ಮನೆ ಕ್ರೀಡೆ ನಾನು ಸಾರ್ವಕಾಲಿಕ ಶ್ರೇಷ್ಠ ಅಲ್ಲ: ವಿರಾಟ್‌ ಕೊಹ್ಲಿ

ನಾನು ಸಾರ್ವಕಾಲಿಕ ಶ್ರೇಷ್ಠ ಅಲ್ಲ: ವಿರಾಟ್‌ ಕೊಹ್ಲಿ

0

ನನ್ನನ್ನು ನಾನು ಕ್ರಿಕೆಟ್‌ನ ‘ಸಾರ್ವಕಾಲಿಕ ಶ್ರೇಷ್ಠ’ ಎಂದು ಪರಿಗಣಿಸುವುದಿಲ್ಲ. ನನ್ನ ಪ್ರಕಾರ ಇಬ್ಬರು ಮಾತ್ರವೇ ಹಾಗೆ ಕರೆಸಿಕೊಳ್ಳುವ ಅರ್ಹತೆ ಹೊಂದಿದ್ದಾರೆ. ಅವರು ಸಚಿನ್‌ ತೆಂಡೂಲ್ಕರ್‌ ಮತ್ತು ವಿವಿಯನ್‌ ರಿಚರ್ಡ್ಸ್‌’ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕರೂ ಆಗಿರುವ ಕೊಹ್ಲಿ ತಿಳಿಸಿದ್ದಾರೆ.

‘ಸಾರ್ವಕಾಲಿಕ ಶ್ರೇಷ್ಠ’ ಆಟಗಾರರಲ್ಲಿ ಒಬ್ಬರು ಎಂದು ಕೆಲವು ಹಿರಿಯ ಕ್ರಿಕೆಟಿಗರು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿಯೂ ಈ ಚರ್ಚೆ ನಿರಂತರವಾಗಿದೆ. ಆದರೆ, ಆ ಮಾತನ್ನು ಒಪ್ಪಲು ಸ್ವತಃ ಕೊಹ್ಲಿ ನಿರಾಕರಿಸಿದ್ದಾರೆ.

ತಮ್ಮ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿರುವ ಚರ್ಚೆ ಕುರಿತು ಕ್ರೀಡಾವಾಹಿನಿ ‘ಸ್ಟಾರ್‌ಸ್ಪೋರ್ಟ್ಸ್‌’ ಕಾರ್ಯಕ್ರಮದಲ್ಲಿ ಈ ಕುರಿತು ಮಾತನಾಡಿದ್ದಾರೆ.

2008ರಲ್ಲಿ ಭಾರತ ತಂಡದ ಪರ ಪದಾರ್ಪಣೆ ಮಾಡಿದ ವಿರಾಟ್‌, 2012ರ ವರೆಗೆ ಸಚಿನ್‌ ಜೊತೆ ಆಡಿದ್ದಾರೆ. ಭಾರತ 2011ರಲ್ಲಿ ಏಕದಿನ ವಿಶ್ವಕಪ್‌ ಗೆದ್ದ ತಂಡದಲ್ಲಿಯೂ ಇಬ್ಬರು ಒಟ್ಟಾಗಿ ಆಡಿದ್ದರು.

ರಿಚರ್ಡ್ಸ್‌ ವೆಸ್ಟ್‌ ಇಂಡೀಸ್‌ ತಂಡದ ಪರ 121 ಟೆಸ್ಟ್‌ ಪಂದ್ಯಗಳ 182 ಇನಿಂಗ್ಸ್‌ಗಳಲ್ಲಿ ಮತ್ತು 187 ಏಕದಿನ ಪಂದ್ಯಗಳ 167 ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿದ್ದಾರೆ. ಈ ಎರಡೂ ಮಾದರಿಯಲ್ಲಿ ಅವರು ಕ್ರಮವಾಗಿ 50.24ರ ಸರಾಸರಿಯಲ್ಲಿ 8,540 ರನ್‌ ಮತ್ತು 47ರ ಸರಾಸರಿಯಲ್ಲಿ 6,721 ರನ್ ಕಲೆಹಾಕಿದ್ದಾರೆ. ಒಟ್ಟು 33 ಶತಕಗಳು ಅವರ ಬ್ಯಾಟ್‌ನಿಂದ ಬಂದಿವೆ.ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬರೋಬ್ಬರಿ 100 ಶತಕ ಸಿಡಿಸಿದ ಏಕೈಕ ಕ್ರಿಕೆಟಿಗ ಎನಿಸಿರುವ ಸಚಿನ್‌, ಭಾರತ ಪರ 200 ಟೆಸ್ಟ್‌ ಪಂದ್ಯಗಳ 329 ಇನಿಂಗ್ಸ್‌ಗಳಲ್ಲಿ ಮತ್ತು 463 ಏಕದಿನ ಪಂದ್ಯಗಳ 452 ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ 53.79ರ ಸರಾಸರಿಯಲ್ಲಿ 15,921 ರನ್‌ ಮತ್ತು ಏಕದಿನ ಕ್ರಿಕೆಟ್‌ನಲ್ಲಿ 44.83ರ ಸರಾಸರಿಯಲ್ಲಿ 18,426 ರನ್ ಕಲೆಹಾಕಿದ್ದಾರೆ. ಆಡಿರುವ ಒಂದೇ ಒಂದು ಟಿ20 ಪಂದ್ಯದಲ್ಲಿ 10 ರನ್ ಗಳಿಸಿ ಔಟಾಗಿದ್ದಾರೆ.

ಸದ್ಯ ಆಡುತ್ತಿರುವ ಕ್ರಿಕೆಟಿಗರ ಪೈಕಿ ಅತಿಹೆಚ್ಚು ಶತಕ, ಅತಿಹೆಚ್ಚು ರನ್‌ ಗಳಿಸಿರುವ ಆಟಗಾರ ಎಂಬ ಖ್ಯಾತಿ ವಿರಾಟ್ ಕೊಹ್ಲಿಯದ್ದು. ಅವರು ಈ ವರೆಗೆ 102 ಟೆಸ್ಟ್‌ ಪಂದ್ಯಗಳ 173 ಇನಿಂಗ್ಸ್‌ಗಳಲ್ಲಿ ಬ್ಯಾಟಿಂಗ್‌ ಮಾಡಿದ್ದು, 49.53ರ ಸರಾಸರಿಯಲ್ಲಿ 8,074 ರನ್ ಕಲೆಹಾಕಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ 262 ಪಂದ್ಯಗಳ 253 ಇನಿಂಗ್ಸ್‌ಗಳಿಂದ 57.68ರ ಸರಾಸರಿಯಲ್ಲಿ 12,344 ರನ್‌ ಗಳಿಸಿದ್ದಾರೆ. ಚುಟುಕು ಕ್ರಿಕೆಟ್‌ನಲ್ಲಿ ಹೆಚ್ಚು ರನ್ ಕಲೆಹಾಕಿದ ಆಟಗಾರ ಎನಿಸಿರುವ ಕೊಹ್ಲಿ, 111 ಪಂದ್ಯಗಳ 103 ಇನಿಂಗ್ಸ್‌ಗಳಿಂದ 3,856 ರನ್‌ ಗಳಿಸಿದ್ದಾರೆ. ಈ ಮಾದರಿಯಲ್ಲಿ ಅವರ ಬ್ಯಾಟಿಂಗ್ ಸರಾಸರಿ 52.82. ಮೂರೂ ಮಾದರಿಯಿಂದ ಒಟ್ಟು 71 ಶತಕ ಸಿಡಿಸಿದ್ದಾರೆ.