ಮನೆ ರಾಜಕೀಯ ಪಾದಯಾತ್ರೆ ಬಿಟ್ಟು ಜನರ ಬಗ್ಗೆ ಮಾತನಾಡಲು ಬೇರೆ ದಾರಿ ಇಲ್ಲ: ರಾಹುಲ್ ಗಾಂಧಿ

ಪಾದಯಾತ್ರೆ ಬಿಟ್ಟು ಜನರ ಬಗ್ಗೆ ಮಾತನಾಡಲು ಬೇರೆ ದಾರಿ ಇಲ್ಲ: ರಾಹುಲ್ ಗಾಂಧಿ

0

ಗುಂಡ್ಲುಪೇಟೆ(Gudlupete): ದೇಶ ಎದುರಿಸುತ್ತಿರು ಸಮಸ್ಯೆಗಳ ಬಗ್ಗೆ  ಮಾತನಾಡಲು ಇರುವ ಮಾರ್ಗಗಳಾದ ದೇಶದ ಸಂಸತ್ತು, ಮಾಧ್ಯಮಗಳು ವಿರೋಧ ಪಕ್ಷದ ಪಾಲಿಗೆ‌ಮುಚ್ಚಿವೆ. ಪಾದಯಾತ್ರೆ ಬಿಟ್ಟು ಜನರ ಬಗ್ಗೆ ಮಾತನಾಡಲು ಬೇರೆ ದಾರಿಯೇ ಇಲ್ಲ ಎಂದು ಕಾಂಗ್ರೆಸ್ ನಾಯಕ‌ ರಾಹುಲ್ ಗಾಂಧಿ ಹೇಳಿದರು.

ಶುಕ್ರವಾರ ಗುಂಡ್ಲುಪೇಟೆಯಲ್ಲಿ ಭಾರತ್ ಜೊಡೊ ಯಾತ್ರೆಯಲ್ಲಿ ಮಾತನಾಡಿದ ಅವರು,  ಮಾಧ್ಯಮಗಳು ಸಂಪೂರ್ಣವಾಗಿ ಸರ್ಕಾರದ ನಿಯಂತ್ರಣದಲ್ಲಿವೆ. ನಮ್ಮ ವಿಚಾರಗಳನ್ನು ಹೇಳುವುದಕ್ಕೆ ಅಲ್ಲಿ ಅವಕಾಶ ಇಲ್ಲ. ಸಂಸತ್ತಿನಲ್ಲಿ ನಾವು ಮಾತನಾಡುವಾಗ ಮೈಕ್ ಬಂದ್ ಮಾಡಲಾಗುತ್ತದೆ. ವಿಧಾನಸಭೆಗಳಲ್ಲೂ ಮಾತನಾಡಲು ಅವಕಾಶ ಇಲ್ಲ. ಹಾಗಾಗಿ ಪಾದಯಾತ್ರೆ ಬಿಟ್ಟು ಬೇರೆ ರಸ್ತೆ ನಮಗಿಲ್ಲ ಎಂದರು.

ಈ ಯಾತ್ರೆ ದೇಶದ ಧ್ವನಿ. ನಾನೊಬ್ಬನೇ ಅಲ್ಲ.‌ ಲಕ್ಷಾಂತರ ಜನರು ಭಾಗವಹಿಸುತ್ತಿದ್ದಾರೆ. ಅವರ ಕಷ್ಟಗಳನ್ನು ಸಮಸ್ಯೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇಲ್ಲಿ ಜಾತಿ, ಧರ್ಮ, ಭಾಷೆ ಎಂಬ ಭೇದ ಭಾವ ಇಲ್ಲ. ಸಂವಿಧಾನ ರಕ್ಷಣೆಯ ಉದ್ದೇಶವನ್ನು ಹೊಂದಿರುವ ಈ ಯಾತ್ರೆಯನ್ನು ತಡೆಯಲು ಯಾವ ವ್ಯಕ್ತಿ, ಶಕ್ತಿಗೂ ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಹೇಳಿದರು.

ಬಿಜೆಪಿ, ಆರ್ ಎಸ್ ಎಸ್ ವಿಚಾರಧಾರೆಗಳು ದೇಶದಲ್ಲಿ ದ್ವೇಷ, ಹಿಂಸೆಯನ್ನು ಸೃಷ್ಟಿಸುತ್ತಿವೆ. ದೇಶದ ಸಂವಿಧಾನ ಇಲ್ಲದಿದ್ದರೆ, ತ್ರಿವರ್ಣ ಧ್ಬಜಕ್ಕೆ ಬೆಲೆ ಇಲ್ಲ. ಸಂವಿಧಾನವನ್ಜು ರಕ್ಷಿಸಬೇಕಾಗಿದೆ. ನಮ ಯಾತ್ರೆಯಲ್ಲಿ ದ್ವೇಷ, ಹಿಂಸೆ‌‌ ಇಲ್ಲ. ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆಯುತ್ತೇವೆ. ಯಾತ್ರೆಯಲ್ಲಿ ಯಾರಾದರೂ ಎಡವಿ ಬಿದ್ದರೆ, ಉಳಿದವರು ಅವರನ್ನು ಮೇಲಕ್ಕೆತ್ತಿ ಮುನ್ನಡೆಸುತ್ತಾರೆ. ಬಿದ್ದವನ ಜಾತಿ, ಧರ್ಮ, ಭಾಷೆ ಎಂದು ಯಾರೂ ಕೇಳುವುದಿಲ್ಲ ಎಂದರು.

ನಾವಿಲ್ಲಿ ಉದ್ದುದ್ದ ಭಾಷಣ ಮಾಡುವುದಿಲ್ಲ. ಆರೇಳು ಗಂಟೆ ನಡೆಯುತ್ತೇವೆ. 15 ನಿಮಿಷ ಮಾತನಾಡುತ್ತೇವೆ. ಜನರ ಮಾತುಗಳನ್ನು ಕೇಳುತ್ತೇವೆ. ಭ್ರಷ್ಟಾಚಾರ, ಬೆಲೆ ಏರಿಕೆ, ನಿರುದ್ಯೋಗ, ಸರ್ಕಾರಿ ಸಂಸ್ಥೆಗಳ ಖಾಸಗೀಕರರಣ ಬಗ್ಗೆ ಜನರು ಮಾತನಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದರು.