರೆ. ಬೆಳಿಗ್ಗೆ 11.02ರಿಂದ 11.25ರವರೆಗೆ ಕಲ್ಯಾಣಮಂಟ‍ಪದಲ್ಲಿ ಆಯುಧಪೂಜೆ ನಡೆಯಲಿದೆ.

5 ರ ಶುಕ್ರವಾರ ವಿಜಯದಶಮಿಯಂದು ಬೆಳಿಗ್ಗೆ 5 ರಿಂದ 9.45ರವರೆಗೆ ಅರಮನೆ ಆವರಣದಲ್ಲಿರುವ ಭುವನೇಶ್ವರಿ ದೇವಸ್ಥಾನಕ್ಕೆ ಪೂಜೆಗಳು ನಡೆಯಲಿವೆ. 8.10ಕ್ಕೆ ಆಯುಧಗಳನ್ನು ದೇವಾಲಯದ ಬನ್ನಿಮರಕ್ಕೆ ಕಳುಹಿಸಲಾಗುತ್ತದೆ. ವಿಜಯಯಾತ್ರೆ, ಶಮಿ‍ಪೂಜೆ ನಡೆಯಲಿದೆ.

ಬನ್ನಿಮರಕ್ಕೆ ಬೆಳಿಗ್ಗೆ 9.45ಕ್ಕೆ ಯದುವೀರ ಪೂಜೆ ಸಲ್ಲಿಸಲಿದ್ದಾರೆ. ಅದರೊಂದಿಗೆ ಪಟ್ಟದಾನೆ, ಕುದುರೆ, ಹಸುವಿಗೆ ಆನೆಬಾಗಿಲಿನಲ್ಲಿ ಪೂಜೆ ನಡೆಯಲಿದೆ. 10.45ಕ್ಕೆ ಉತ್ತರ ಪೂಜೆ ಸಲ್ಲಿಸಲು ಆಯುಧಗಳನ್ನು ಕಲ್ಯಾಣಮಂಟಪಕ್ಕೆ ಕೊಂಡೊಯ್ಯಲಾಗುತ್ತದೆ. ಅ.20ರಂದು ಸಿಂಹಾಸನದ ವಿಸರ್ಜನೆ ನಡೆಯಲಿದೆ.