ಮನೆ ಆರೋಗ್ಯ ನವರಾತ್ರಿ ಉಪವಾಸದ ಸಮಯದಲ್ಲಿ ಈ ಆಹಾರಗಳನ್ನು ಸೇವಿಸಿ

ನವರಾತ್ರಿ ಉಪವಾಸದ ಸಮಯದಲ್ಲಿ ಈ ಆಹಾರಗಳನ್ನು ಸೇವಿಸಿ

0

ನವರಾತ್ರಿ ಹಬ್ಬ ಇಂದಿನಿಂದ ಶುರುವಾಗಿ ಬಿಟ್ಟಿದೆ. ನಮ್ಮ ದೇಶದಲ್ಲಿ ಹಲವು ಕಡೆ ಈ ಹಬ್ಬವನ್ನು ಅತಿ ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ಉದಾಹರಣೆಗೆ, ನಮ್ಮ ಮೈಸೂರಿನಲ್ಲಿ, ಗುಜರಾತ್, ಕೊಲ್ಕತ್ತಾ, ಸೂರತ್ ಇತ್ಯಾದಿ ಕಡೆಗಳಲ್ಲಿ ಬಹಳ ವಿಜ್ರಂಭಣೆಯಿಂದ ಈ ಹಬ್ಬವನ್ನು ಆಚರಿಸುತ್ತಾರೆ ಸಂಪೂರ್ಣ ಒಂಬತ್ತು ದಿನಗಳ ಕಾಲ ದುರ್ಗಾ ದೇವಿಯನ್ನು ಅಲಂಕರಿಸಿ, ಪಟ್ಟದಲ್ಲಿ ಕೂರಿಸಿ ಕೊನೆಯ ದಿನ ವಿಜಯದಶಮಿಯಾಗಿ ಈ ಹಬ್ಬವನ್ನು ಬಹಳ ಅದ್ಧೂರಿಯಾಗಿ ಆಚರಿಸಲಾಗುತ್ತದೆ

ಹೆಚ್ಚಿನವರು ಈ ಹಬ್ಬದ ಸಂದರ್ಭದಲ್ಲಿ ತಮ್ಮ ಆಹಾರ ಪದ್ಧತಿಯ ಮೇಲೆ ಕಟ್ಟುನಿಟ್ಟಿನ ಕ್ರಮ ವಹಿಸುತ್ತಾರೆ. ಸಂಪೂರ್ಣವಾಗಿ ಮಾಂಸಾಹಾರವನ್ನು ತ್ಯಜಿಸಿ ಕೇವಲ ಸಸ್ಯಹಾರ ಪದಾರ್ಥಗಳ ಮೇಲೆ ಅವಲಂಬಿತವಾಗಿ ದೇವಿ ನೈವೇದ್ಯಕ್ಕೂ ಕೂಡ ವಿವಿಧ ಬಗೆಯ ಸಸ್ಯಹಾರ ತಿಂಡಿಗಳನ್ನು ಮಾಡಿ ನೈವೇದ್ಯವಾಗಿ ದೇವರ ಮುಂದೆ ಇಡುತ್ತಾರೆ. ಅಷ್ಟೇ ಅಲ್ಲದೆ ಈ ಸಂದರ್ಭದಲ್ಲಿ ಪೂಜೆಗೆ ಒಂದು ಭಾಗವಾಗಿ ಜನರು ಉಪವಾಸ ಕೂಡ ಮಾಡುತ್ತಾರೆ. ಬನ್ನಿ ಇಂದಿನ ಲೇಖನದಲ್ಲಿ ನವರಾತ್ರಿ ಹಬ್ಬದಂದು ಉಪವಾಸ ಮಾಡುವವರಿಗೆ ದೇಹಕ್ಕೆ ಶಕ್ತಿ ಮತ್ತು ಚೈತನ್ಯವನ್ನು ನೀಡುವಂತಹ ಕೆಲವೊಂದು ಆರೋಗ್ಯಕಾರಿ ಆಹಾರಗಳ ಬಗ್ಗೆ ಈ ಲೇಖನದಲ್ಲಿ ನೀಡುತ್ತಿದ್ದೇವೆ ಮುಂದೆ ಓದಿ…

