ಮನೆ ಕಾನೂನು ನ.12 ರಂದು ರಾಷ್ಟ್ರೀಯ ಲೋಕ ಅದಾಲತ್: ನ್ಯಾ. ಎಂ.ಎಲ್.ರಘುನಾಥ್‌

ನ.12 ರಂದು ರಾಷ್ಟ್ರೀಯ ಲೋಕ ಅದಾಲತ್: ನ್ಯಾ. ಎಂ.ಎಲ್.ರಘುನಾಥ್‌

0

ಮೈಸೂರು(Mysuru): ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ನ.12ರಂದು ಜಿಲ್ಲೆಯ ಎಲ್ಲ 64 ನ್ಯಾಯಾಲಯಗಳಲ್ಲೂ ರಾಷ್ಟ್ರೀಯ ಲೋಕ ಅದಾಲತ್‌ ನಡೆಸಲಾಗುವುದು ಎಂದು ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್‌ ನ್ಯಾಯಾಧೀಶ ಎಂ.ಎಲ್.ರಘುನಾಥ್‌ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಾಕಿ ಇರುವವುಗಳಲ್ಲಿ ರಾಜಿ–ಸಂಧಾನದ ಮೂಲಕ ಇತ್ಯರ್ಥಗೊಳಿಸಬಹುದಾದವುಗಳನ್ನು ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ವಿಲೇವಾರಿ ಮಾಡಲಾಗುವುದು. ಈ ಬಾರಿ 50ಸಾವಿರ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.

ಮೈಸೂರು ನಗರ ಮತ್ತು ತಾಲ್ಲೂಕುಗಳ ನ್ಯಾಯಾಲಯಗಳಲ್ಲಿ ಒಟ್ಟು 1,12,443 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಅವುಗಳಲ್ಲಿ 59,555 ಸಿವಿಲ್ ಹಾಗೂ 52,888 ಕ್ರಿಮಿನಲ್‌ ಪ್ರಕರಣಗಳಾಗಿವೆ. ಅವುಗಳಲ್ಲಿ 38,752 ಇತ್ಯರ್ಥಗೊಳ್ಳುವ ಸಂಭವವಿದೆ ಎಂದರು.

3,954 ಮೋಟಾರು ವಾಹನ ಅಪಘಾತ ಪ್ರಕರಣಗಳು, 2,533 ರಾಜಿಯಾಗಬಹುದಾದ ಕ್ರಿಮಿನಲ್‌ ಪ್ರಕರಣಗಳು, 4,418 ಚೆಕ್‌ ಬೌನ್ಸ್ ಹಾಗೂ 742 ವ್ಯಾಜ್ಯಪೂರ್ವ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗುವುದು. ನಗರಪಾಲಿಕೆಯ ತೆರಿಗೆ, ಕಂದಾಯ ಇಲಾಖೆಗೆ ಸಂಬಂಧಿಸಿದವನ್ನೂ ರಾಜಿ ಮೂಲಕ ಇತ್ಯರ್ಥಪಡಿಸಲು ಯೋಜಿಸಲಾಗಿದೆ. ಅದಾಲತ್‌ಗೆ ವಕೀಲರ ಸಂಘದವರು, ವಿವಿಧ ಇಲಾಖೆಗಳ ಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.

ಈ ವರ್ಷದ ಕೊನೆಯ ಅದಾಲತ್ ಇದಾಗಿದೆ. ಮಾರ್ಚ್‌ನಲ್ಲಿ 54,893, ಜೂನ್‌ನಲ್ಲಿ 75,562 ಹಾಗೂ ಆಗಸ್ಟ್‌ನಲ್ಲಿ ನಡೆದ ಅದಾಲತ್‌ನಲ್ಲಿ 52,548 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಸರ್ಕಾರಕ್ಕೆ ₹ 2 ಕೋಟಿಯಷ್ಟು ದಂಡದ ಮೊತ್ತವು ಪಾವತಿ ಆಗುವಂತೆ ಮಾಡಿದ್ದು ವಿಶೇಷ ಸಾಧನೆ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ದೇವರಾಜ ಭೂತೆ ಮತ್ತು ಮೈಸೂರು ವಕೀಲರ ಸಂಘದ ಕಾರ್ಯದರ್ಶಿ ಉಮೇಶ್ ಇದ್ದರು.