ಮನೆ ಮನರಂಜನೆ ಪುನೀತ್ ರಾಜ್‌ಕುಮಾರ್ ಬಗ್ಗೆ ಭಾವನಾತ್ಮಕವಾಗಿ ಪೋಸ್ಟ್ ಮಾಡಿದ ಟಾಲಿವುಡ್ ನಟ ಪ್ರಭಾಸ್

ಪುನೀತ್ ರಾಜ್‌ಕುಮಾರ್ ಬಗ್ಗೆ ಭಾವನಾತ್ಮಕವಾಗಿ ಪೋಸ್ಟ್ ಮಾಡಿದ ಟಾಲಿವುಡ್ ನಟ ಪ್ರಭಾಸ್

0

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಾಯಕನಾಗಿ ಅಭಿನಯದ ಕೊನೆಯ ಚಿತ್ರ `ಜೇಮ್ಸ್’ ಸಿನಿಮಾದ ಟೀಸರ್ ಫೆ.11 ರಂದು ಬಿಡುಗಡೆಗೊಂಡಿದ್ದು, ಯೂಟ್ಯೂಬ್‌ನಲ್ಲಿ ನಂಬರ್ 1 ಟ್ರೆಂಡಿಂಗ್ ಇದೆ.

ಅದಾಗಲೇ ಯೂಟ್ಯೂಬ್‌ನಲ್ಲಿ ‘ಜೇಮ್ಸ್’ ಟೀಸರ್‌ಗೆ 10 ಮಿಲಿಯನ್‌ಗೂ ಅಧಿಕ ವ್ಯೂಸ್ ಲಭ್ಯವಾಗಿದೆ. ‘ಜೇಮ್ಸ್’ ತೆಲುಗು ಟೀಸರ್‌ಗೆ 14 ಲಕ್ಷಕ್ಕೂ ಅಧಿಕ ವ್ಯೂಸ್ ಸಿಕ್ಕಿದೆ. ‘ಜೇಮ್ಸ್’ ತಮಿಳು, ಮಲಯಾಳಂ ಹಾಗೂ ಹಿಂದಿ ಟೀಸರ್‌ಗೆ ತಲಾ 11 ಲಕ್ಷಕ್ಕೂ ಅಧಿಕ ವ್ಯೂಸ್ ಲಭಿಸಿದೆ.
ಪುನೀತ್ ರಾಜ್‌ಕುಮಾರ್ ಅವರ ಕಡೆಯ ಸಿನಿಮಾ ಇದಾಗಿರೋದ್ರಿಂದ ಅನೇಕ ತಾರೆಯರು ‘ಜೇಮ್ಸ್’ ಚಿತ್ರದ ಟೀಸರ್‌ಅನ್ನು ಶೇರ್ ಮಾಡಿಕೊಂಡಿದ್ದಾರೆ. ಟಾಲಿವುಡ್‌ ನಟ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಪಡೆದಿರುವ ‘ಬಾಹುಬಲಿ’ ಖ್ಯಾತಿಯ ಪ್ರಭಾಸ್ ಕೂಡ ‘ಜೇಮ್ಸ್’ ಚಿತ್ರಕ್ಕೆ ಬೆಂಬಲ ನೀಡಿ ಪುನೀತ್ ರಾಜ್‌ಕುಮಾರ್ ಬಗ್ಗೆ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.
ಪ್ರಭಾಸ್ ಇನ್ಸ್ಟಾಗ್ರಾಮ್ ಪೋಸ್ಟ್:
‘ಜೇಮ್ಸ್’ ಸಿನಿಮಾ ಮೂಲಕ ನಾವು ಒಂದು ಮಾಸ್ಟರ್‌ಪೀಸ್‌ಗೆ ಸಾಕ್ಷಿಯಾಗಲಿದ್ದೇವೆ. ಪುನೀತ್ ರಾಜ್‌ಕುಮಾರ್ ಸರ್ ಅವರನ್ನು ಮೆಚ್ಚುವ ಲಕ್ಷಾಂತರ ಜನರಿಗೆ ‘ಜೇಮ್ಸ್’ ಸಿನಿಮಾ ಯಾವಾಗಲೂ ತುಂಬಾನೇ ವಿಶೇಷವಾಗಿರುತ್ತದೆ. ವಿ ಮಿಸ್ ಯೂ’’ ಎಂದು ಟಾಲಿವುಡ್ ನಟ ಪ್ರಭಾಸ್ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ‘ಜೇಮ್ಸ್’ ಚಿತ್ರದ ‘ಕಿಂಗ್ ಅರೈವ್ಡ್’ ಪೋಸ್ಟರ್‌ಅನ್ನೂ ಪ್ರಭಾಸ್ ಶೇರ್ ಮಾಡಿಕೊಂಡಿದ್ದಾರೆ.  ಅದಾಗಲೇ ಪ್ರಭಾಸ್ ಅವರ ಈ ಪೋಸ್ಟ್‌ಗೆ 3,86,000ಕ್ಕೂ ಅಧಿಕ ಲೈಕ್ಸ್ ಲಭ್ಯವಾಗಿವೆ.
ಬರುವ ಮಾರ್ಚ್ 17 ರಂದು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಉಡುಗೊರೆಯಾಗಿ ‘ಜೇಮ್ಸ್’ ಸಿನಿಮಾ ರಿಲೀಸ್ ಆಗಲಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ‘ಜೇಮ್ಸ್’ ರಿಲೀಸ್ ಆಗಲಿದೆ.

ಪುನೀತ್ ಪಾತ್ರಕ್ಕೆ ಶಿವರಾಜ್ ಕುಮಾರ್ ವಾಯ್ಸ್
‘ಜೇಮ್ಸ್’ ಚಿತ್ರಕ್ಕೆ ಡಬ್ಬಿಂಗ್ ಮಾಡುವ ಮುನ್ನವೇ ಪುನೀತ್ ರಾಜ್‌ಕುಮಾರ್ ಕೊನೆಯುಸಿರೆಳೆದುಬಿಟ್ಟರು. ಹೀಗಾಗಿ, ‘ಜೇಮ್ಸ್’ ಚಿತ್ರದ ಶೂಟಿಂಗ್ ವೇಳೆ ರೆಕಾರ್ಡ್ ಆಗಿದ್ದ ಅಪ್ಪು ಅವರ ಧ್ವನಿಯನ್ನೇ ಚಿತ್ರದಲ್ಲಿ ಉಳಿಸಿಕೊಳ್ಳಲು ಚಿತ್ರತಂಡ ಸಾಕಷ್ಟು ಪ್ರಯತ್ನ ಪಟ್ಟಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ಹೀಗಾಗಿ, ಪುನೀತ್ ರಾಜ್‌ಕುಮಾರ್ ಅವರ ಪಾತ್ರಕ್ಕೆ ಶಿವರಾಜ್ ಕುಮಾರ್ ಡಬ್ಬಿಂಗ್ ಮಾಡಿದ್ದಾರೆ.