ಹಸಿರು ತರಕಾರಿಗಳ ಸೂಪ್ ಅಥವಾ ಸಲಾಡ್

• ಯಾವುದೇ ಹಬ್ಬದ ಸಂದರ್ಭದಲ್ಲೂ ಕೂಡ ಅಷ್ಟೇ ಉಪವಾಸ ಮಾಡುವವರು ಪೌಷ್ಟಿಕ ಸತ್ವಗಳು ಹೆಚ್ಚಾಗಿರುವ ಆಹಾರಗಳನ್ನು ಸೇವನೆ ಮಾಡುವ ಕಡೆಗೆ ಹೆಚ್ಚಿನ ಒತ್ತು ನೀಡಿದರೆ ಬಹಳ ಒಳ್ಳೆಯದು. ಉದಾಹರಣೆಗೆ ವಿಟಮಿನ್ ಸಿ, ವಿಟಮಿನ್ ಕೆ, ನಾರಿನಾಂಶ ಹಾಗೂ ಕಬ್ಬಿಣಾಂಶ ಹೆಚ್ಚಾಗಿ ಹೊಂದಿ ರುವ ಆಹಾರ ಪದಾರ್ಥಗಳಿಗೆ ಜಾಸ್ತಿ ಆದ್ಯತೆ ಕೊಡಬೇಕು.

• ಇದರಿಂದ ಉಪವಾಸದ ಸಂದರ್ಭದಲ್ಲಿ ದೇಹಕ್ಕೆ ತಕ್ಷಣವೇ ಶಕ್ತಿ ಸಿಕ್ಕಂತೆ ಆಗುತ್ತದೆ, ಜೊತೆಗೆ ಪೌಷ್ಟಿಕ ಸತ್ವಗಳು ದೇಹಕ್ಕೆ ಸಿಕ್ಕಂತಾಗುತ್ತದೆ. ಉದಾಹರಣೆಗೆ ಹೇಳುವುದಾದರೆ ಪಾಲಕ್ ಸೊಪ್ಪು, ಬ್ರೊಕೋಲಿ, ಹೂಕೋಸು, ಹಾಗಲಕಾಯಿ ಇತ್ಯಾದಿ ತರಕಾರಿಗಳನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ಬಹಳ ಒಳ್ಳೆಯದು. ಇಲ್ಲಾಂದ್ರೆ ಈ ತರಕಾರಿಳಿಂದ ಸ್ಮೂಥಿ ಮಾಡಿಕೊಂಡು ಇಲ್ಲಾಂದ್ರೆ ಬೇಯಿಸಿ ಸಲಾಡ್ ಮಾಡಿಕೊಂಡು ಸೇವನೆ ಮಾಡಬಹುದು.

ಸಬ್ಬಕ್ಕಿ ಕಿಚಡಿ

• ಸಬ್ಬಕ್ಕಿ ಕಿಚಡಿ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದಕ್ಕೆ ಮುಖ್ಯ ಕಾರಣ ಇದರಲ್ಲಿ ಕಂಡು ಬರುವ ಅಪಾರ ಪ್ರಮಾಣದ ಪೌಷ್ಟಿಕ ಸತ್ವಗಳು ಹಾಗೂ ಅಧಿಕ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್ ಅಂಶಗಳು ಕೂಡ ಸಿಗುವುದರಿಂದ ದೇಹಕ್ಕೆ ಶಕ್ತಿ ಮತ್ತು ಚೈತನ್ಯ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

• ಸಬ್ಬಕ್ಕಿಯನ್ನು ನೆನೆಹಾಕಿ ಅದರಿಂದ ಪಾಯಸ, ಕಿಚಡಿ ಅಥವಾ ಇನ್ನಿತರ ಖಾದ್ಯಗಳನ್ನು ತಯಾರು ಮಾಡಿ ದೇವರಿಗೆ ನೈವೇದ್ಯವಾಗಿ ಇಡಬಹುದು ಹಾಗೂ ಉಪವಾಸ ಮಾಡುವ ಸಂದರ್ಭದಲ್ಲಿ ಕೂಡ ಸಬ್ಬಕ್ಕಿ ಬಳಸಿ ಮಾಡಿದ ಕಿಚಡಿಯನ್ನು ಕೂಡ ಸೇವನೆ ಮಾಡಬಹುದು.

• ಇಲ್ಲಾಂದ್ರೆ ಸಬ್ಬಕ್ಕಿ ಜೊತೆಗೆ ಕಡಲೇಬೀಜಗಳನ್ನು ಹಾಗೂ ಇನ್ನಿತರ ಮಸಾಲೆ ಪದಾರ್ಥಗಳನ್ನು ಸೇರಿಸಿ ಸಬ್ಬಕ್ಕಿ ವಡೆ ರೆಡಿ ಮಾಡಿಕೊಂಡು, ಕೂಡ ಉಪವಾಸದ ಸಂದರ್ಭದಲ್ಲಿ ಸೇವನೆ ಮಾಡಬಹುದು.

