ಮನೆ ಅಪರಾಧ ಅಪರಾಧ ಪ್ರಕರಣ ಮುಚ್ಚಿಹಾಕಲು ಲಂಚಕ್ಕೆ ಬೇಡಿಕೆ: ಹೆಡ್ ಕಾನ್ಸ್’ಟೇಬಲ್ ಬಂಧನ, ಇನ್ಸ್’ಪೆಕ್ಟರ್ ಪರಾರಿ

ಅಪರಾಧ ಪ್ರಕರಣ ಮುಚ್ಚಿಹಾಕಲು ಲಂಚಕ್ಕೆ ಬೇಡಿಕೆ: ಹೆಡ್ ಕಾನ್ಸ್’ಟೇಬಲ್ ಬಂಧನ, ಇನ್ಸ್’ಪೆಕ್ಟರ್ ಪರಾರಿ

0

ಬೆಂಗಳೂರು(Bengaluru): ವಂಚನೆ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿಗೆ ಸಹಾಯ ಮಾಡುವ ನೆಪದಲ್ಲಿ ಅವರ ಸಂಬಂಧಿಕರಿಂದ ಲಂಚಕ್ಕೆ ಕೈಯೊಡ್ಡಿದ ಆರೋಪದಡಿ ಚಿಕ್ಕಜಾಲ ಠಾಣೆ ಹೆಡ್’ಕಾನ್ಸ್’ಟೇಬಲ್ ನ್ನು ಬಂಧಿಸಲಾಗಿದ್ದು,  ಇನ್ಸ್’ಪೆಕ್ಟರ್ ಪರಾರಿಯಾಗಿದ್ದಾನೆ.

ಇನ್ಸ್ಪೆಕ್ಟರ್ ಪರವಾಗಿ 3.70 ಲಕ್ಷ ರೂ.ಲಂಚ ಸ್ವೀಕರಿಸಿದ ಹೆಡ್ ಕಾನ್ಸ್’ಟೇಬಲ್ ರವಿಯನ್ನು ಬಂಧಿಸಿರುವ ಲೋಕಾಯುಕ್ತ ಪೊಲೀಸರು ಜೈಲಿಗೆ ಕಳಿಸಿದ್ದಾರೆ. ಬಂಧನ ಭೀತಿಗೆ ಒಳಗಾಗಿರುವ ಇನ್ಸ್ಪೆಕ್ಟರ್ ಪ್ರವೀಣ್ ಎರಡು ದಿನಗಳಿಂದ ಠಾಣೆಗೆ ಹೋಗದೆ ತಲೆಮರೆಸಿಕೊಂಡಿದ್ದಾರೆ.

ಏನಿದು ಪ್ರಕರಣ ?

ಬೆಂಗಳೂರು ಜಲಮಂಡಳಿಯಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಲಕ್ಷಾಂತರ ರೂ.ಸ್ವೀಕರಿಸಿ ವಂಚಿಸಿದ ಆರೋಪದಲ್ಲಿ ಚಿಕ್ಕಜಾಲ ಠಾಣೆಯಲ್ಲಿ ಪ್ರಕಾಶ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಕೇಸ್ ಸಂಬಂಧ ಅವರ ಮಾವ ದೇವರಾಜು ಠಾಣೆಗೆ ತೆರಳಿದ್ದಾಗ ಎಚ್ಸಿ ರವಿ ಪರಿಚಯ ಆಗಿದ್ದು, ಹಣ ನೀಡಿದರೆ ನಿಮ್ಮ ಅಳಿಯನ ವಿರುದ್ಧದ ಕೇಸ್ನಲ್ಲಿ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ. ಇನ್ಸ್ಪೆಕ್ಟರ್ ಪ್ರವೀಣ್ಗೆ 3 ಲಕ್ಷ ರೂ., ರವಿಗೆ 50 ಸಾವಿರ ರೂ., ಇಬ್ಬರು ರೈಟರ್’ಗಳಿಗೆ 30 ಸಾವಿರ ರೂ. ಎಂದು ಹೇಳಿ ಅವರಿಂದ ಒಟ್ಟು 3.70 ಲಕ್ಷ ರೂ. ಲಂಚ ಪಡೆದುಕೊಂಡಿದ್ದರು.

ಹಂತ- ಹಂತವಾಗಿ 3.70 ಲಕ್ಷ ರೂ. ಪಡೆದ ಎಚ್ಸಿ ಪುನಃ ಐದು ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟಿದ್ದರು. ಇದರಿಂದ ಬೇಸತ್ತ ದೂರುದಾರ ದೇವರಾಜು ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ದೇವರಾಜು ನೀಡಿದ ದೂರಿನ ಅನ್ವಯ ಭ್ರಷ್ಟಾಚಾರ ನಿಗ್ರಹ ಕಾಯಿದೆ ಕಲಂ 7(ಎ) ಅನ್ವಯ ಮೊದಲ ಆರೋಪಿಯಾಗಿ ಇನ್ಸ್ಪೆಕ್ಟರ್ ಪ್ರವೀಣ್, 2ನೇ ಆರೋಪಿ ರವಿ ಸೇರಿದಂತೆ ಮತ್ತಿತರ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಆರೋಪಿ ರವಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಉಳಿದ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.