ಮನೆ ಮನರಂಜನೆ ಹಿರಿಯ ನಟಿ ಆಶಾ ಪಾರೇಖ್‌ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿಗೆ ಆಯ್ಕೆ

ಹಿರಿಯ ನಟಿ ಆಶಾ ಪಾರೇಖ್‌ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿಗೆ ಆಯ್ಕೆ

0

ನವದೆಹಲಿ(Newdelhi): ಬಾಲಿವುಡ್‌ನ ಹಿರಿಯ ನಟಿ, ನಿರ್ಮಾಪಕಿ ಆಶಾ ಪಾರೇಖ್‌ 2020ನೇ ಸಾಲಿನ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.‌

ಭಾರತೀಯ ಚಿತ್ರರಂಗದಲ್ಲಿನ ಸಾಧನೆಗೆ ನೀಡಲಾಗುವ ಅತ್ಯುನ್ನತ ಪ್ರಶಸ್ತಿಯನ್ನು 79ರ ಹರೆಯದ ಪಾರೇಖ್‌ಗೆ ನೀಡಲು ಆಯ್ಕೆ ಸಮಿತಿ ತೀರ್ಮಾನ ಮಾಡಿದೆ.

68ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಗೌರವ ನೀಡಲಾಗುವುದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್‌ ಠಾಕೂರ್‌ ಮಂಗಳವಾರ ಹೇಳಿದ್ದಾರೆ.

ಆಶಾ ಬೋಸ್ಲೆ, ಹೇಮಾ ಮಾಲಿನಿ, ಪೂನಂ ಧಿಲ್ಲೋನ್‌, ಉದಿತ್‌ ನಾರಾಯಣ್‌ ಮತ್ತು ಟಿ.ಎಸ್‌.ನಾಗಾಭರಣ ಅವರನ್ನು ಒಳಗೊಂಡ ಆಯ್ಕೆ ಸಮಿತಿ ಪಾರೇಖ್‌ ಅವರ ಹೆಸರನ್ನು ಪ‍್ರಶಸ್ತಿಗೆ ಅಂತಿಮಗೊಳಿಸಿದೆ. ದೇಶದ ಅತ್ಯಂತ ಹೆಸರಾಂತ ನಟಿಯ ಹೆಸರನ್ನು ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿಗಾಗಿ ಘೋಷಿಸಲು ಸಚಿವಾಲಯವು ಸಂತಸಪಡುತ್ತದೆ ಎಂದು ಅನುರಾಗ್‌ ಠಾಕೂರ್‌ ತಿಳಿಸಿದ್ದಾರೆ.

1950ರ ದಶಕದಲ್ಲಿ ಬಾಲ ನಟಿಯಾಗಿ ಬಾಲಿವುಡ್‌ಗೆ ಕಾಲಿಟ್ಟ ಪಾರೇಖ್‌, 1960–70ರ ದಶಕದಲ್ಲಿ ಸಾಲು ಸಾಲು ಹಿಟ್‌ ಚಿತ್ರಗಳನ್ನು ನೀಡಿದ ಯಶಸ್ವಿ ತಾರೆ. 1952ರಲ್ಲಿ ‘ಆಸ್ಮಾನ್‌’ ಚಿತ್ರದ ಮೂಲಕ ತಮ್ಮ 10ನೇ ವಯಸ್ಸಿನಿಂದಲೇ ನಟನೆ ಆರಂಭಿಸಿದ ಅವರು, ಇಲ್ಲಿವರೆಗೆ 95ಕ್ಕೂ ಹೆಚ್ಚು ಚಿತ್ರಗಳಿಗೆ ಬಣ್ಣ ಹಚ್ಚಿದ್ದಾರೆ.

1954ರಲ್ಲಿ ಭಿಮಲ್‌ ರಾಯ್‌ ಅವರ ‘ಬಾಪ್‌ ಬೇಟಿ’ ಚಿತ್ರದ ಮೂಲಕ ಆಶಾ ಬಾಲಿವುಡ್‌ನಲ್ಲಿ ಚಿರಪರಿಚಿತರಾದರು.1959ರಲ್ಲಿ ಅಂದಿನ ಸೂಪರ್‌ ಸ್ಟಾರ್‌ ಶಮ್ಮಿ ಕಪೂರ್ಗೆ ಜೊತೆಯಾಗಿ ನಾಸೀರ್‌ ಹುಸೈನ್‌ ಅವರ ‘ದಿಲ್ ದೇಕೆ ದೇಖೋ’ ಚಿತ್ರದಲ್ಲಿ ನಾಯಕಿಯಾಗಿ ಬಡ್ತಿ ಪಡೆದು, ಮೊದಲ ಚಿತ್ರದಲ್ಲಿಯೇ ಪ್ರೇಕ್ಷಕರ ಮನ ಗೆದ್ದರು.

’ಕಟಿ ಪತಂಗ್‌, ತೀಸ್ರಿ ಮಂಜಿಲ್‌, ಬಹರೋನ್‌ ಖೆ ಸಪ್ನೆ, ಪ್ಯಾರ್‌ ಕಾ ಮೌಸಂ‌’ ಮೊದಲಾದ ಚಿತ್ರಗಳ ಮೂಲಕ ಹಿಂದಿ ಚಿತ್ರರಂಗದಲ್ಲಿನ ಅತ್ಯಂತ ಪ್ರಭಾವಶಾಲಿ ನಟಿಯಾಗಿ ಹೊರಹೊಮ್ಮಿದರು.ನಿರ್ಮಾಪಕಿ, ನಿರ್ದೇಶಕಿಯಾಗಿಯೂ ಗುರುತಿಸಿಕೊಂಡ ಪಾರೇಖ್‌, 1990ರಲ್ಲಿ ‘ಕೋರ ಕಾಗಜ್‌‘ ಎಂಬ ಟಿವಿ ಧಾರವಾಹಿಯಲ್ಲಿಯೂ ಕಾಣಿಸಿಕೊಂಡರು.

1992ರಲ್ಲಿ ಪದ್ಮಶ್ರೀ, ಪಡೆದ ಅವರು 1998–2001ರ ವರೆಗೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ(ಸಿಬಿಎಫ್‌ಸಿ)ಅಧ್ಯಕ್ಷರಾಗಿದ್ದರು. ಸೂಪರ್‌ಸ್ಟಾರ್‌ ರಜನಿಕಾಂತ್‌ 2019ನೇ ಸಾಲಿನ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಪಡೆದಿದ್ದರು.