ಮಖಾನ ಬೀಜಗಳು

• ಮಖಾನ ಎಂದು ಕರೆಯಲ್ಪಡುವ ಲೋಟಸ್ ಸೀಡ್ಸ್ ಹಲವರಿಗೆ ಅಪರಿಚಿತ ಎಂದು ಹೇಳಬಹುದು. ಇನ್ನೂ ಸಂಪಲ್ ಆಗಿ ಹೇಳಬೇಕೆಂದರೆ ಇದಕ್ಕೆ ತಾವರೆ ಬೀಜಗಳು ಎಂದು ಸುಲಭವಾಗಿ ಹೇಳ ಬಹುದು. ತುಂಬಾನೇ ದುಬಾರಿಯಾಗಿರುವ ಮಖಾನ ಬೀಜಗಳು, ಆರೋಗ್ಯಕ್ಕೆ ಮಾತ್ರ ಬಹಳ ಒಳ್ಳೆಯದು.

• ಪ್ರಮುಖವಾಗಿ ಈ ಬೀಜಗಳಲ್ಲಿ ಅತಿ ಹೆಚ್ಚಿನ ಪ್ರಮಾಣದ ಪ್ರೋಟೀನ್ ಮತ್ತು ನಾರಿನಾಂಶ ಕಂಡು ಬರುವುದರ ಜೊತೆಗೆ ತುಂಬಾನೇ ಕಡಿಮೆ ಪ್ರಮಾಣದಲ್ಲಿ ಕ್ಯಾಲೋರಿಗಳು ಇರುವುದರಿಂದ ದೀರ್ಘಕಾಲ ಉಪವಾಸ ಮಾಡಿದವರಿಗೆ ಅತ್ಯುತ್ತಮ ಆಹಾರ ಪದಾರ್ಥ ಎಂದು ಹೇಳಬಹುದು.

ಡ್ರೈ ಫ್ರೂಟ್ಸ್

• ಡ್ರೈಫ್ರೂಟ್ಸ್ ದುಬಾರಿ ಎನ್ನುವ ಒಂದೇ ಕಾರಣಗಳು ಬಿಟ್ಟರೆ, ನಿಜಕ್ಕೂ ತುಂಬಾ ಒಳ್ಳೆಯ ಆರೋಗ್ಯ ಲಾಭಗಳನ್ನು ತಂದು ಕೊಡುತ್ತವೆ. ಪ್ರತಿದಿನ ಕೆಲವೊಂದು ನೆನೆ ಹಾಕಿದ ಡ್ರೈ ಫ್ರೂಟ್ಸ್ ಸೇವನೆ ಯಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳು ಸಿಗುತ್ತವೆ.

• ತನ್ನಲ್ಲಿ ಅಧಿಕ ಪ್ರಮಾಣದಲ್ಲಿ ವಿಟಮಿನ್ಸ್ ಖನಿಜಾಂಶಗಳು, ಪ್ರೋಟೀನ್, ನಾರಿನಾಂಶಗಳನ್ನು ಒಳಗೊಂಡ ಡ್ರೈ ಫ್ರೂಟ್ಸ್ಗಳನ್ನು ಮಿತಪ್ರಮಾಣದಲ್ಲಿ ಉಪವಾಸದ ಸಂದರ್ಭದಲ್ಲಿ ಸೇವನೆ ಮಾಡುವುದರಿಂದ, ದೇಹಕ್ಕೆ ಶಕ್ತಿ ಹಾಗೂ ಹೊಸ ಹುರುಪು ಸಿಕ್ಕಂತೆ ಆಗುತ್ತದೆ. ಉಪವಾಸ ಮಾಡುವ ಸಂದರ್ಭದಲ್ಲಿ ಜನರಿಗೆ ಇವುಗಳ ಅವಶ್ಯಕತೆ ಹೆಚ್ಚಾಗಿದೆ.

• ಕೆಲವೊಂದು ಆರೋಗ್ಯಕಾರಿ ಡ್ರೈಫ್ರೂಟ್ಸ್ ಗಳಾದ ಬಾದಾಮಿ, ಗೋಡಂಬಿ, ಖರ್ಜೂರ, ಪಿಸ್ತಾ ಒಣ ದ್ರಾಕ್ಷಿ ಇತ್ಯಾದಿಗಳು ದೇಹದ ಆರೋಗ್ಯವನ್ನು ವೃದ್ಧಿಸುವುದು ಮಾತ್ರವಲ್ಲದೆ ದೇಹಕ್ಕೆ ಶಕ್ತಿ ಮತ್ತು ಚೈತನ್ಯವನ್ನು ಒದಗಿಸುತ್ತದೆ.