ಮನೆ ಆರೋಗ್ಯ ಕಿಡ್ನಿ ಸ್ಟೋನ್‌ ಸಮಸ್ಯೆ ನಿವಾರಣೆಗೆ ನಿಂಬೆ ಹಣ್ಣು ಅತ್ಯುತ್ತಮ ಔಷಧ

ಕಿಡ್ನಿ ಸ್ಟೋನ್‌ ಸಮಸ್ಯೆ ನಿವಾರಣೆಗೆ ನಿಂಬೆ ಹಣ್ಣು ಅತ್ಯುತ್ತಮ ಔಷಧ

0

ಕಿಡ್ನಿಸ್ಟೋನ್‌ನ ಸಮಸ್ಯೆಯನ್ನು ಹೋಗಲಾಡಿಸಲು ಹಲವಾರು ಮನೆ ಮದ್ದುಗಳ ಬಗ್ಗೆ ನೀವು ಕೇಳಿರುವಿರಿ. ನಿಂಬೆ ಹಣ್ಣನ್ನು ಕಿಡ್ನಿ ಸ್ಟೋನ್‌ನ ಸಮಸ್ಯೆಗೆ ಅತ್ಯುತ್ತಮ ಔಷಧವೆಂದು ಪರಿಗಣಿಸಲಾಗಿದೆ. ನಿಂಬೆಹಣ್ಣು ಕಿಡ್ನಿ ಸ್ಟೋನ್‌ ನಿವಾರಿಸಲು ಹೇಗೆ ಸಹಕಾರಿ ಎಂಬುದರ ಮಾಹಿತಿ ಇಲ್ಲಿದೆ. ಜೊತೆಗೆ ಕಿಡ್ನಿ ಸ್ಟೋನ್‌ ಸಮಸ್ಯೆ ಹೋಗಲಾಡಿಸಲು ಇತರೆ ಮನೆಮದ್ದುಗಳ ಬಗ್ಗೆಯೂ ತಿಳಿಸಲಿದ್ದೇವೆ.

ಮೂತ್ರಪಿಂಡದಲ್ಲಿ ಕಲ್ಲು ಉಂಟಾಗಲು ಹಲವು ಕಾರಣಗಳಿವೆ. ಅವುಗಳಲ್ಲಿ ಕಡಿಮೆ ನೀರು ಕುಡಿಯುವ ಅಭ್ಯಾಸ, ಅನುವಂಶಿಕ ಕಲ್ಲುಗಳು, ಆಗಾಗ್ಗೆ ಮೂತ್ರನಾಳದ ಸೋಂಕು, ವಿಟಮಿನ್ ಸಿ ಅಥವಾ ಕ್ಯಾಲ್ಸಿಯಂ ಹೊಂದಿರುವ ಔಷಧಿಗಳ ಅತಿಯಾದ ಸೇವನೆ, ದೀರ್ಘಕಾಲದ ಬೆಡ್ ರೆಸ್ಟ್, ಹೈಪರ್ಪ್ಯಾರಾಥೈರಾಯ್ಡಿಸಮ್ ಇವುಗಳು ಸಾಮಾನ್ಯ ಕಾರಣಗಳಾಗಿವೆ. ಇದಲ್ಲದೆ, ಬೊಜ್ಜು ಹೊಂದಿರುವ ಜನರು ಮತ್ತು ಕರುಳಿನ ಶಸ್ತ್ರಚಿಕಿತ್ಸೆಗೆ ಒಳಗಾದ ರೋಗಿಗಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ.

ನಿಂಬೆಹಣ್ಣಿನಲ್ಲಿ ವಿಟಮಿನ್ ಸಿ , ಕ್ಯಾಲ್ಸಿಯಂ, ಪೊಟ್ಯಾಶಿಯಂ, ಫೈಬರ್ ನಂತಹ ಪೋಷಕಾಂಶಗಳೂ ಇವೆ. ಇದು ಕ್ಯಾನ್ಸರ್ ವಿರೋಧಿ, ಉರಿಯೂತದ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳಿಂದ ಸಮೃದ್ಧವಾಗಿದೆ. ಇದರಲ್ಲಿರುವ ಸಿಟ್ರೇಟ್ ಗುಣವು ಮೂತ್ರಪಿಂಡದಲ್ಲಿ ಕಲ್ಲುಗಳ ಬೆಳವಣಿಗೆಯನ್ನು ತಡೆಯುತ್ತದೆ. ಇದು ಹೊಟ್ಟೆಯ ಶಾಖವನ್ನು ಶಮನಗೊಳಿಸುವುದಲ್ಲದೆ, ಇದರಲ್ಲಿರುವ ಔಷಧೀಯ ಗುಣಗಳು ಮೂತ್ರಪಿಂಡದ ಕಲ್ಲುಗಳನ್ನು ಕರಗಿಸಲು ಸಹ ಕೆಲಸ ಮಾಡುತ್ತದೆ.

