ಮನೆ ಅಂತಾರಾಷ್ಟ್ರೀಯ ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾದ ರಿಷಿ ಸುನಕ್

ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾದ ರಿಷಿ ಸುನಕ್

0

ಲಂಡನ್‌(London): ಭಾರತವನ್ನು 200 ವರ್ಷಗಳಿಗೂ ಅಧಿಕ ಕಾಲ ಆಳಿದ ಬ್ರಿಟಿಷ್‌ ಸಾಮ್ರಾಜ್ಯಕ್ಕೆ ಈಗ ಭಾರತ ಮೂಲದವರೇ ಆದ ರಿಷಿ ಸುನಕ್‌ ಅಧಿಪತಿ

ಇನ್ಫೊಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ ಅವರ ಮಗಳು ಅಕ್ಷತಾ ಮೂರ್ತಿ ಅವರ ಗಂಡ ರಿಷಿ ಸುನಕ್‌ ಬ್ರಿಟನ್‌ನ ಆಡಳಿತಾರೂಢ ಕನ್ಸರ್ವೇಟಿವ್ ಪ‍ಕ್ಷದ ನಾಯಕತ್ವವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ, ಆ ದೇಶದ ಪ್ರಧಾನಿ ಹುದ್ದೆಗೆ ಆಯ್ಕೆಯಾದ ಬಿಳಿಯನಲ್ಲದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮಾಜಿ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು ಸ್ಪರ್ಧೆಯಿಂದ ಸೋಮವಾರ ಹಿಂದಕ್ಕೆ ಸರಿದಾಗಲೇ ಪಕ್ಷದ ನಾಯಕತ್ವವು ರಿಷಿ ಅವರ ಕೈಸೇರುತ್ತದೆ ಎಂಬುದು ಬಹುತೇಕ ಖಚಿತವಾಗಿತ್ತು. ಆಗ ಪೆನಿ ಮಾರ್ಡಂಟ್‌ ಮಾತ್ರ ಸ್ಪರ್ಧೆಯಲ್ಲಿದ್ದರು. ನಾಮಪತ್ರಕ್ಕೆ ಅಗತ್ಯವಾಗಿದ್ದ ನೂರು ಸಂಸದರ ಬೆಂಬಲ ಪಡೆಯುವಲ್ಲಿ ಅವರು ವಿಫಲರಾದರು. ಹಾಗಾಗಿ, ಅವರು ಹಿಂದಕ್ಕೆ ಸರಿದರು.

ಬಳಿಕ, ರಿಷಿ ಅವರ ಗೆಲುವನ್ನು ಘೋಷಿಸಲಾಯಿತು.ಬೋರಿಸ್‌ ಜಾನ್ಸನ್‌ ಅವರು ‍ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ, ನಾಯಕತ್ವಕ್ಕೆ ನಡೆದ ಸ್ಪರ್ಧೆಯಲ್ಲಿ ಲಿಜ್‌ ಟ್ರಸ್‌ ಎದುರು ರಿಷಿ ಸೋತಿದ್ದರು. ಆದರೆ, ಪ್ರಧಾನಿ ಹುದ್ದೆಗೇರಿದ 44 ದಿನಗಳಲ್ಲಿಯೇ ಟ್ರಸ್ ಅವರು ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರಿಂದ ಪಕ್ಷದ ನಾಯಕ ಸ್ಥಾನ ಮತ್ತು ಪ್ರಧಾನಿ ಹುದ್ದೆಗೆ ವ್ಯಕ್ತಿಯೊಬ್ಬರನ್ನು ಆಯ್ಕೆ ಮಾಡಬೇಕಿತ್ತು.

ಬೋರಿಸ್‌ ಜಾನ್ಸನ್‌ ಅವರ ಸಚಿವ ಸಂಪುಟದಲ್ಲಿ ರಿಷಿ ಅವರು ಹಣಕಾಸು ಸಚಿವರಾಗಿದ್ದರು. ರಿಷಿ ಅವರ ಬಂಡಾಯವೇ ಬೋರಿಸ್‌ ಅವರು ಹುದ್ದೆ ಕಳೆದುಕೊಳ್ಳುವುದಕ್ಕೂ ಕಾರಣವಾಗಿತ್ತು.

ಅಳಿಯ ರಿಷಿ ಸುನಕ್ ಬಗ್ಗೆ ಹೆಮ್ಮೆಯಾಗುತ್ತಿದೆ: ನಾರಾಯಣ ಮೂರ್ತಿ

ಬ್ರಿಟನ್‌ ಪ್ರಧಾನಿ ಹುದ್ದೆಗೆ ಏರಿದ ರಿಷಿ ಸುನಕ್‌ ಅವರ ಬಗ್ಗೆ ಹೆಮ್ಮೆಯಾಗುತ್ತಿದೆ ಎಂದು ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಅಳಿಯನಿಗೆ ಉನ್ನತ ಸ್ಥಾನಕ್ಕೇರಿ ಇತಿಹಾಸ ಸಷ್ಟಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿ, ಶುಭ ಹಾರೈಸಿದ್ದಾರೆ. ಬ್ರಿಟನ್‌ ಜನತೆಗೆ ಉತ್ತಮವಾದುದ್ದನ್ನೇ ಮಾಡುತ್ತಾರೆ ಎಂಬ ಭರವಸೆ ನಮಗಿದೆ ಎಂದು ನಾರಾಯಣಮೂರ್ತಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪಕ್ಷದ ನಾಯಕತ್ವ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಘೋಷಿಸಿದ್ದ ರಿಷಿ ಅವರಿಗೆ ನೂರು ಸಂಸದರ ಬೆಂಬಲ ಶುಕ್ರವಾರವೇ ದೊರೆತಿತ್ತು. ಈಗ ಅವರಿಗೆ ಸುಮಾರು 200 ಸಂಸದರ ಬೆಂಬಲ ಲಭಿಸಿದೆ.

ಬ್ರಿಟನ್‌ನ ಸುಮಾರು 2 ಶತಮಾನಗಳ ಇತಿಹಾಸದಲ್ಲಿ, 42 ವರ್ಷದ ರಿಷಿ ಅವರು ಅತ್ಯಂತ ಕಿರಿಯ ಪ್ರಧಾನಿ ಎನಿಸಿಕೊಳ್ಳಲಿದ್ದಾರೆ. ರಿಷಿ ತಕ್ಷಣವೇ ಪ್ರಧಾನಿ ಹುದ್ದೆ ವಹಿಸಿಕೊಳ್ಳುವುದು ಸಾಧ್ಯವಿಲ್ಲ.

ಮೊದಲನೆಯದಾಗಿ, ಟ್ರಸ್‌ ಅವರು ಹುದ್ದೆಗೆ ರಾಜೀನಾಮೆ ಕೊಡಬೇಕು ಮತ್ತು ಅದು ಅಂಗೀಕಾರವಾಗಬೇಕು.ಅಧಿಕಾರ ಹಸ್ತಾಂತರ ಯಾವಾಗ ನಡೆಯಬೇಕು ಮತ್ತು ಕಾರ್ಯಕ್ರಮ ಹೇಗಿರಬೇಕು ಎಂಬುದರ ಕುರಿತು ಚರ್ಚೆ ಆರಂಭವಾಗಿದೆ ಎಂದು ಟ್ರಸ್‌ ಅವರ ವಕ್ತಾರರು ತಿಳಿಸಿದ್ದಾರೆ.