ಮನೆ ಸುದ್ದಿ ಜಾಲ ಎನ್’ಟಿಎಂ ಶಾಲೆ ಪುನರ್ ನಿರ್ಮಾಣಕ್ಕೆ ಒತ್ತಾಯಿಸಿ ಪ್ರತಿಭಟನೆ

ಎನ್’ಟಿಎಂ ಶಾಲೆ ಪುನರ್ ನಿರ್ಮಾಣಕ್ಕೆ ಒತ್ತಾಯಿಸಿ ಪ್ರತಿಭಟನೆ

0

ಮೈಸೂರು(Mysuru): ಎನ್‌ಟಿಎಂ ಶಾಲೆಯನ್ನು ಪುನರ್‌ ನಿರ್ಮಿಸುವುದಾಗಿ ರಾಮಕೃಷ್ಣ ಆಶ್ರಮದವರು ಮಾತು ನೀಡಿದ್ದು, ಅದರಂತೆ ನಡೆದುಕೊಳ್ಳಬೇಕು ಎಂದು ಆಗ್ರಹಿಸಿ ಮಹಾರಾಣಿ ಶಾಲೆ ಉಳಿಸಿ ಹೋರಾಟ ಒಕ್ಕೂಟದವರು ಜೆಎಲ್‌ಬಿ ರಸ್ತೆಯ ಎಂಜಿನಿಯರ್‌ಗಳ ಸಂಸ್ಥೆ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಮುಖಂಡ ಪುರುಷೋತ್ತಮ್‌ ಮಾತನಾಡಿ, ಮಹಾರಾಣಿ ಕೆಂಪನಂಜಮ್ಮಣ್ಣಿ ಅವರ ದೂರದೃಷ್ಟಿಯ ಫಲವಾಗಿ ಸ್ಥಾಪನೆಯಾದ ಕರ್ನಾಟಕದ ಪ್ರಥಮ ಮಹಿಳಾ ಶಾಲೆಯನ್ನು ಕೆಡವಿರುವ ರಾಮಕೃಷ್ಣ ಆಶ್ರಮವು ವಿವೇಕಾನಂದ ಸ್ಮಾರಕ ನಿರ್ಮಾಣಕ್ಕಷ್ಟೇ ಗಮನಹರಿಸುತ್ತಿದೆ ಎಂದು ಆರೋಪಿಸಿದರು.

ಜೆಎಸ್‌ಎಸ್‌ ಮಠಾಧೀಶರ ಸಲಹೆಯಂತೆ ಸಂಸದ ವಿ.ಶ್ರೀನಿವಾಸ್‌ ಪ್ರಸಾದ್‌ ಮಧ್ಯಸ್ಥಿಕೆ ಸಭೆಯಲ್ಲಿ ರಾಮಕೃಷ್ಣ ಆಶ್ರಮದವರು ಶಾಲೆಯ ಜಾಗದಲ್ಲಿ ಶೇ.50ರಷ್ಟು ಸ್ಮಾರಕಕ್ಕೆ ಮತ್ತು ಉಳಿದ ಜಾಗ ಶಾಲೆಯ ಪುನರ್‌ನಿರ್ಮಾಣಕ್ಕೆ ಬಳಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ಇಂದು ಆ ಮಾತಿಗೆ ತಪ್ಪುವಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.

ರಾಮಕೃಷ್ಣ ಆಶ್ರಮಕ್ಕೆ ರಾಜ್ಯ ಸರ್ಕಾರವು ಈ ಶಾಲೆಯನ್ನು 9 ವರ್ಷದ ಹಿಂದೆ ಪರಭಾರೆ ಮಾಡಿದ್ದು, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ ಆರಂಭವಾದ ಈ ಶಾಲೆಯನ್ನು ಉಳಿಸಿಕೊಂಡು ಹೋಗುವ ಯಾವ ಬದ್ಧತೆಯನ್ನೂ ತೋರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಕ್ಕೂಟದ ಬೆಳ್ಳಾಲೆ ಬೆಟ್ಟೇಗೌಡ ಮಾತನಾಡಿ, ನಮ್ಮ ಹೋರಾಟದ ಪ್ರಯತ್ನವನ್ನೂ ಮೀರಿ ರಾತ್ರೋರಾತ್ರಿ ರಾಮಕೃಷ್ಣ ಆಶ್ರಮದವರು ಶಾಲಾ ಕಟ್ಟಡವನ್ನು ಕೆಡವಿದರು ಎಂದು ದೂರಿದರು.

ಒಕ್ಕೂಟದ ಸಂಚಾಲಕ ಎಂ.ಮೋಹನ್‌ ಕುಮಾರ್‌ ಮಾತನಾಡಿ, ‘ಶತಮಾನ ಕಂಡಂತಹ ಈ ಶಾಲೆಯನ್ನು ಉಳಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವ ಸರ್ಕಾರವು ಭಾಷೆಯ ಕುರಿತು ಅಭಿಮಾನ ಹೊಂದಿರಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಕನ್ನಡವನ್ನು ಕಡ್ಡಾಯಗೊಳಿಸಲು ಹೊರಟಿರುವ ಸರ್ಕಾರದ ಪ್ರಯತ್ನವು ಭ್ರಮನಿರಸನ ಕಾರ್ಯವಾಗಿದೆ. ಒಂದೊಮ್ಮೆ ಅದಕ್ಕೆ ಪ್ರಾಮಾಣಿಕ ಉದ್ದೇಶವಿದ್ದರೆ ಇಂತಹ ಸರ್ಕಾರಿ ಶಾಲೆಗಳನ್ನು ಉಳಿಸಬೇಕು. ಸರ್ಕಾರಿ ಅಧಿಕಾರಿ ಮತ್ತು ರಾಜಕಾರಣಿಗಳ ಮಕ್ಕಳು ಕಡ್ಡಾಯವಾಗಿ ಸರ್ಕಾರಿ ಶಾಲೆಯಲ್ಲಿಯೇ ಕಲಿಯುವಂತೆ ಕ್ರಮ ಕೈಗೊಳ್ಳಬೇಕು ಎಂದರು.

ಟಿ.ವಿ.ರವಿಗೌಡ, ಬಿ. ಮಾದೇವ್‌, ಗೋವಿಂದ್‌ ರಾಜ್‌, ಎಲ್‌ಐಸಿ ಸಿದ್ದಪ್ಪ, ಉಮೇಶ್‌, ರಾಜ್‌ ಕಿಶೋರ್‌, ಪ್ರಕಾಶ್‌, ಎಚ್‌.ಸ್ವಾಮಿ ಇದ್ದರು.