ಆಪಲ್ ಸೈಡರ್‌ ವಿನೆಗರ್‌ನಲ್ಲಿರುವ ಅಸಿಟಿಕ್ ಆಮ್ಲವು ಮೂತ್ರಪಿಂಡದಲ್ಲಿರುವ ಕಲ್ಲುಗಳನ್ನು ಕರಗಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ಕಲ್ಲಿನ ಗಾತ್ರವು ಚಿಕ್ಕದಾಗುತ್ತದೆ ಮತ್ತು ಮೂತ್ರದೊಂದಿಗೆ ದೇಹದಿಂದ ಹೊರಹೋಗುತ್ತದೆ. ಆಪಲ್‌ ಸೈಡರ್‌ ವಿನೇಗರ್‌ನ್ನು ನಿಂಬೆರಸದೊಂದಿಗೆ ಬೆರೆಸಿ ಕುಡಿದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಈ ಮಿಶ್ರಣವನ್ನು ತಯಾರಿಸಲು, 1 ಟೀಚಮಚ ನಿಂಬೆ ರಸ ಮತ್ತು 1 ಟೀ ಚಮಚ ಆಪಲ್ ಸೈಡರ್ ವಿನೆಗರ್ ಮಿಕ್ಸ್‌ ಮಾಡಿ ದಿನಕ್ಕೆ 3 ರಿಂದ 4 ಬಾರಿ ಸೇವಿಸಿ.

ಯಾವುದೇ ಔಷಧಿ ಮತ್ತು ಶಸ್ತ್ರಚಿಕಿತ್ಸೆಯಿಲ್ಲದೆ ನೀವು ಮೂತ್ರಪಿಂಡದ ಕಲ್ಲನ್ನು ತೊಡೆದುಹಾಕಲು ಬಯಸಿದರೆ, ನಿಂಬೆ, ಗೋಧಿ ಹುಲ್ಲು ಮತ್ತು ತುಳಸಿಯನ್ನು ಮಿಕ್ಸ್‌ ಮಾಡಿ ಬಳಸಬಹುದು. ಔಷಧೀಯ ಪ್ರಯೋಜನಗಳಿಗಾಗಿ, 1 ಟೀಚಮಚ ನಿಂಬೆರಸ ಮತ್ತು ತುಳಸಿ ರಸವನ್ನು 1 ಗ್ಲಾಸ್ ಗೋಧಿ ಹುಲ್ಲಿನ ರಸದೊಂದಿಗೆ ಮಿಶ್ರಣ ಮಾಡಿ ಕುಡಿಯಿರಿ. ಈ ಮಿಶ್ರಣವನ್ನು ದಿನಕ್ಕೆ 2-3 ಬಾರಿ ನಿಯಮಿತವಾಗಿ ಕುಡಿಯುವುದರಿಂದ ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.

ಆಲಿವ್ ಎಣ್ಣೆಯು ಕಲ್ಲುಗಳಿಂದ ಮೂತ್ರಪಿಂಡದ ಹಾನಿಯನ್ನು ತಡೆಗಟ್ಟುವಲ್ಲಿ ಸಹಾಯಕವಾಗಿದೆ. ಹಾಗಾಗಿ ಆಲಿವ್‌ ಎಣ್ಣೆಯೊಂದಿಗೆ ನಿಂಬೆ ರಸವನ್ನು ಬೆರೆಸಿ ಕುಡಿಯಲು ಸೂಚಿಸಲಾಗುತ್ತದೆ. ಮೂತ್ರಪಿಂಡದ ಕಲ್ಲುಗಳಿಂದ ಉಂಟಾಗುವ ನೋವನ್ನು ನಿವಾರಿಸಲು ಈ ಮಿಶ್ರಣವು ಸಹಕಾರಿಯಾಗಿದೆ. ಇದನ್ನು ತಯಾರಿಸಲು, ಒಂದು ಲೋಟ ನೀರಿನಲ್ಲಿ 1 ಚಮಚ ನಿಂಬೆ ರಸ ಮತ್ತು 1 ಚಮಚ ಆಲಿವ್ ಎಣ್ಣೆಯನ್ನು ಮಿಕ್ಸ್‌ ಮಾಡಿ ದಿನಕ್ಕೆ 2ರಿಂದ 3 ಬಾರಿ ಸೇವಿಸಿ. ಈ ಮನೆಮದ್ದುಗಳು ಔಷಧಿಗೆ ಪರ್ಯಾಯವಲ್ಲ, ಇವುಗಳನ್ನು ಸೇವಿಸುವ ಮೊದಲು ವೈದ್ಯರ ಸಲಹೆಯನ್ನು ಪಡೆಯುವುದು ಉತ್ತಮ.

ಹಿಂದಿನ ಲೇಖನಬೆಂಗಳೂರಿಗೆ ಆಗಮಿಸಿದ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು
ಮುಂದಿನ ಲೇಖನನ್ಯಾಯಾಧೀಶರ ಮಾತು ಕೇಳಿ ವಿಚ್ಚೇದನ ನಿರ್ಧಾರದಿಂದ ದೂರ ಸರಿದ ದಂಪತಿ