ಮನೆ ಅಪರಾಧ ಶಾಸಕ ಹರೀಶ್‌ ಪೂಂಜಾ ಕಾರು ಅಡ್ಡಗಟ್ಟಿ ಬೆದರಿಕೆ: ದೂರು ದಾಖಲು

ಶಾಸಕ ಹರೀಶ್‌ ಪೂಂಜಾ ಕಾರು ಅಡ್ಡಗಟ್ಟಿ ಬೆದರಿಕೆ: ದೂರು ದಾಖಲು

0

ಮಂಗಳೂರು(Mangalore): ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕಾರಿಗೆ ದುಷ್ಕರ್ಮಿಗಳು ಅಡ್ಡಗಟ್ಟಿ ತಲ್ವಾರ್ ಝಳಪಿಸಿದ ಘಟನೆ ಮಂಗಳೂರು ನಗರ ಹೊರವಲಯದ ಫರಂಗಿಪೇಟೆಯಲ್ಲಿ ಗುರುವಾರ ರಾತ್ರಿ ನಡೆದಿದೆ. ಗುರುವಾರ ರಾತ್ರಿ 11.15ರ ಸುಮಾರು ಫರಂಗಿಪೇಟೆಯ ಬಳಿ ಶಾಸಕರ ಕಾರಿಗೆ ಅಡ್ಡಹಾಕಿ ನಿಂದಿಸಿ, ಬೆದರಿಕೆ ಹಾಕಲಾಗಿದೆ ಎಂದು ಕಾರು ಚಾಲಕ ನವೀನ್‌ ವಿಠಲ ಪೂಜಾರಿ ಬಂಟ್ವಾಳ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ದೂರಿನಲ್ಲೇನಿದೆ ?: ಶಾಸಕ ಹರೀಶ್‌ ಪೂಂಜಾ ಅವರ ಕಾರು ಚಾಲಕ ಬೆಳ್ತಂಗಡಿ ತಾಲ್ಲೂಕು ಗರ್ಡಾಡಿ ಗ್ರಾಮದ ನಾನಿಲ್ದಡಿಯ ನವೀನ್‌ ವಿಠಲ ಪೂಜಾರಿ ನೀಡಿದ ದೂರಿನ ಸಾರಾಂಶ ಹೀಗಿದೆ.

ಶಾಸಕ ಹರೀಶ್‌ ಪೂಂಜಾ ಅವರು ಗುರುವಾರ ಸಂಜೆ ಬೆಂಗಳೂರಿನಿಂದ ವಿಮಾನದ ಮೂಲಕ 7.07ಕ್ಕೆ ಮಂಗಳೂರಿಗೆ ಬಂದರು. ಅವರನ್ನು ವಿಮಾನ ನಿಲ್ದಾಣದಿಂದ ಸರ್ಕಿಟ್‌ ಹೌಸ್‌ಗೆ ಕರೆದುಕೊಂಡು ಬಂದೆ. ಶಾಸಕರು ಅಲ್ಲಿ ಸಭೆಯಲ್ಲಿ ಪಾಲ್ಗೊಂಡರು. ರಾತ್ರಿ 10.45ಕ್ಕೆ ಅಲ್ಲಿಂದ ಎಲ್ಲರೂ ಬೆಳ್ತಂಗಡಿಗೆ ಹೊರಟೆವು.

ಶಾಸಕರು ತಮ್ಮ ಸಂಬಂಧಿಕರಾದ ಪ್ರಶಾಂತ್‌ ಮತ್ತು ಕುಶಿತ್‌ ಅವರ ಕಾರು (ಕೆಎ 19 ಎಂಇ5560) ಕಾರಿನಲ್ಲಿ ಕುಳಿತರು. ನಾನು ಶಾಸಕರ ಕಾರನ್ನು (ಕೆಎ19 ಎಂ.ಪಿ 0369) ಒಬ್ಬನೇ ಚಲಾಯಿಸಿಕೊಂಡು ಅವರ ಹಿಂದೆ ಹೊರಟೆ.

ನಂತೂರು, ಪಡೀಲ್ ಮಾರ್ಗವಾಗಿ ಸಾಗಿ ನಾಗುರಿ ರೈಲ್ವೆ ಮೇಲ್ಸೇತುವೆ ತಳಭಾಗದಲ್ಲಿ ಒಂದು ಬಿಳಿ ಬಣ್ಣದ ಸ್ಕಾರ್ಪಿಯೊ ನಮ್ಮ ಕಾರನ್ನು ಹಿಂಬಾಲಿಸಿಕೊಂಡು ಬಂತು. ಮುಂದಿನ ಕಾರಿನಲ್ಲಿದ್ದ ಶಾಸಕರಿಗೆ ನಾನು ಮೊಬೈಲ್‌ ಮೂಲಕ ಈ ವಿಷಯ ತಿಳಿಸಿದೆ. ತಾವಿದ್ದ ಕಾರು ಹಿಂಬಾಲಿಸುವಂತೆ ಶಾಸಕರು ನನಗೆ ಹೇಳಿದರು.

ಆಗ ನಮ್ಮ ಕಾರಿನ ಗ್ಲಾಸ್‌ನ್ನು ನಾನು ಒಳಗೆ ಸರಿಸಿದಾಗ ಸ್ಕಾರ್ಪಿಯೊ ಚಾಲಕ ನನ್ನ ಕಾರನ್ನು ಬಿಟ್ಟು ಮುಂದೆ ಹೋಗುತ್ತಿದ್ದ ಕಾರ(ಶಾಸಕ ಪೂಂಜಾ ಇದ್ದದ್ದು)ನ್ನು ಬೆನ್ನಟ್ಟಿದ. ಫರಂಗಿಪೇಟೆಯ ಮೀನು ಮಾರುಕಟ್ಟೆಯಿಂದ ಸ್ವಲ್ಪ ಮುಂದಕ್ಕೆ ತಲುಪುತ್ತಿದ್ದಂತೆ ಶಾಸಕರಿದ್ದ ಕಾರಿಗೆ ಅಡ್ಡಲಾಗಿ ಬಂದು, ಆ ಕಾರು ಚಲಾಯಿಸುತ್ತಿದ್ದ ಕುಶಿತ್‌ ಅವರನ್ನು ಉದ್ದೇಶಿಸಿ ನಿಂದಿಸಿದ. ತನ್ನ ಕೈಯಲ್ಲಿದ್ದ ಆಯುಧವನ್ನು ತೋರಿಸಿ ಬೆದರಿಕೆ ಒಡ್ಡಿದ. ನಾವು ನಮ್ಮ ಕಾರುಗಳನ್ನು ಫರಂಗಿಪೇಟೆಯ ಹೊರಠಾಣೆಯ ಬಳಿ ನಿಲ್ಲಿಸಿದಾಗ ಸ್ಕಾರ್ಪಿಯೊವನ್ನು ಜೋರಾಗಿ ಚಲಾಯಿಸಿಕೊಂಡು ಆತ ಬಿ.ಸಿ. ರೋಡು ಕಡೆಗೆ ಹೋದ.ಸ್ಕಾರ್ಪಿಯೊ ಕಾರಿನ ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.