ಮನೆ ಕಾನೂನು ಗಲ್ಲುಶಿಕ್ಷೆಗೀಡಾದ ಅಪರಾಧಿಯ ಖುಲಾಸೆಗೊಳಿಸಿದ ಸುಪ್ರೀಂ: ಅನುಭವಿ ವಕೀಲರ ನೇಮಕಕ್ಕೆ ವಿಚಾರಣಾ ನ್ಯಾಯಾಲಯಗಳಿಗೆ ಒತ್ತಾಯ

ಗಲ್ಲುಶಿಕ್ಷೆಗೀಡಾದ ಅಪರಾಧಿಯ ಖುಲಾಸೆಗೊಳಿಸಿದ ಸುಪ್ರೀಂ: ಅನುಭವಿ ವಕೀಲರ ನೇಮಕಕ್ಕೆ ವಿಚಾರಣಾ ನ್ಯಾಯಾಲಯಗಳಿಗೆ ಒತ್ತಾಯ

0

ತರಾತುರಿಯಲ್ಲಿ ತನಿಖೆ ನಡೆದಿದೆ ಮತ್ತು ಸಾಕ್ಷಿಗಳ ಪಾಟಿ ಸವಾಲಿನ ಗುಣಮಟ್ಟ ಕಳಪೆಯಾಗಿದೆ ಎಂಬ ಆಧಾರದಲ್ಲಿ ತನ್ನ ಪತ್ನಿ ಮತ್ತು ನಾಲ್ವರು ಅಪ್ರಾಪ್ತ ಹೆಣ್ಣುಮಕ್ಕಳನ್ನು ಕೊಂದ ಆರೋಪದಲ್ಲಿ ವಿಚಾರಣಾ ನ್ಯಾಯಾಲಯದಿಂದ ಮರಣದಂಡನೆಗೆ ಗುರಿಯಾಗಿದ್ದ ವ್ಯಕ್ತಿಯೊಬ್ಬನನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ಖುಲಾಸೆಗೊಳಿಸಿದೆ.

[ರಮಾನಂದ ಮತ್ತು ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣ].

ವಿಚಾರಣಾ ನ್ಯಾಯಾಲಯಗಳು ಗಂಭೀರ ಅಪರಾಧಗಳನ್ನು ಒಳಗೊಂಡಿರುವ ಪ್ರಕರಣಗಳಲ್ಲಿ ಅನುಭವಿ ವಕೀಲರನ್ನು ಕಾನೂನು ನೆರವು ಸಲಹೆಗಾರರನ್ನಾಗಿ ನೇಮಿಸಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್, ನ್ಯಾಯಮೂರ್ತಿಗಳಾದ ಎಸ್ ರವೀಂದ್ರ ಭಟ್ ಹಾಗೂ ಜೆ ಬಿ ಪರ್ದಿವಾಲಾ ಅವರಿದ್ದ ಪೀಠ  ಒತ್ತಾಯಿಸಿತು.

“ಕಠಿಣ ಶಿಕ್ಷೆ ಒಳಗೊಂಡಿರುವ ಗಂಭೀರ ಅಪರಾಧಗಳಿಗೆ ಸಂಬಂಧಿಸಿದಂತೆ ಈ ಹಿಂದೆ ಅಂತಹ ಪ್ರಕರಣಗಳನ್ನು ನಿಭಾಯಿಸಿದ ಅನುಭವಿ ವಕೀಲರನ್ನು ನೇಮಿಸಿಕೊಳ್ಳಲು  ದೇಶದೆಲ್ಲೆಡೆ ಸೆಷನ್ಸ್ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಿಗೆ ನೆನಪು ಮಾಡಿಕೊಡಲು ಈ ಪ್ರಕರಣ ಅವಕಾಶ ಒದಗಿಸಿದೆ.  ಇಂತಹ ಪ್ರಕರಣಗಳಲ್ಲಿ ವಿಚಾರಣಾ ನ್ಯಾಯಾಲಯಗಳಲ್ಲಿ ಪ್ರಾಕ್ಟೀಸ್ ಮಾಡುತ್ತಿರುವ ಹಿರಿಯ ನ್ಯಾಯವಾದಿಗಳು ಪ್ರತಿವಾದ ಮಂಡಿಸಲು ಅಸಾಧ್ಯವಾದ ಆರೋಪಿಗಳ ಪರವಾಗಿ ತಾವೇ ಖುದ್ದಾಗಿ ಪ್ರಕರಣ ನಡೆಸಬೇಕು. ಇಲ್ಲವೇ ಕಾನೂನು ನೆರವು ಸಮಿತಿಯಿಂದ ಅಮಿಕಸ್ ಕ್ಯೂರಿಯಾಗಿ ನೇಮಕಗೊಂಡ ವಕೀಲರಿಗೆ ಕನಿಷ್ಟ ಪಕ್ಷ ಉತ್ತಮ ಮಾರ್ಗದರ್ಶನವನ್ನಾದರೂ ನೀಡಬೇಕು ಎಂದು ಅಪೇಕ್ಷಿಸಲಾಗುತ್ತಿದೆ”  ಎಂದು ನ್ಯಾಯಾಲಯ ಹೇಳಿದೆ.

ತನ್ನ ಪತ್ನಿ ಮತ್ತು ನಾಲ್ವರು ಮಕ್ಕಳು ನಿದ್ರಿಸುತ್ತಿದ್ದ ಹೊತ್ತಿನಲ್ಲಿ ಅವರನ್ನು ಕೊಂದ ಆರೋಪಿ ರಮಾನಂದ್ ಅಲಿಯಾಸ್ ನಂದಲಾಲ್ ಭಾರ್ತಿಯ ಅಪರಾಧ ಮತ್ತು ಆತನಿಗೆ ವಿಧಿಸಲಾಗಿದ್ದ ಮರಣದಂಡನೆಯನ್ನು ಎತ್ತಿಹಿಡಿದ ಅಲಾಹಾಬಾದ್ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆ ವೇಳೆ ಸರ್ವೋಚ್ಚ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.

ವಿಚಾರಣಾ ನ್ಯಾಯಾಲಯ ಅವಲಂಬಿಸಿದ್ದ ಅಂಶಗಳನ್ನು ವಿಶ್ಲೇಷಿಸಿದ ನಂತರ, ನ್ಯಾಯಾಂಗೇತರ ತಪ್ಪೊಪ್ಪಿಗೆ ಮತ್ತು ಶಸ್ತ್ರಾಸ್ತ್ರಗಳ ಪತ್ತೆಗೆ ಸಂಬಂಧಿಸಿದ ಆರೋಪಗಳನ್ನು ಸಾಬೀತುಪಡಿಸಲು ಸಾಧ್ಯವಾಗಿಲ್ಲ ಎಂದು ಪೀಠ ತೀರ್ಮಾನಿಸಿತು.

ಅಪರಾಧ ಘೋರವಾಗಿದ್ದರೂ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಆರೋಪಿಯನ್ನು ಅಪರಾಧಿ ಎಂದು ನಿರ್ಣಯಿಸಲು ಸಾಧ್ಯವಾಗಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ ಮೇಲ್ಮನವಿ ಪುರಸ್ಕರಿಸಿ ಆತನನ್ನು ಖುಲಾಸೆಗೊಳಿಸಿತು.