ಚಾಮರಾಜನಗರ(Chamarajanagar): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಬಂಡೀಪುರ ಅರಣ್ಯ ಪ್ರದೇಶದ ಮೂಲಕ ರಾಜ್ಯಕ್ಕೆ ಪ್ರವೇಶಿಸಿದೆ.
ರಾಹುಲ್ ಗಾಂಧಿ ಅವರನ್ನು ರಾಜ್ಯ ಕಾಂಗ್ರೆಸ್ ನಾಯಕರು ಕೆಕ್ಕನಹಳ್ಳ ಚೆಕ್ ಪೋಸ್ಟ್ ಬಳಿ ತೆರಳಿ ಸ್ವಾಗತಿಸಿದರು.
ಈ ವೇಳೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಂ.ಬಿ. ಪಾಟೀಲ್, ಆರ್.ವಿ. ದೇಶಪಾಂಡೆ, ವೀರಪ್ಪ ಮೊಯಿಲಿ, ಕೆ.ಜೆ. ಜಾರ್ಜ್ ಸೇರಿದಂತೆ ಹತ್ತು ಹಲವು ನಾಯಕರುಗಳು ಭಾಗಿಯಾಗಿದ್ದರು. ಗುಂಡ್ಲುಪೇಟೆಯ ಹಂಗಳ ಗ್ರಾಮದ ಬಳಿ ದಾರಿ ಮಧ್ಯ ಕಾಫಿ ಕುಡಿಯಲು ಖಾಸಗಿ ರೆಸಾರ್ಟ್’ಗೆ ತೆರಳಿದರು.
ಗುಂಡ್ಲುಪೇಟೆ ಪಟ್ಟಣದ ಅಂಬೇಡ್ಕರ್ ಭವನದ ಎದುರು ಬೃಹತ್ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಜನರನ್ನು ಉದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಲಿದ್ದಾರೆ.
ಗುಂಡ್ಲುಪೇಟೆಯಲ್ಲಿ 21 ಕಿ.ಮೀ ಪಾದಯಾತ್ರೆ ನಡೆಯಲಿದೆ. ಮಧ್ಯಾಹ್ನ ಭೋಜನದ ನಂತರ ರಾಹುಲ್ ಗಾಂಧಿ ಅವರು ಬುಡಕಟ್ಟು ಸಮುದಾಯದವರು ಹಾಗೂ ಆಮ್ಲಜನಕ ದುರಂತದಲ್ಲಿ ಮೃತಪಟ್ಟವರ ಕುಟುಂಬದ ಸದಸ್ಯರೊಂದಿಗೆ ಸಂವಾದ ನಡೆಸಲಿದ್ದಾರೆ.














