ಮನೆ ರಾಜ್ಯ ಮೈಸೂರು: ಮೈನವಿರೇಳಿಸಿದ ವಜ್ರಮುಷ್ಠಿ ಕಾಳಗ

ಮೈಸೂರು: ಮೈನವಿರೇಳಿಸಿದ ವಜ್ರಮುಷ್ಠಿ ಕಾಳಗ

0

ಮೈಸೂರು(Mysuru): ಅಂಬಾವಿಲಾಸ ಅರಮನೆಯಲ್ಲಿ ವಿಜಯದಶಮಿ ಪ್ರಯುಕ್ತ ನಡೆಯುವ ಜಟ್ಟಿಗಳ ವಜ್ರಮುಷ್ಟಿ ಕಾಳಗ ರೋಚಕತೆಯಿಂದ ಕೂಡಿತ್ತಲ್ಲದೇ ಪ್ರೇಕ್ಷಕರ ಮೈ ನವಿರೇಳಿಸಿತು.

ಇಂದು ಬೆಳಿಗ್ಗೆ 10.30ಕ್ಕೆ ಎರಡು ಜೋಡಿ ಅಖಾಡಕ್ಕೆ ಇಳಿಯಿತು. ಇಡೀ ದೇಹಕ್ಕೆ ಮಣ್ಣು ಬಳಿದುಕೊಂಡಿದ್ದ ಜಟ್ಟಿಗಳು, ಕಾಳಗಕ್ಕೆ ಸಿದ್ದಗೊಂಡಿದ್ದರು.

ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಪಟ್ಟದ ಕತ್ತಿಗೆ ಪೂಜೆ‌ ಸಲ್ಲಿಸುತ್ತಿದ್ದಂತೆ ಕಾಳಗ ಆರಂಭವಾಯಿತು.

ಚನ್ನಪಟ್ಟಣದ ಉಸ್ತಾದ್ ಪುರುಷೋತ್ತಮ ಜೆಟ್ಟಿ ಅವರ ಶಿಷ್ಯ ಮನೋಜ್ ಜೆಟ್ಟಿ ಅವರು ಚಾಮರಾಜನಗರದ ಉಸ್ತಾದ್ ಬಂಗಾರ್ ಜೆಟ್ಟಿ ಅವರ ಶಿಷ್ಯ ಅಚ್ಯುತ ಜೆಟ್ಟಿ ಅವರ ತಲೆಭಾಗಕ್ಕೆ ವಜ್ರನಖದಿಂದ ಹೊಡೆದು ರಕ್ತ ಚಿಮ್ಮಿಸಿದರು.

15 ಸೆಕೆಂಡ್ ನಲ್ಲಿ ಕಾಳಗ ಅಂತ್ಯಗೊಂಡಿತು. ಗಂಟೆಗಟ್ಟಲೇ ಕಾಳಗ ನೋಡಲು ಕಾತರರಾಗಿದ್ದ ಜನರು ಕೆಲವೇ ಕ್ಷಣಗಳ ಹೋರಾಟವನ್ನು ಕಣ್ತುಂಬಿಕೊಂಡರು.

ಮೈಸೂರಿನ ಉಸ್ತಾದ್ ಟೈಗರ್ ಬಾಲಾಜಿ ಪುತ್ರ ಮೈಸೂರಿನ ವಿಷ್ಣು ಜಟ್ಟಿ ಮತ್ತು ಬೆಂಗಳೂರಿನ ಉಸ್ತಾದ್ ಕೃಷ್ಣ ಶೆಟ್ಟಿ ಶಿಷ್ಯ ತಾರಾನಾಥ ಜೆಟ್ಟಿ ನಡುವೆಯೂ ಕಾಳಗ ನಡೆಯಿತು. ಕಾಳಗ ಬಿಡಿಸುವ ದಶಬಂಧಿಗಳಾಗಿ ಟೈಗರ್ ಬಾಲಾಜಿ, ನಾಗರಾಜ ಇದ್ದರು.

ವಜ್ರಮುಷ್ಟಿ ಕಾಳಗವು ಸೋಲು, ಗೆಲುವಿನ ಕಾಳಗವಲ್ಲ. ವಿಜಯದಶಮಿಯಂದು ನಾಡದೇವಿಗೆ ಸಂಪ್ರದಾಯದಂತೆ ರಕ್ತಾರ್ಪಣೆ ಸಲ್ಲಿಸಿ ತ್ಯಾಗ ಮಾಡುವುದಾಗಿದೆ’ ಎಂದು ಉಸ್ತಾದ್ ಮಾಧವ ಜೆಟ್ಟಿ ತಿಳಿಸಿದರು.