ಮನೆ ಸಾಹಿತ್ಯ ಹಸ್ತಪ್ರತಿಗಳ ಸಂರಕ್ಷಣೆ, ಪ್ರಧೂಮೀಕರಣ ಕೇಂದ್ರ ಉದ್ಘಾಟಿಸಿದ ಸಚಿವ ಅಶ್ವತ್ಥನಾರಾಯಣ

ಹಸ್ತಪ್ರತಿಗಳ ಸಂರಕ್ಷಣೆ, ಪ್ರಧೂಮೀಕರಣ ಕೇಂದ್ರ ಉದ್ಘಾಟಿಸಿದ ಸಚಿವ ಅಶ್ವತ್ಥನಾರಾಯಣ

0

ಮೈಸೂರು(Mysuru): ಮೈಸೂರು ವಿಶ್ವವಿದ್ಯಾಲಯ ಮತ್ತು ಬೆಂಗಳೂರಿನ ಮಿಥಿಕ್ ಸೊಸೈಟಿಗಳ ಸಹಯೋಗದಲ್ಲಿ ಇಲ್ಲಿನ ಪ್ರಾಚ್ಯ ವಿದ್ಯಾ ಸಂಶೋಧನಾಲಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ‘ಹಸ್ತಪ್ರತಿಗಳ ಸಂರಕ್ಷಣಾ ಮತ್ತು ಪ್ರಧೂಮೀಕರಣ ಕೇಂದ್ರ’ವನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಗುರುವಾರ  ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮೈಸೂರು ವಿವಿ ಮತ್ತು ಮಿಥಿಕ್ ಸೊಸೈಟಿ 5 ಸಾವಿರ ಹಸ್ತಪ್ರತಿಗಳು ಮತ್ತು 16 ಸಾವಿರ ತಾಳೆಗರಿಗಳ ಡಿಜಿಟಲೀಕರಣ, ಸಂರಕ್ಷಣೆ ಮತ್ತು ಪ್ರಧೂಮೀಕರಣ (ಫ್ಯೂಮಿಗೇಶನ್)ಕ್ಕಾಗಿ 2 ವರ್ಷಗಳ ಒಡಂಬಡಿಕೆ ಮಾಡಿಕೊಂಡಿರುವುದು ರಚನಾತ್ಮಕ ಕ್ರಮವಾಗಿದೆ. ನಾಡಹಬ್ಬದ ಸಂದರ್ಭದಲ್ಲಿ ಮಾಡುವ ಸರಸ್ವತಿ ಪೂಜೆಯು ಪ್ರಾಚ್ಯ ವಿದ್ಯಾ ಸಂಶೋಧನಾಲಯದಲ್ಲಿ ಮಹೋದ್ದೇಶದೊಂದಿಗೆ ನಡೆಯುತ್ತಿರುವುದು ಅನುಕರಣಯೋಗ್ಯವಾಗಿದೆ ಎಂದರು.

ಇಂದು ತಂತ್ರಜ್ಞಾನ ಜಗತ್ತನ್ನು ಆಳುತ್ತಿದ್ದು, ಇಡೀ ವ್ಯವಸ್ಥೆ ಜ್ಞಾನಾಧಾರಿತ ಆಗುತ್ತಿದೆ. ಮೈಸೂರು ವಿ.ವಿ.ಯು ಮೂಲತಃ ಪ್ರಾರಂಭವಾದ ಪ್ರಾಚ್ಯ ವಿದ್ಯಾ ಸಂಶೋಧನಾಲಯದಲ್ಲಿ ನಾಡಿನ ಸಾಂಸ್ಕೃತಿಕ ಪುನರುತ್ಥಾನದ ಈ ಕಾರ್ಯ ನಡೆಯುತ್ತಿರುವುದಕ್ಕೆ ಬೆಲೆ ಕಟ್ಟುವುದು ಸಾಧ್ಯವಿಲ್ಲ ಎಂದು ಅವರು ಶ್ಲಾಘಿಸಿದರು.

ಸದ್ಯಕ್ಕೆ ಇಲ್ಲಿ ಸ್ಥಳೀಯರನ್ನು ಬಳಸಿಕೊಂಡು ತಾಳೆಗರಿಗಳನ್ನು ಸ್ಚಚ್ಛ ಮಾಡುವ ಕೆಲಸ ನಡೆಯುತ್ತಿದೆ. ಇವುಗಳನ್ನೆಲ್ಲ ನಾವು ತಂತ್ರಜ್ಞಾನದ ಬಲದಿಂದ ಉಳಿಸಿಕೊಳ್ಳುವುದು ಈಗ ಸುಲಭವಾಗಿದೆ. ಆದ್ದರಿಂದ ಯುವ ತಲೆಮಾರಿನ ವಿದ್ವಾಂಸರು ಕೂಡ ಶಾಸನಗಳು, ಲಿಪಿಗಳು, ಹಸ್ತಪ್ರತಿಗಳು ಮತ್ತು ತಾಳೆಗರಿಗಳನ್ನು ಅಧ್ಯಯನ ಮಾಡುವ ಅಭಿಜಾತ ಕುತೂಹಲವನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಸೂಚಿಸಿದರು.

ಈ ಸಂಸ್ಥೆಯಲ್ಲಿ ಸುಮಾರು 800-900 ವರ್ಷಗಳಷ್ಟು ಹಳೆಯ ತಾಳೆಗರಿಗಳಿವೆ. ಇವು ಒಂದು ನಾಡಿನ ಮತ್ತು ದೇಶದ ಕತೆಯನ್ನೇ ಕಟ್ಟಿಕೊಡುತ್ತವೆ. ಆಯಾ ಕಾಲಘಟ್ಟದ ಸಾಂಸ್ಕೃತಿಕ, ಆರ್ಥಿಕ, ಸಾಮಾಜಿಕ ಮತ್ತಿತರ ಆಯಾಮಗಳ ಬಗ್ಗೆ ತಿಳಿದುಕೊಳ್ಳಲು ಇವು ಪ್ರಮುಖ ಆಕರಗಳಾಗಿವೆ. ಇಂತಹ ಪ್ರಾಚ್ಯ ಸಂಪತ್ತು ಕನ್ನಡ ನಾಡಿನಲ್ಲಿರುವಷ್ಟು ಬೇರೆ ಕಡೆಗಳಲ್ಲಿ ಇಲ್ಲ. ಇದನ್ನು ನಾವು ಕೂಲಂಕಷವಾಗಿ ಅಧ್ಯಯನ ಮಾಡಬೇಕು ಎಂದು ಸಚಿವರು ಅಭಿಪ್ರಾಯಪಟ್ಟರು.

ಪ್ರಧಾನಿ ನರೇಂದ್ರ ಮೋದಿಯವರು ರೂಪಿಸಿರುವ ಮೂರನೇ ರಾಷ್ಟ್ರೀಯ ಶಿಕ್ಷಣ ನೀತಿಯು ಸ್ವಾತಂತ್ರೋತ್ತರ ಭಾರತದಲ್ಲಿ ಜಾರಿಯಾಗುತ್ತಿರುವ ಅತ್ಯಂತ ಜನಪರ ಮತ್ತು ಭರವಸೆದಾಯಕ ನೀತಿಯಾಗಿದೆ. ಇದರಿಂದಾಗಿ ಶೈಕ್ಷಣಿಕ ವಲಯದಲ್ಲಿ ಅಭೂತಪೂರ್ವ ಬದಲಾವಣೆಗಳು ಬರುತ್ತಿದ್ದು, ಸಮಾಜದ ಸಮಸ್ಯೆಗಳು ಇನ್ನು ಕೆಲವೇ ವರ್ಷಗಳಲ್ಲಿ ನಿರ್ಮೂಲನೆಯಾಗಿ ಹೋಗಲಿವೆ ಎಂದು ಅವರು ಇದೇ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮೈಸೂರು ವಿವಿ ಕುಲಪತಿ ಪ್ರೊಹೇಮಂತಕುಮಾರ್, ಪ್ರಾಚ್ಯ ವಿದ್ಯಾ ಸಂಶೋಧನಾಲಯದ ನಿರ್ದೇಶಕ ಡಾ.ರಾಮಪ್ರಿಯ, ಮುಖ್ಯಮಂತ್ರಿಗಳ ಇ-ಆಡಳಿತ ಸಲಹೆಗಾರ ಬೇಳೂರು ಸುದರ್ಶನ, ಮಿಥಿಕ್ ಸೊಸೈಟಿಯ ಗೌರವ ಕಾರ್ಯದರ್ಶಿ ವಿ.ನಾಗರಾಜ್‌, ಮೈಸೂರು ವಿವಿ ಕುಲಸಚಿವ ಪ್ರೊ.ಆರ್. ಶಿವಪ್ಪ ಉಪಸ್ಥಿತರಿದ್ದರು.